ಬದುಕನ್ನು ನಮಗೆ ಇಷ್ಟ ಬಂದ ಹಾಗೆ ಖುಷಿಯಿಂದ ಜೀವಿಸಲು ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಆದರೆ ಬಹುತೇಕರು ವಯಸ್ಸಾದ ಹಾಗೆ, ʻವಯಸ್ಸಾದ ನಾನು ಇದನ್ನು ಮಾಡಿದರೆ ಜನ ಏನಂದಾರುʼ ಎಂದುಕೊಳ್ಳುವುದೇ ಹೆಚ್ಚು. ಮುಕ್ಕಾಲು ಪಾಲು ಮಂದಿ ಸಮಾಜ ಏನನ್ನುತ್ತದೋ ಎಂಬ ಭಯದಲ್ಲೇ ತಮ್ಮ ಆಸಕ್ತಿಗಳಿಗೆ ಎಳ್ಳುನೀರು ಬಿಟ್ಟರೆ, ಇನ್ನೊಂದಿಷ್ಟು ಮಂದಿ ಭಯದಿಂದ ಹಿಂದೆ ಸರಿಯುತ್ತಾರೆ. ಬೆರಳೆಣಿಕೆಯ ಮಂದಿ ಮಾತ್ರ ತಮ್ಮ ಮನಸ್ಸಿನ ಮಾತು ಕೇಳಿ, ವಯಸ್ಸು ಕೇವಲ ಒಂದು ನಂಬರ್ ಮಾತ್ರ ಎಂಬ ಮಾತಿನಂತೆ ನಡೆಯುತ್ತಾರೆ. ಈ ೮೦ರ ಅಜ್ಜಿಯೂ ಕೂಡಾ ಈ ಕೊನೆಯ ಕೆಟಗರಿಗೆ ಸೇರಿದಾಕೆ.
೮೦ರ ಹರೆಯದ ಅಜ್ಜಿ ತನ್ನಿಷ್ಟದಂತೆ ಅಂಥ ಇಳಿ ವಯಸ್ಸಿನಲ್ಲಿ ಆಕಾಶದಲ್ಲಿ ಹಕ್ಕಿಯಂತೆ ಹಾರಬಯಸಿ ಪಾರಾಗ್ಲೈಡಿಂಗ್ ಮಾಡಿದ್ದರು ಎಂದರೆ ನೀವು ನಂಬಲೇಬೇಕು. ಹೌದು. ಸೆಲಿನಾ ಮೋಸಸ್ ಎಂಬಾಕೆ ತನ್ನ ಅಜ್ಜಿಯ ಹಳೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ʻನನ್ನಜ್ಜಿ ಏಳೆಂಟು ವರ್ಷಗಳ ಹಿಂದೆ ಆಕೆ ೮೦ರ ಹರೆಯದಲ್ಲಿದ್ದಾಗ ಧೈರ್ಯವಾಗಿ ಮಾಡಿದ ಪಾರಾಗ್ಲೈಡಿಂಗ್ ವಿಡಿಯೋʼ ಎಂದು ಬರೆದುಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ.
ಅಂದ ಹಾಗೆ, ಹೀಗೆ ಪಾರಾಗ್ಲೈಡಿಂಗ್ ಮಾಡುತ್ತಿರುವ ಅಜ್ಜಿ ಈಗ ಬದುಕಿಲ್ಲವಂತೆ. ಆಕೆಯ ಮೊಮ್ಮೊಗಳು ಬರೆದುಕೊಂಡಂತೆ, ʻಹಳೆಯ ಗ್ಯಾಲರಿ ಜಾಲಾಡುತ್ತಿದ್ದಾಗ ಸಿಕ್ಕಿದ ನನ್ನಜ್ಜಿಯ ಹಳೆಯ ವಿಡಿಯೋ ಇದು. ಆಕೆ ಹೀಗೆ ಪಾರಾಗ್ಲೈಡಿಂಗ್ ಮಾಡಿದಾಗ ಆಕೆಯ ವಯಸ್ಸು ೮೦ ವರ್ಷ. ವಯಸ್ಸು ಕೇವಲ ಒಂದು ನಂಬರ್ ಮಾತ್ರ ಎಂಬುದನ್ನು ನನ್ನಜ್ಜಿ ಸಾಬೀತುಪಡಿಸಿದ್ದಳು. ಆಕೆ ಈಗ ನಮ್ಮ ಜೊತೆಗಿಲ್ಲ. ಆದರೆ ಆಕೆಯ ನೆನಪುಗಳು ಎಂದೂ ಮಾಸದು. ಅಕಸ್ಮತಾಗಿ ಸಿಕ್ಕಿದ ಈ ವಿಡಿಯೋ ಹಂಚಿಕೊಳ್ಳಬೇಕೆನಿಸಿತು. ಸೀರೆ ಉಟ್ಟುಕೊಂಡು, ಧೈರ್ಯದಿಂದ ಆಕೆ ಪಾರಾಗ್ಲೈಡಿಂಗ್ ಮಾಡುವುದನ್ನು ನೋಡುವುದೇ ಸ್ಪೂರ್ತಿʼ ಎಂದಾಕೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: ಸೀರೆಯುಟ್ಟು ಹಗ್ಗದ ಮೇಲೆ ಸೈಕ್ಲಿಂಗ್ ಮಾಡಿದ 67ವಯಸ್ಸಿನ ಮಹಿಳೆಯ ಸ್ಟೈಲ್ ನೋಡಿ!
ʻಬದುಕಿನುದ್ದಕ್ಕೂ ಸ್ಪೂರ್ತಿಯಾಗಿದ್ದ ಅಜ್ಜಿ ಎಲ್ಲರಿಗೂ ಸ್ಪೂರ್ತಿಯಾಗಿಯೇ ಬದುಕಿದಳು. ಏಳು ವರ್ಷಗಳ ಹಿಂದೆ ಆಕೆ ತೀರಿಕೊಂಡರೂ, ಇಂದಿಗೂ ನಮ್ಮೆಲ್ಲರ ಮನಸ್ಸಲ್ಲಿ ಆಕೆ ಇದ್ದಾಳೆ. ಆಕೆ ಎಂದೆಂದಿಗೂ ನಮ್ಮ ನೆನೆಪಿನಲ್ಲಿ ಇರುತ್ತಾಳೆ ಕೂಡಾ. ಲವ್ ಯೂ, ಮಿಸ್ ಯೂʼ ಎಂದು ಬರೆದುಕೊಂಡು ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋ ಮಿಲಿಯಗಟ್ಟಲೆ ವೀಕ್ಷಣೆ ಕಂಡಿದ್ದು, ಅಜ್ಜಿಯ ಪಾರಾಗ್ಲೈಡಿಂಗ್ ಸಾಹಸಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಬದುಕನ್ನು ನಿಜವಾಗಿ ಜೀವಿಸುವುದು ಎಂದರೆ ಇದು. ಇಂದು ನೋಡಿದ ಅತ್ಯುತ್ತಮ ವಿಡಿಯೋ ಇದು. ವಯಸ್ಸೇನೇ ಆದರೂ ನಮ್ಮ ಕನಸುಗಳನ್ನು ನನಸಾಗಿಸಲು ಪ್ರಯತ್ನ ಪಡಬೇಕು. ಅಂದುಕೊಂಡ ಹಾಗೆ ಹೆದರದೆ ಜೀವಿಸಬೇಕು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, ಇಂತಹ ಸ್ಪೂರ್ತಿ ತುಂಬುವ ವಿಡಿಯೋ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ಆಕೆಯ ಸರಳತೆ, ಧೈರ್ಯ ಎಲ್ಲರಿಗೂ ಸ್ಪೂರ್ತಿ. ಆಕೆಯೊಬ್ಬ ಅದ್ಭುತ ಮಹಿಳೆ. ಆಕೆಯ ಎನರ್ಜಿಯ ಶೆಕಡಾ ೫೦ರಷ್ಟಾದರೂ ಆ ವಯಸ್ಸಿನಲ್ಲಿ ನಮಗಿದ್ದರೆ ಸಾಕು ಎಂದಷ್ಟೇ ದೇವರಲ್ಲಿ ಬೇಡುವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಎಸ್ಕಲೇಟರ್ನಲ್ಲಿ ನಾಯಿಮರಿ ಆಟ; ಹತ್ತೋದು-ಇಳಿಯೋದು ಸಖತ್ ಕ್ಯೂಟ್