Site icon Vistara News

Viral video | ಹಗ್ಗದ ಸಹಾಯವಿಲ್ಲದೆ 122 ಮೀಟರ್‌ ಎತ್ತರದ ಕಟ್ಟಡವೇರಿದ ಸಾಹಸಿ!

viral video climber

ಕೆಲವೊಂದು ಸಾಹಸೀ ದೃಶ್ಯಗಳು ಸಿನಿಮಾದಲ್ಲಿ ಹೇಗೆ ಸೀಟಿನ ತುದಿಗೆ ನಮ್ಮನ್ನು ತಂದು ನಿಲ್ಲಿಸುತ್ತವೆಯೋ, ಹಾಗೆಯೇ ನಿಜ ಜೀವನದಲ್ಲೂ. ಇಲ್ಲೊಬ್ಬ ಫ್ರೆಂಚ್‌ ಸಾಹಸಿ ಆರೋಹಿ (ಕ್ಲೈಂಬರ್)‌ ಆಲೆಕ್ಸಿಸ್‌ ಲ್ಯಾಂಡೋಟ್‌ ಎಂಬವರು ೨೨ ಮೀಟರ್‌ ಎತ್ತರದ ಕಟ್ಟಡವನ್ನು ಯಾವುದೇ ಹಗ್ಗ ಅಥವಾ ಯಾವುದೇ ಪರಿಕರಗಳ ಸಹಾಯವೂ ಇಲ್ಲದೆ ಏರಿದ್ದು ಮೈನವಿರೇಳಿಸುವ ಸಾಹಸದ ದೃಶ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

೨೨ ವರ್ಷದ ಲ್ಯಾಂಡೋಟ್‌ ವಿಶ್ವದ ಕೆಲವೇ ಕೆಲವು ಫ್ರೀ ಸೋಲೋ ಕ್ಲೈಂಬರ್‌ಗಳಲ್ಲಿ ಒಬ್ಬರಾಗಿದ್ದು, ಇವರು ಯಾವುದೇ ಪರಿಕರ ಹಾಗೂ ಹಗ್ಗದ ಸಹಾಯವಿಲ್ಲದೆ ಎತ್ತರದ ಬಹುಮಹಡಿ ಕಟ್ಟಡಗಳನ್ನು ಏರುವ ಸಾಹಸ ಮಾಡುತ್ತಾರೆ. ಇದೂ ಅಂತಹ ಸಾಹಸಗಳಲ್ಲಿ ಇನ್ನೊಂದಾಗಿದೆ.

ಈ ಹಿಂದೆಯೂ ಹಲವು ವಿಶ್ವವಿಖ್ಯಾತ ಬಹುಮಹಡಿ ಕಟ್ಟಡಗಳನ್ನು ಏರಿರುವ ಸಾಹಸ ಮಾಡಿರುವ ಲ್ಯಾಂಡೋಟ್‌ ಈ ಬಾರಿಯೂ ಮತ್ತೆ ಅಂಥದ್ದೊಂದು ಸಾಹಸ ಮಾಡಿದ್ದು ಇದರ ವಿಡಿಯೋ ಮೈನವಿರೇಳಿಸುವಂತಿದೆ. ಇದರ ವಿಡಿಯೋ ಪೋಸ್ಟ್‌ ಮಾಡುವ ಜೊತೆಗೆ ʻಮಿಷನ್‌ ಇಂಪಾಸಿಬಲ್‌ ಇನ್‌ ರಿಯಲ್‌ ಲೈಫ್‌ʼ ಎಂದು ಪೋಸ್ಟ್‌ ಮಾಡಿ ಟಾಮ್‌ ಕ್ರೂಸ್‌ಗೆ ಚಾಲೆಂಜ್‌ ಹಾಕಿದ್ದಾರೆ. ಇದರ ಜೊತೆಗೆ, ʻತಮಾಷೆ ಸೈಡಿಗಿರಲಿ, ಇದೊಂದು ಅತ್ಯದ್ಭುತ ಅನುಭವ. ಸ್ವಲ್ಪ ಚಳಿಯಿದ್ದುದು ಒಳ್ಳೆಯದಾಯಿತು, ಇದೇ ನನ್ನ ಮಿಷನ್‌ಗೆ ಸಹಾಯ ಕೂಡಾ ಮಾಡಿತುʼ ಎಂದವರು ಬರೆದುಕೊಂಡಿದ್ದಾರೆ.

ಈ ವಿಡಿಯೋ ಆರು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಮೋಡಿ ಮಾಡಿದ್ದು, ಬಹಳಷ್ಟು ಮಂದಿ ʻದಯವಿಟ್ಟು ಇದನ್ನು ಮಾಡಬೇಡಿʼ ಎಂದು ಆತನಿಗೆ ಬುದ್ಧಿ ಹೇಳಿದ್ದಾರೆ. ʻಈ ಕೌಶಲ್ಯದಲ್ಲಿ ನೀವು ಎಷ್ಟೇ ಪಕ್ವವಿದ್ದರೂ, ಎಷ್ಟೇ ಅನುಭವ ಇದ್ದರೂ ಒಂದೇ ಒಂದು ಸಣ್ಣ ತಪ್ಪು ಹೆಜ್ಜೆ ಕೂಡಾ ನಿಮ್ಮ ಬದುಕನ್ನೇ ಕಸಿದುಕೊಳ್ಳಬಹುದು. ದಯವಿಟ್ಟು ಇಂತಹ ಸಾಹಸ ಮಾಡಬೇಡಿ. ಬದುಕು ಬಹಳ ದೊಡ್ಡದು ಹಾಗೂ ಮೌಲ್ಯಯುತವಾದದ್ದು. ಇಂತಹ ಮೂರ್ಖತನದ ಕೆಲಸಗಳನ್ನು ಮಾಡಿ ಇದಕ್ಕಿಂತ ಹೆಚ್ಚು ದೊಡ್ಡದಿರುವ, ಅಮೂಲ್ಯವಾದ ಬದುಕನ್ನು ಕಳೆದುಕೊಳ್ಳದಿರಿ. ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಮನ್ನಣೆ, ಲಕ್ಷಲಕ್ಷ ಜನರ ವೀಕ್ಷಣೆ ಎಲ್ಲವೂ ಕ್ಷಣಿಕ. ನಮ್ಮ ಬದುಕು ಇವೆಲ್ಲವುಗಳನ್ನು ಮೀರಿದ್ದು. ಹಾಗಾಗಿ ದಯವಿಟ್ಟು ಇಂಥದ್ದನ್ನು ನಿಲ್ಲಿಸಿʼ ಎಂದು ಕೆಲವರು ಹೃದಯದಿಂದ ಆತನ ಒಳ್ಳೆಯದನ್ನು ಬಯಸಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ | Viral video | ಹಿಮ ಸುರಿಯುವುದನ್ನು ಮೊದಲ ಬಾರಿ ನೋಡಿ ಹುಚ್ಚೆದ್ದು ಕುಣಿದ ಒಂಟೆ!

ವೀಕ್ಷಕರೊಬ್ಬರು, ʻಯಾಕೆ ಇದೆಲ್ಲ?ʼ ಎಂದು ಆತನಿಗೆ ಪ್ರಶ್ನೆ ಮಾಡಿದ್ದು ಅದಕ್ಕೆ ಲ್ಯಾಂಡೋಟ್‌, ʻಇದು ನನ್ನ ಅಭಿರುಚಿ, ಹವ್ಯಾಸʼ ಎಂದು ಉತ್ತರಿಸಿದ್ದಾರೆ.

ಇದಕ್ಕೆ ಇನ್ನೊಬ್ಬರು, ʻನಿಮಗಿದು ಹವ್ಯಾಸವಾಗಿದ್ದರೆ, ದಯವಿಟ್ಟು ಇಂಥ ಹವ್ಯಾಸಗಳನ್ನು ಬಿಟ್ಟು ಬೇರೆ ಹವ್ಯಾಸಗಳನ್ನು ಹುಡುಕಿಕೊಳ್ಳಿ. ನಿಮ್ಮ ಮೇಲೆ ಗೌರವದಿಂದ ಹೇಳುತ್ತಿದ್ದೇನೆ. ನಮಗೆ ಈ ವಿಡಿಯೋ ನೋಡಲು ಯಾವುದೇ ಮಜಾ ಬರುತ್ತಿಲ್ಲ. ಅತೀವ ಸಂಕಟವಾಗುತ್ತಿದೆ. ಇನ್ನು ನಿಮ್ಮ ಹೆತ್ತವರ ಹೃದಯ ಹೇಗಾಗಿರಬಹುದು ಯೋಚಿಸಿಕೊಂಡೇ ನಮ್ಮ ಕೈಕಾಲು ನಡುಗುತ್ತದೆ. ನಿಮ್ಮನ್ನು ಪ್ರೀತಿಸುವವರು ನಿಮ್ಮ ಇಂತಹ ವಿಡಿಯೋ ನೋಡಿದರೆ ಎಂಬುದನ್ನು ಯೋಚಿಸಲು ನಮಗೇ ಭಯವಾಗುತ್ತಿದೆ. ಇನ್ನು ಅವರ ಪರಿಸ್ಥಿತಿ ಹೇಗಿರಬಹುದು. ಇದು ಖಂಡಿತವಾಗಿಯೂ ಖುಷಿಯನ್ನು ನಮಗೆ ಹಂಚುತ್ತಿಲ್ಲ. ನಿಮಗೆ ದೇವರು ಒಳ್ಳೆಯದು ಮಾಡಲಿʼ ಎಂದು ಪ್ರತಿಕ್ರಿಯೆ ಬರೆದಿದ್ದಾರೆ.

ʻಇದು ನಿಮ್ಮ ಹವ್ಯಾಸ ಆಗಿರಬಹುದು. ಆದರೆ, ಯಾಕೆ ಇಂತಹ ಹವ್ಯಾಸ? ಇದೆಲ್ಲ ಬೇಕಾ? ಇಂತಹ ಡೇಂಜರಸ್‌ ಹವ್ಯಾಸಗಳನ್ನೆಲ್ಲ ಇಟ್ಕೋಬೇಡ್ರಪ್ಪಾ. ಹುಷಾರುʼ ಎಂದೂ ಒಬ್ಬಾತ ಕಾಮೆಂಟಿಸಿದ್ದಾರೆ.

ಇದನ್ನೂ ಓದಿ | Viral News | ರೊಮೇನಿಯಾದ ಹೊಸ ಯೋಜನೆ: ಇಪ್ಪತ್ತು ಬಸ್ಕಿ ತೆಗೆದರೆ ಉಚಿತ ಬಸ್‌ ಟಿಕೆಟ್‌!

Exit mobile version