Site icon Vistara News

Viral Video| ಹಳೇ ಬಜಾಜ್​ ಸ್ಕೂಟರ್​​ನ್ನು ಹೀಗೂ ಬಳಸಿಕೊಳ್ಳಬಹುದಾ? ಕಟ್ಟಡ ನಿರ್ಮಾಣ ಕಾರ್ಮಿಕರ ಭರ್ಜರಿ ಐಡಿಯಾ ನೋಡಿ!

Viral Video Old Bajaj Scooter Turn into Electric Pully

ಹೊಸ ಹೊಸ ತಂತ್ರಜ್ಞಾನಗಳು ಮಾರುಕಟ್ಟೆಗೆ ಬಂದಾಗ ನಾವು ಅಚ್ಚರಿ ವ್ಯಕ್ತಪಡಿಸುತ್ತ, ಅದನ್ನು ನಾವೂ ಅಳವಡಿಸಿಕೊಳ್ಳಲು ಮುಂದಾಗುತ್ತೇವೆ. ಆದರೆ ಹೀಗೆ ಮಾರುಕಟ್ಟೆಗೆ ಬಾರದೆ ಹೋಗುವ ಟೆಕ್ನಾಲಜಿಗಳೂ ಅದೆಷ್ಟೋ ಇವೆ. ಯಾರೋ ಒಬ್ಬರು, ಯಾವುದೋ ಒಂದು ಕಾರ್ಮಿಕ ತಂಡ ತಮ್ಮ ಕೆಲಸ ಸರಳವಾಗಲಿ ಎಂದು ಅವರೇ ಅನ್ವೇಷಣೆ ಮಾಡಿಕೊಳ್ಳುವ ಟೆಕ್ನಾಲಜಿಗಳು ಎಷ್ಟೋ ಸಲ ಉಳಿದವರಿಗೆ ಪರಿಚಿತ ಆಗುವುದೇ ಇಲ್ಲ. ಆದರೂ ಇದು ಸೋಷಿಯಲ್​ ಮೀಡಿಯಾ ಕಾಲವಾಗಿದ್ದರಿಂದ ಅಲ್ಲೊಂದು-ಇಲ್ಲೊಂದು ವಿಡಿಯೊಗಳು ವೈರಲ್​ ಆಗಿ, ನಮ್ಮಲ್ಲಿ ಅಚ್ಚರಿ ಮೂಡಿಸುತ್ತವೆ.

ವಿಷಯಕ್ಕೆ ಬರೋಣ, ನೀವು ಹೇಳಿ… ಒಂದು ಬಜಾಜ್ ಚೇತಕ್​ ಸ್ಕೂಟರ್​​ನ್ನು ಹೇಗೆಲ್ಲ ಬಳಸಿಕೊಳ್ಳಬಹುದು? ಹಳೇ ಕಾಲದ ಈ ಸ್ಕೂಟರ್​ ಈಗ ಬಳಕೆ ಕಡಿಮೆ ಆಗಿದೆ ಅಂತಿಟ್ಟುಕೊಂಡರೂ, ಅದನ್ನು ಓಡಿಸಬಹುದು, ಪೂರ್ತಿ ಜಖಂ ಆಗಿದ್ದರೆ ಅದರ ಭಾಗಗಳನ್ನೆಲ್ಲ ತೆಗೆದು ಗುಜರಿಗೆ ಹಾಕಬಹುದು. ಅದ್ಯಾವುದೋ ಗೋಡೆ ಬುಡದಲ್ಲೋ, ಮರದ ಕೆಳಗೋ ಒತ್ತಿಡಬಹುದು. ಆದರೆ ಈ ವಿಡಿಯೊ ನೋಡಿ, ಸ್ಕೂಟರ್​​ನ್ನು ಹೀಗೂ ಬಳಸಿಕೊಳ್ಳಬಹುದೇ ಎಂಬ ಪ್ರಶ್ನೆ ಮೂಡದೆ ನಿಮ್ಮಲ್ಲೂ ಮೂಡದೆ ಇರದು.

ಅಲ್ಲೊಂದು ಕಟ್ಟಡ ಕಾಮಗಾರಿ ನಡೆಯುತ್ತಿದೆ. ಮೂರನೇ ಫ್ಲೋರ್​​ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೀಗೆ ಕಟ್ಟಡಗಳ ಮೇಲ್ಭಾಗದಲ್ಲಿ ಕೆಲಸವಿದ್ದಾಗ, ಇಟ್ಟಿಗೆ, ಸಿಮೆಂಟ್​​ಗಳನ್ನು ಮೇಲ್ಭಾಗಕ್ಕೆ ಸಾಗಿಸಲು ಯಂತ್ರಗಳನ್ನು ಬಳಸಲಾಗುತ್ತದೆ. ಹಗ್ಗದ ಒಂದು ಭಾಗದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಇಟ್ಟು, ಇನ್ನೊಂದು ಭಾಗವನ್ನು ಕಾರ್ಮಿಕರು ಹಿಡಿದುಕೊಂಡು, ಒಂದು ರಾಟೆಯ ಸಹಾಯದಿಂದ ಮೇಲೆತ್ತುವುದನ್ನು ನಾವು ನೋಡಿದ್ದೇವೆ. ಆದರೆ ಈ ಕಾರ್ಮಿಕರು ಬುದ್ಧಿ ಉಪಯೋಗಿಸಿ, ಶ್ರಮ ಕಡಿಮೆ ಮಾಡಿಕೊಂಡಿದ್ದಾರೆ. ‘ಕಾರ್ಮಿಕನೊಬ್ಬ ಸ್ಕೂಟರ್​ ಮೇಲೆ ಕುಳಿತಿದ್ದಾನೆ. ಆ ಬಜಾಜ್​ ಸ್ಕೂಟರ್​ಗೆ ಹಿಂಬದಿಯ ಗಾಲಿಯಿಲ್ಲ. ಆ ಸ್ಕೂಟರ್​​ನ ಅಡಿಭಾಗದಲ್ಲಿ ಮತ್ತು ಪಕ್ಕದಲ್ಲಿ ಎರಡು ರಾಟೆಗಳನ್ನು ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಹಗ್ಗವನ್ನೂ ಕಟ್ಟಿದ್ದಾರೆ. ಕಾರ್ಮಿಕ ಸ್ಕೂಟರ್​​ನ್ನು ಸ್ಟಾರ್ಟ್​ ಮಾಡಿಕೊಂಡು, ಎಕ್ಸಿಲೇಟರ್​ ಕೊಡುವ ಮೂಲಕ ಆ ರಾಟೆ ಕಾರ್ಯ ನಿರ್ವಹಿಸುವಂತೆ ಮಾಡುತ್ತಿದ್ದಾನೆ. ಹೀಗೆ ಆತ ಎಕ್ಸಿಲೇಟರ್ ಜಾಸ್ತಿ ಕೊಟ್ಟಾಗ ಹಗ್ಗದ ಒಂದು ತುದಿಗೆ ಕಟ್ಟಲಾಗಿರುವ ಇಟ್ಟಿಗೆ/ಸಿಮೆಂಟ್​ ತುಂಬಿದ ಚೀಲ ಮೇಲ್ಭಾಗಕ್ಕೆ ಹೋಗುವುದನ್ನು ವಿಡಿಯೊದಲ್ಲಿ ಕಾಣಬಹುದು.

ಈ ಭರ್ಜರಿ ಐಡಿಯಾ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. Pankaj Parekh ಎಂಬುವರು ಶೇರ್​ ಮಾಡಿಕೊಂಡ ವಿಡಿಯೊಕ್ಕೆ ಈಗಾಗಲೇ 25 ಸಾವಿರ ವೀಕ್ಷಣೆಗಳು ಬಂದಿವೆ. 580ಕ್ಕೂ ಹೆಚ್ಚು ಲೈಕ್ಸ್​ ಬಂದಿವೆ. ಇದು ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಚಿತ್ರೀಕರಿಸಲಾದ ವಿಡಿಯೊ ಎಂದು ನೆಟ್ಟಿಗರೇ ಒಬ್ಬರು ತಿಳಿಸಿದ್ದಾರೆ. ‘ಭಾರತೀಯರಿಗೆ ಇಂಜಿನಿಯರಿಂಗ್​ ಮನಸ್ಥಿತಿ ಹುಟ್ಟುತ್ತಲೇ ಬಂದಿರುತ್ತದೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video| ಮದುವೆಗೆ ಅತಿಥಿಗಳನ್ನೆಲ್ಲ ಕರೆದುಕೊಂಡು ಹೋಗಲು ವಿಮಾನವನ್ನೇ ಬುಕ್​ ಮಾಡಿದ ಕುಟುಂಬ

Exit mobile version