ಚಹಾ, ಅಥವಾ ಕಾಫಿ ಎಂದರೆ ಭಾರತೀಯರಿಗೊಂದು ಭಾವನೆ. ಅದ್ಯಾಕೋ, ಯಾರು ಏನೇ ಹೇಳಿದರೂ ಚಹಾ, ಕಾಫಿಯ ಸಖ್ಯ ಬಿಡಲು ಬಹುತೇಕರ ಮನಸ್ಸೊಪ್ಪುವುದಿಲ್ಲ. ಬೆಳಗ್ಗೆ ಎದ್ದ ಕೂಡಲೇ ಕಾಫಿಯೋ ಚಹಾವೋ ಕೆಲವರು ಕುಡಿದರೆ, ಇನ್ನೂ ಕೆಲವರಿಗೆ, ಆಗಾಗ ಕುಡಿಯುತ್ತಿರಬೇಕು. ಮತ್ತೆ ಕೆಲವರಿಗೆ ಸಂಜೆಯ ಹೊತ್ತು ಚಹಾ, ಕಾಫಿ ಕುಡಿಯಲೇಬೇಕು. ಹಾಗಾಗಿಯೇ, ಈ ಚಹಾ, ಕಾಫಿಗಳಲ್ಲಿ ಎಷ್ಟೊಂದು ವೆರೈಟಿಗಳು. ಅದರಲ್ಲೂ ಚಹಾದ ಬಗೆಬಗೆಯ ಸ್ವಾದ ಪರಿಚಯವಾಗಬೇಕಾದರೆ, ಭಾರತದೆಲ್ಲೆಡೆ ಪ್ರವಾಸ ಮಾಡಬೇಕು. ಒಂದೇ ಚಹಾವನ್ನು ಬೇರೆ ಬೇರೆ ಮಾದರಿಯಲ್ಲಿ ತಯಾರಿಸಿ ರುಚಿಯಲ್ಲಿ ವ್ಯತ್ಯಾಸ ಕಾಣುವ ಹೊಸಹೊಸ ಬಗೆಗಳೂ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಕೆಲವರಿಗೆ ಇಂತಹ ಹೊಸ ನಮೂನೆಗಳು ಇಷ್ಟವಾದರೆ, ಇನ್ನೂ ಕೆಲವರಿಗೆ ಪಾರಂಪರಿಕ ಚಹಾದ ಶೈಲಿಗೆ ಕೊಂಚವೂ ಕಳಂಕ ಬಂದರೆ ಇಷ್ಟವಾಗುವುದಿಲ್ಲ.
ಕೊರೋನಾ ಸಮಯದಲ್ಲಿ ತೆಂಗಿನಕಾಯಿ ಚಿಪ್ಪಿನಲ್ಲಿ ಮಾಡಿದ ಚಹಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮನೆಯಲ್ಲೇ ಇದ್ದೂ ಇದ್ದೂ ಬೇಸರವಾಗಿದ್ದ ಮಂದಿಯೆಲ್ಲ ಈ ಚಿಪ್ಪಿನ ಚಹಾ ಮಾಡಿದ್ದೇ ಮಾಡಿದ್ದು. ಇದೂ ಅಲ್ಲದೆ, ದಮ್ ಚಹಾ, ಗುಲಾಬಿ ಘಮದ ರೂಅಫ್ಝಾ ಚಹಾ, ಓಲ್ಡ್ ಮಾಂಕ್ ಚಹಾ, ಹಣ್ಣಿನ ಚಹಾ ಹೀಗೆ ಒಂದೇ ಎರಡೇ! ಬಗೆಬಗೆಯ ಚಹಾಗಳು ಚಹಾಪ್ರಿಯರ ಬಯಕೆಯನ್ನು ತಣಿಸಲು ಬಂದಿದ್ದವು. ಆದರೆ, ಸಾಂಪ್ರದಾಯಿಕವಾಗಿ ಮನಗೆದ್ದಿರುವ ಕುಲ್ಲಡ್ ಚಹಾ, ಶುಂಠಿ ಹಾಕಿದ ಚಹಾ, ಮಸಾಲೆ ಚಹಾವನ್ನು ಮೀರಿಸುವ ರುಚಿ ಎಲ್ಲಿಂದ ಹುಟ್ಟೀತು ಹೇಳಿ! ನಿಜವಾದ ಚಹಾಪ್ರಿಯರಷ್ಟೇ ಈ ಸತ್ಯವನ್ನು ಒಪ್ಪಿಯಾರು.
ಈಗ ಅಂಥದ್ದೇ ಒಂದು ಸತ್ವಪರೀಕ್ಷೆ ಚಹಾಪ್ರಿಯರಿಗೆ ಎದುರಾಗಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸತೊಂದು ಚಹಾ ಸದ್ದು ಮಾಡುತ್ತಿದೆ. ಅದರ ಹೆಸರು ರೋಸ್ಟೆಡ್ ಮಿಲ್ಕ್ ಚಹಾ!
ಹೌದು. ಇದೇನು ರೋಸ್ಟೆಡ್ ಮಿಲ್ಕ್ ಚಹಾ ಅಂತೀರಾ? ಹಾಗಾದರೆ ಒಮ್ಮೆ ಟ್ರೈ ಮಾಡಿ ನೋಡಿ. ಆದರೆ, ಈಗಾಗಲೇ ಇದರ ಹವಾದಲ್ಲಿ ಟ್ರೈ ಮಾಡಿದ ಬಹುತೇಕ ಚಹಾಪ್ರಿಯರು ಈ ಚಹಾಕ್ಕೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಖಂಡಿತಾ ಈ ಬಗೆಯ ಚಹಾ ಟ್ರೈ ಮಾಡಬೇಡಿ ಎಂದು ವೈರಲ್ ವಿಡಿಯೋಗಳಲ್ಲಿ ಉಳಿದವರಿಗೆ ಸಲಹೆ ನೀಡುತ್ತಿದ್ದಾರೆ.
ಆದರೂ ಒಮ್ಮೆಯಾದರೂ, ಈ ಚಹಾ ಮಾಡಿ ನೋಡಬೇಕೆಂದರೆ ನೀವು ಹೀಗೆ ಟ್ರೈ ಮಾಡಬಹುದು. ಚಹಾಸೊಪ್ಪನ್ನು ಅಂದರೆ ಚಹಾ ಪುಡಿಯನ್ನು ತೆಗೆದುಕೊಂಡು ಒಂದು ದಪ್ಪ ತಳದ ಬಾಣಲೆಯಲ್ಲಿ ಹುರಿದುಕೊಳ್ಳಿ. ಹೀಗೆ ಹುರಿಯುವ ಸಂದರ್ಭ ಅದಕ್ಕೆ ಬೇಕಾದಷ್ಟು ಸಕ್ಕರೆಯನ್ನೂ ಸೇರಿಸಿ. ಸಕ್ಕರೆ ಬಿಸಿ ತಾಗಿದ ಕೂಡಲೇ ಅದು ಕರಗಲು ಆರಂಭವಾಗುತ್ತದೆ. ಹೀಗೆ ಸಕ್ಕರೆ ಚಹಾಪುಡಿಯೊಂದಿಗೆ ಕರಗಿದ ಮೇಲೆ ಅದಕ್ಕೆ ನಿಧಾನವಾಗಿ ಜಾಗರೂಕತೆಯಿಂದ ಹಾಲು ಸೇರಿಸಿ. ಜೊಂಯ್ ಎಂಬ ಸದ್ದಿನೊಂದಿಗೆ ಇದಕ್ಕೆ ಹಾಲು ಸೇರಿದಾಗ ಕೊತಕೊತನೆ ಕುದಿಯುವ ಚಹಾವನ್ನು ಆಮೇಲೆ ಸೋಸಿಕೊಂಡರೆ ಆಯ್ತು. ರೋಸ್ಟೆಡ್ ಮಿಲ್ಕ್ ಚಹಾ ರೆಡಿ!
ಇದನ್ನೂ ಓದಿ: Viral Video: ಮೈದಾನದಲ್ಲೇ ಲುಂಗಿ ಡ್ಯಾನ್ಸ್ ಮಾಡಿದ ಕಿಂಗ್ ಕೊಹ್ಲಿ; ಪ್ರೇಕ್ಷಕರು ಫಿದಾ
ಸದ್ಯಕ್ಕೆ ಈ ಚಹಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮಿಲಿಯಗಟ್ಟಲೆ ವೀಕ್ಷಣೆಗಳನ್ನು ಪಡೆಯುತ್ತಿದೆ. ಆದರೆ ಈ ವಿಡಿಯೋ ನೋಡಿ ಟ್ರೈ ಮಾಡಿದ ಹಲವರು, ಒಂದು ಚಹಾವನ್ನು ಹಾಳು ಮಾಡುವುದು ಹೇಗೆಂದು ಕಲಿಯಬೇಕಾದರೆ ಈ ಚಹಾ ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು, ಚಹಾವನ್ನೇ ಕುಲಗೆಡಿಸಿದರು ಎಂದು ಬೈದಿದ್ದಾರೆ. ಮತ್ತೆ ಕೆಲವರು, ಚಹಾದ ಮೇಲಿನ ಪ್ರೀತಿಯಿಂದ, ದಯವಿಟ್ಟು ಇಂಥ ಕೆಟ್ಟ ಕೆಟ್ಟ ಚಹಾ ತಯಾರಿಸಿ ಚಹಾಕ್ಕೆ ಅವಮಾನ ಮಾಡಬೇಡಿ ಎಂದು ಕೈಮುಗಿದಿದ್ದಾರೆ. ಇದು ಕಹಿಯಾಗಿ, ಬಾಯಿಗಿಡದಷ್ಟು ಕೆಟ್ಟದಾಗಿದೆ, ಯಾರೂ ಈ ಚಹಾವನ್ನು ಪ್ರಯತ್ನಿಸಬೇಡಿ ಎಂದೂ ಅವರು ಹೇಳಿದ್ದಾರೆ.
ಇಷ್ಟಾಗಿಯೂ ನಿಮಗೆ ಈ ಚಹಾವನ್ನು ಒಮ್ಮೆ ಟ್ರೈ ಮಾಡಬೇಕು ಅಂತನಿಸಿದರೆ ಅದು ನಿಮ್ಮದೇ ರಿಸ್ಕು!
ಇದನ್ನೂ ಓದಿ: Viral Video: ನಾನು ನಂದಿನಿ ಬೆಂಗಳೂರು ಬಂದಿನಿ; ಭಾರಿ ವೀಕ್ಷಣೆ ಕಂಡ ವಿಕ್ಕಿಪೀಡಿಯಾ ಹಾಡು!