Site icon Vistara News

Viral Video: ಆನ್‌ಲೈನ್‌ ಮೂಲಕ ಬಂತು 1 ಬಿಎಚ್‌ಕೆ ರೆಡಿಮೆಡ್‌ ಮನೆ; ವಿಡಿಯೊ ಇಲ್ಲಿದೆ

online home

online home

ನ್ಯೂಯಾರ್ಕ್‌: ಸ್ವಂತದ್ದೊಂದು ಮನೆ ಹೊಂದಬೇಕು ಎನ್ನುವುದು ಬಹುತೇಕರ ಕನಸು. ದಿನೇ ದಿನೆ ಹೆಚ್ಚುತ್ತಿರುವ ಬೆಲೆಯಿಂದಾಗಿ ಹಲವು ಮಂದಿಯ ಈ ಕನಸು ನನಸಾಗುವುದೇ ಇಲ್ಲ. ಇದೀಗ ಈ ಸಮಸ್ಯೆಗೆ ಅಮೆರಿಕ ಟಿಕ್‌ಟಾಕರ್‌ ಪರಿಹಾರ ಕಂಡುಕೊಂಡಿದ್ದಾರೆ. ಆನ್‌ಲೈನ್‌ ಶಾಪಿಂಗ್‌ ತಾಣ ಅಮೆಜಾನ್‌ನಿಂದ (Amazon) ಖರೀದಿಸಿದ ತನ್ನ ಹೊಸ ಮನೆಯನ್ನು ಪ್ರದರ್ಶಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಇದು ನೆಟ್ಟಿಗರ ಗಮನ ಸೆಳೆದಿದ್ದು ವೈರಲ್‌ ಆಗಿದೆ (Viral Video).

“ನಾನು ಅಮೆಜಾನ್‌ನಿಂದ ಮನೆ ಖರೀದಿಸಿದ್ದೇನೆ” ಎಂದು ಲಾಸ್ ಏಂಜಲೀಸ್‌ನ ಟಿಕ್‌ಟಾಕರ್‌ ಜೆಫ್ರಿ ಬ್ರ್ಯಾಂಟ್ ಹೇಳಿದ್ದಾರೆ. ಮಡಚಬಲ್ಲ ಈ ಮನೆಯ ಬೆಲೆ 21 ಲಕ್ಷ ರೂ. ಮನೆಯ ಸಂಪೂರ್ಣ ಮಾಹಿತಿಯನ್ನು ಅವರು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಈ ಮನೆ 16.5 X 20 ಅಡಿ ಅಳತೆಯನ್ನು ಹೊಂದಿದ್ದು ಇದರ ಮೌಲ್ಯ 26,000 ಡಾಲರ್ (21,37,416 ರೂ.) ಎಂದು ವರದಿಯೊಂದು ತಿಳಿಸಿದೆ. ಇದು ಬಾತ್‌ರೂಮ್‌ ಮತ್ತು ಶೌಚಾಲಯ, ಅಡುಗೆಮನೆ, ಲಿವಿಂಗ್ ಏರಿಯಾ ಮತ್ತು ಮಲಗುವ ಕೋಣೆಯನ್ನು ಹೊಂದಿದೆ. ಈ ಮನೆಯ ಸಂಪೂರ್ಣ ಚಿತ್ರಣವನ್ನು ಅವರು ಈ ವಿಡಿಯೊದಲ್ಲಿ ನೀಡಿದ್ದಾರೆ.

ಇದು ಮೊದಲ ಸಲವಲ್ಲ

ಈ ರೀತಿಯ ರೆಡಿಮೆಡ್‌ ಮನೆಯನ್ನು ಹಿಂದೆಯೂ ಹಲವು ಮಂದಿ ಖರೀದಿಸಿದ್ದರು. ಈ ರೀತಿಯ ಮನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಹೆಚ್ಚುತ್ತಿರುವ ಬಾಡಿಗೆ ಮತ್ತು ಗಗನಮುಖಿಯಾಗುತ್ತಿರುವ ನಿರ್ಮಾಣ ಸಾಮಗ್ರಿ ದರಗಳಿಂದ ಬೇಸತ್ತ ಅನೇಕರು ಈ ಪರ್ಯಾಯ ಮಾರ್ಗದತ್ತ ಮನಸ್ಸು ಮಾಡುತ್ತಿದ್ದಾರೆ. ಆನ್‌ಲೈನ್ ಮೂಲಕ ಇಂತಹ ಸಣ್ಣ ಮನೆಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಅನೇಕರು ಇಂತಹ ಮನೆಗಳ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಕೈಗೆಟಕುವ ದರದಲ್ಲಿ ಚಿಕ್ಕ ಮನೆ ದೊರೆಯುತ್ತದೆ. ಕಡಿಮೆ ಮಂದಿ ಇರುವ ಕುಟುಂಬಕ್ಕೆ ಇಂತಹ ಮನೆ ಸಾಕಾಗುತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಇಂತಹ ಮನೆ ಖರೀದಿಇಂದ ಹಣ ವ್ಯರ್ಥ ಎಂದು ಹೇಳಿದ್ದಾರೆ.

ಜೆಫ್ರಿ ಬ್ರ್ಯಾಂಟ್ ಹೇಳೋದೇನು?

ಆನ್‌ಲೈನ್‌ ಮೂಲಕ ತಾವು ಮನೆ ಖರೀದಿರುವ ಬಗ್ಗೆ ಜೆಫ್ರಿ ಬ್ರ್ಯಾಂಟ್ ವಿವರಿಸುವುದು ಹೀಗೆ: ʼʼಯೂ ಟ್ಯೂಬರ್ ಒಬ್ಬರು ಅಮೆಜಾನ್ ಮನೆಯನ್ನು ಅನ್‌ಬಾಕ್ಸಿಂಗ್‌ ಮಾಡುವುದನ್ನು ನಾನು ನೋಡಿದೆ. ಇದು ನನ್ನ ಗಮನ ಸೆಳೆಯಿತು. ಮಾತ್ರವಲ್ಲ ಬೆಲೆಯು ಕಡಿಮೆ ಎನಿಸಿತು. ಹೀಗಾಗಿ ಖರೀದಿಸಿದೆʼʼ ಎಂದು ಹೇಳಿದ್ದಾರೆ. ಮನೆಗೆ ವಿದ್ಯುತ್ ಸಂಪರ್ಕ ಇನ್ನಷ್ಟೇ ಕಲ್ಪಿಸಬೇಕಾಗಿದೆ. ನಳ್ಳಿಗಳನ್ನೂ ಅಳವಡಿಸುವ ಕಾಮಗಾರಿ ಬಾಕಿ ಇದೆ ಎಂದು ತಿಳಿಸಿದ್ದಾರೆ. ಈ ಮನೆಯಲ್ಲಿ ಅವರು ವಾಸಿಸುವುದಿಲ್ಲವಂತೆ. ವಸತಿ ರಹಿತರಿಗಾಗಿ ಇದನ್ನು ಬಳಸಲಾಗುತ್ತದೆ ಎಂದೂ ಅವರು ವಿವರಿಸಿದ್ದಾರೆ. ಸದ್ಯ ಅವರು ಈ ಮನೆಯನ್ನು ಇರಿಸಲು ಅಗತ್ಯವಾದ ಸೂಕ್ತ ಜಾಗ ಖರೀದಿಗಾಗಿ ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಶ್ವಾನಗಳ ಗುಂಪಿನೊಂದಿಗೆ ಕಾಳಿಂಗ ಸರ್ಪದ ಏಕಾಂಗಿ ಹೋರಾಟ; ರೋಚಕ ವಿಡಿಯೊ ಇಲ್ಲಿದೆ

Exit mobile version