ಇಸ್ಲಾಮಾಬಾದ್: ಕರ್ನಾಟಕದಲ್ಲಿ ಕೆಲವು ದಿನಗಳಿಂದ ಹುಲಿ ಉಗುರು (Tiger Nail) ಭಾರೀ ಸದ್ದು ಮಾಡುತ್ತಿದೆ. ಹುಲಿ ಉಗುರಿನ ಲಾಕೆಟ್‌ವುಳ್ಳ ಸರ ಧರಿಸಿರುವವರ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಅವರನ್ನು ಕಾರ್ಯಕ್ರಮದ ಮಧ್ಯೆಯೇ ವಿಚಾರಣೆಗೆ ಕರೆದುಕೊಂಡ ಹೋದ ಬಳಿಕ ಈ ವಿಚಾರ ಇನ್ನಷ್ಟು ಗಂಭೀರವಾಗಿ ಬದಲಾಗಿದೆ. ಇದೀಗ ರಾಜಕಾರಣಿಗಳು, ಉದ್ಯಮಿಗಳು, ಕಲಾವಿದರ ಕುತ್ತಿಗೆಗೆ ಹುಲಿ ಉಗುರು ಪರಚತೊಡಗಿದೆ. ಹುಲಿ ಉಗುರನ್ನು ಧರಿಸಿ ಠೀವಿಯಿಂದ ಫೋಸ್ ನೀಡಿದವರೆಲ್ಲ ಮುಖ ಮುಚ್ಚತೊಡಗಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಹುಲಿಯ ಕುತ್ತಿಗೆಗೆ ಚೈನ್ ಬಿಗಿದು ಬ್ಯುಸಿ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ (Viral Video).
ವಿಡಿಯೊದಲ್ಲೇನಿದೆ?
ʼಟಿಪ್‌ಟಾಪ್ ಯಾತ್ರಾʼ ಎನ್ನುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೊ ನೋಡಿದ ಹಲವರು ಜನರ ಸುರಕ್ಷತೆ ಮತ್ತು ಹುಲಿಯ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಹುಲಿಯು ಜಿಗಿಯಲು ಪ್ರಯತ್ನಿಸುತ್ತಿರುವುದು ಮತ್ತು ಸರಪಳಿಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ವಿಡಿಯೊದ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಖೈಬರ್ ಕಂಡು ಬರುತ್ತಿದ್ದು, ಇದರಿಂದ ಇದು ಪಾಕಿಸ್ತಾನ ಎನ್ನುವುದನ್ನು ಹಲವರು ಗುರುತಿಸಿದ್ದಾರೆ.
ವ್ಯಕ್ತಿಯು ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುವಂತೆ ರಸ್ತೆ ಬದಿಯಲ್ಲಿ ಹುಲಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾನೆ. ಅದು ಜನ ನಿಬಿಡ ರಸ್ತೆ ಬೇರೆ. ರೋಷದಲ್ಲಿರುವ ಹುಲಿ ರಸ್ತೆಯಲ್ಲಿ ತೆರಳುವ ವಾಹನಗಳ ಮೇಲೆ ದಾಳಿ ನಡೆಸಲು ಯತ್ನಿಸಿಸುತ್ತಿರುವುದು ಕೂಡ ವಿಡಿಯೊದಲ್ಲಿ ಕಂಡು ಬಂದಿದೆ. ಹುಲಿಯ ಕುತ್ತಿಗೆಗೆ ಸರಪಳಿಯಿಂದ ಬಿಗಿದಿದ್ದರೂ ಜನರು ಓಡಾಡುವ ಪ್ರದೇಶಕ್ಕೆ ತೆರಳುವುದು ಅಪಾಯಕಾರಿ. ಇದು ಅವಿವೇಕದ ಕೆಲಸ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳವಳ ವ್ಯಕ್ತಪಡಿಸಿದ ನೆಟ್ಟಿಗರು
ʼʼಎಲ್ಲಿ ಇದು? ಇಲ್ಲಿ ಹುಲಿಯನ್ನು ಹೊಂದುವುದಕ್ಕೆ ಕಾನೂನು ಅನುಮತಿ ನೀಡಿದೆಯೇ?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ʼʼಇತ್ತೀಚೆಗೆ ವೈರಲ್ ಆಗಲು, ಬಹು ಬೇಗ ಜನಪ್ರಿಯತೆ ಪಡೆಯಲು ಜನರು ಏನು ಬೇಕಾದರೂ ಮಾಡಲು ತಯಾರಿರುತ್ತಾರೆʼʼ ಎಂದು ಮತ್ತೊಬ್ಬರು ರೋಷ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರು ಹುಲಿಯೊಂದಿಗೆ ರಸ್ತೆಗಳಿದ ವ್ಯಕ್ತಿಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಎರಡು ದಿನ ಹಿಂದೆ ಅಪ್‌ಲೋಡ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ ಸಾವಿರಾರು ಮಂದಿ ನೋಡಿದ್ದಾರೆ.
ಇದನ್ನೂ ಓದಿ: Viral Video: ಅಣ್ಣ ತಂಗಿಯರ ಈ ಬಂಧ; ಹೃದಯ ಬೆಚ್ಚಗಾಗಿಸುವ ಪುಟಾಣಿಗಳ ವಿಡಿಯೊ ಇದು
ರಸ್ತೆ ಮಧ್ಯೆ ಆನೆ ಪ್ರತ್ಯಕ್ಷ
ಇತ್ತೀಚೆಗೆ ಆನೆಯೊಂದು ಕಾಡಿನ ಮಧ್ಯೆಯ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಎದುರಾಗಿದ್ದ ವಿಡಿಯೊ ವೈರಲ್ ಆಗಿತ್ತು. ಆರಂಭದಲ್ಲಿ ಆನೆಯು ಬಸ್ ಮುಂದೆ ಬಂದು ನಿಂತಿತ್ತು. ಆನೆಗೆ ಚಲಿಸಲು ದಾರಿ ಮಾಡಿಕೊಡುವಂತೆ ಬಸ್ ನಿಲ್ಲುತ್ತದೆ. ಒಂದು ಕ್ಷಣ ಆನೆ ಹಿಂದೆ ಸರಿಯುತ್ತದೆ. ಆಗ ಬಸ್ ಕೂಡ ನಿಧಾನವಾಗಿ ಚಲಿಸುತ್ತದೆ. ಬಸ್ ಮುಂದಕ್ಕೆ ಹೋಗುತ್ತಿರುವುದನ್ನು ನೋಡಿದ ಆನೆ ಕಿರಿದಾದ ಹಾದಿಯನ್ನು ದಾಟಿ ಮತ್ತೆ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತದೆ. ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲ ಗಾಬರಿಯಿಂದ ಕೂಗಾಡಲು ಆರಂಭಿಸುತ್ತಾರೆ. ಬಸ್ ಚಾಲಕ ಎಲ್ಲರಲ್ಲಿಯೂ ಶಾಂತವಾಗಿರಲು ತಿಳಿಸಿ ಧೈರ್ಯ ತುಂಬುತ್ತಾನೆ. ಆನೆ ರಸ್ತೆಯಿಂದ ಸರಿದ ಬಳಿಕ ಬಸ್ ಸುರಕ್ಷಿತವಾಗಿ ಅಲ್ಲಿಂದ ತೆರಳುತ್ತದೆ. ಕೇರಳದ ಮುನ್ನಾರ್‌ನಲ್ಲಿ ಈ ಘಟನೆ ನಡೆದಿತ್ತು.