Site icon Vistara News

Viral Video: ಚಿಕ್ಕ ಮಕ್ಕಳು ಅಳದಂತೆ ಇಂಜೆಕ್ಷನ್‌ ಚುಚ್ಚುವುದು ಹೇಗೆ? ಈ ವಿಡಿಯೊದಲ್ಲಿದೆ ಉತ್ತರ

viral video

viral video

ಬೆಂಗಳೂರು: ಚಿಕ್ಕ ಮಕ್ಕಳ ವಿಡಿಯೊಗಳು ಆಗಾಗ ಸೋಷಿಯಲ್‌ ಮೀಡಿಯಾಗಳಲ್ಲಿ ಕಾಣಿಸಿಕೊಂಡು ವೈರಲ್‌ ಆಗುತ್ತವೆ. ಅವರ ತುಂಟಾಟ, ಮುಗ್ಧ ಸ್ವಭಾವ, ಭಾವನೆ ವ್ಯಕ್ತಪಡಿಸುವ ರೀತಿ… ಹೀಗೆ ಚಿಕ್ಕ ಮಕ್ಕಳು ವಿವಿಧ ಕಾರಣಗಳಿಂದ ನೆಟ್ಟಿಗರ ಗಮನ ಸೆಳೆಯುತ್ತವೆ. ಇಲ್ಲೂ ಅದೇ ರೀತಿಯ ವಿಡಿಯೊವೊಂದು ಈಗ ವೈರಲ್‌ ಆಗಿದೆ. ಪುಟಾಣಿ ಪಾಪುವಿಗೆ ನೋವಾಗದ ರೀತಿ ಇಂಜೆಕ್ಷನ್‌ ಕೊಡುವ ವೈದ್ಯರೊಬ್ಬರ ಜಾಣ್ಮೆ, ಅವರೊಂದಿಗೆ ಮಗು ಪ್ರತಿಕ್ರಿಯಿಸುವ ರೀತಿ ಗಮನ ಸೆಳೆಯುತ್ತಿದೆ (Viral Video).

ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಚುಚ್ಚುಮದ್ದು ನೀಡುವುದೇ ಬಹು ದೊಡ್ಡ ಸವಾಲಿನ ಕೆಲಸ. ಸಾಮಾನ್ಯವಾಗಿ ವೈದ್ಯರು ಇಂಜೆಕ್ಷನ್‌ ಹೊರ ತೆಗೆಯುವಾಗಲೇ ಮಕ್ಕಳು ಅಳಲು ಆರಂಭಿಸುತ್ತಾರೆ. ಮೊದಲೇ ಆಸ್ಪತ್ರೆಯ ವಾತಾವರಣ ನೋಡಿ ಭಯದಲ್ಲಿರುವ ಮಕ್ಕಳು ಇಂಜೆಕ್ಷನ್‌ ನೋಡಿ ರಚ್ಚೆ ಹಿಡಿಯುತ್ತಾರೆ. ಚುಚ್ಚುಮದ್ದು ಹೆಚ್ಚು ನೋವುಂಟು ಮಾಡದಿದ್ದರೂ ಈ ಬಗೆಗಿನ ಭಯವೇ ಮಕ್ಕಳಲ್ಲಿ ಹಿಂಜರಿಕೆ ಉಂಟು ಮಾಡುತ್ತದೆ. ಅದಕ್ಕಾಗಿಯೇ ಶಿಶುವೈದ್ಯರು ಮತ್ತು ದಾದಿಯರು ಚಿಕ್ಕ ಮಕ್ಕಳ ಗಮನವನ್ನು ಬೇರೆಡೆಗೆ ಸೆಳೆಯುವ ಮೂಲಕ ಮತ್ತು ಚುಚ್ಚುಮದ್ದನ್ನು ರಹಸ್ಯವಾಗಿ ನೀಡಲು ಪ್ರಯತ್ನಿಸುತ್ತಾರೆ. ಸದ್ಯ ಯುವ ವೈದ್ಯರೊಬ್ಬರು ಮಗುವಿನ ಗಮನ ಬೇರೆಡೆ ಸೆಳೆದು, ಅದಕ್ಕೆ ನೋವಾಗದ ರೀತಿ ಚುಚ್ಚುಮದ್ದನ್ನು ನೀಡಿರುವ ವಿಡಿಯೊ ನೆಟ್ಟಿಗರಿಂದ ಲೈಕ್‌ಗಳನ್ನು ಪಡೆಯುತ್ತಿದೆ. ವೈದ್ಯರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.

ವಿಡಿಯೊದಲ್ಲೇನಿದೆ?

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 13 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ತನ್ನ ಕ್ಲಿನಿಕ್‌ಗೆ ಆಗಮಿಸಿದ ಪುಟಾಣಿ ಮಗು ಕಿಯಾರಾ ಜತೆ ವೈದ್ಯರು ಮಾತನಾಡುತ್ತಿರುವ ದೃಶ್ಯದೊಂದಿಗೆ ವಿಡಿಯೊ ಆರಂಭವಾಗುತ್ತದೆ. ಎರಡು ವರ್ಷದೊಳಗಿನ, ಹಾಲುಗಲ್ಲದ ಕಿಯಾರಾಳನ್ನು ಟೇಬಲ್‌ ಮೇಲೆ ಕೂರಿಸಿ ವೈದ್ಯರು ಅವಳೊಂದಿಗೆ ಮಾತನಾಡಿಸುತ್ತ, ನಗಿಸುತ್ತ ನಾಜೂಕಾಗಿ ಇಂಜೆಕ್ಷನ್‌ ಚುಚ್ಚುತ್ತಾರೆ. ಕಿಯಾರಾ ನೋವಿನಿಂದ ಮುಖ ಹಿಂಡಿ ಅಳುವ ಮುಖ ಮಾಡಿದಾಗ ಡಾಕ್ಟರ್‌ ಚಪ್ಪಾಳೆ ಹೊಡೆದು ವಾತಾವರಣ ತಿಳಿಗೊಳಿಸುತ್ತಾರೆ. ಬಳಿಕ ಕಿಯಾರಾ ನೋವು ಮರೆತು ಬಾಯ್ತುಂಬಾ ನಗುವುದು ವಿಡಿಯೊದಲ್ಲಿ ಸೆರೆಯಾಗಿದೆ.

ನೆಟ್ಟಿಗರು ಏನಂದ್ರು?

ʼʼಉತಮ ಕೆಲಸʼʼ ಎಂದು ಒಬ್ಬರು ವೈದ್ಯರ ಕೆಲಸವನ್ನು ಶ್ಲಾಘಿಸಿದ್ದಾರೆ. ʼʼನಾವು ಚಿಕ್ಕವರಿದ್ದಾಗ ಇಂತಹ ಪ್ರೀತಿ ತುಂಬಿದ ವೈದ್ಯರು ಇರಲಿಲ್ಲ. ಅಗ ನಾವು ಅಳುತ್ತಿದ್ದಾಗ ಅಪ್ಪ-ಅಮ್ಮ ಸಮಾಧಾನ ಮಾಡುವುದು ಬಿಟ್ಟು ಒಂದೇಟು ಬಿಗಿಯುತ್ತಿದ್ದರುʼʼ ಎಂದು ಇನ್ನೊಬ್ಬರು ನೆನಪು ಹಂಚಿಕೊಂಡಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿ, ʼʼಮಗು ಅಳಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದೆʼʼ ಎಂದಿದ್ದಾರೆ. ಮಗದೊಬ್ಬರು ಮಗುವಿನ ಬಗ್ಗೆ ಕಾಳಜಿ ತೋರಿ, ʼʼಮಗು ಅತ್ತರೂ ಪರವಾಗಿಲ್ಲ, ಸರಿಯಾದ ರೀತಿಯಲ್ಲಿ ಇಂಜೆಕ್ಷನ್‌ ಚುಚ್ಚುವುದು ಅಗತ್ಯʼʼ ಎಂದು ಹೇಳಿದ್ದಾರೆ. ʼʼಮಗು ದೊಡ್ಡದಾದ ಮೇಲೆಯೂ ಆ ವೈದ್ಯರನ್ನು ಮರೆಯಲಾರದುʼʼ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ʼʼವಿಡಿಯೊ ಮುದ್ದಾಗಿದೆ, ಇದನ್ನು ನೋಡಿದ ಹಲವರ ಮುಖದಲ್ಲಿ ನಗು ಮೂಡುವುದರಲ್ಲಿ ಸಂಶಯವೇ ಇಲ್ಲʼʼ ಎಂದು ಹಲವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಬ್ರಿಡ್ಜ್ ಕೆಳಗೆ ಸಿಲುಕಿದ ಮುಂಬೈನಿಂದ ಅಸ್ಸಾಮ್‌ಗೆ ಹೊರಟಿದ್ದ ವಿಮಾನ!

Exit mobile version