ನವ ದೆಹಲಿ: ನೀರಾನೆಗಳು (Hippopotamus) ಒಂದರ್ಥದಲ್ಲಿ ಸಾಧು ಪ್ರಾಣಿಗಳು. ಯಾರೂ ಉಪಟಳ ಕೊಡದಿದ್ದರೆ ತಮ್ಮ ಪಾಡಿಗೆ ತಾವಿರುತ್ತವೆ. ಮೃಗಾಲಯದಲ್ಲೂ ಅಷ್ಟೇ. ನೀರಿನಲ್ಲಿ ಬಿದ್ದುಕೊಂಡು, ಹಸಿವಾದಾಗ ಮೇಲೆ ಬಂದು ಆಹಾರ ಸೇವಿಸಿ ತಮ್ಮದೇ ಲೋಕದಲ್ಲಿ ಇರುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ (Viral Video) ಮೃಗಾಲಯದ ತನ್ನ ಗೂಡಿನಿಂದ ತಲೆ ಹೊರ ಚಾಚಿದ ನೀರಾನೆಯನ್ನು ಸೆಕ್ಯುರಿಟಿ ಗಾರ್ಡ್ ಹೊಡೆದು ಒಳಗೆ ಕಳುಹಿಸಲು ಪ್ರಯತ್ನಿಸಿದ ಘಟನೆ ಸೆರೆಯಾಗಿದೆ.
ಮಾರ್ಚ್‌ನಲ್ಲಿ ನಡೆದ ನಡೆದ ಘಟನೆ ಇದಾಗಿದ್ದು, ಮತ್ತೆ ಮುನ್ನೆಲೆಗೆ ಬಂದಿದೆ. ಇದು ದೆಹಲಿಯ ಮೃಗಾಲಯವೊಂದರಲ್ಲಿ ನಡೆದ ಘಟನೆ ಎನ್ನಲಾಗಿದೆ. ಹಸಿವಾಗಿದ್ದರಿಂದಲೋ ಏನೋ ನೀರಾನೆಯೊಂದು ತಲೆ ಹೊರಗೆ ಹಾಕಿತ್ತು. ಮೃಗಾಲಯಕ್ಕೆ ಆಗಮಿಸಿದ ಪ್ರವಾಸಿಗರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಕೂಡಲೆ ಓಡಿ ಬಂದ ಸೆಕ್ಯುರಿಟಿ ಗಾರ್ಡ್ ಅದನ್ನು ಒಳಗೆ ಕಳುಹಿಸಲು ನೋಡಿದ. ನೀರಾನೆ ಆತನ ಮಾತು ಕೇಳಲಿಲ್ಲ. ಬಾಯಿ ದೊಡ್ಡದಾಗಿ ತೆರೆದು ಅತ್ತ ತೆರಳಲು ನಿರಾಕರಿಸಿತು. ಮತ್ತೆ ಆ ಗಾರ್ಡ್ ಅದರ ಮುಖಕ್ಕೆ ಒಂದೆರಡು ಪೆಟ್ಟು ಕೊಟ್ಟ. ಮೆದುವಾಗಿ ಅದರ ಮುಖವನ್ನು ತಳ್ಳಿದ. ಕೊನೆಗೆ ನೀರಾನೆ ತೆಪ್ಪಗೆ ಹೋಗಿ ಮಲಗಿಕೊಂಡಿತು.
Funny kalesh b/w Security guard and Hippo at Zoo pic.twitter.com/JGEC4Ssr5r
— Ghar Ke Kalesh (@gharkekalesh) October 3, 2023
ಈ ವಿಡಿಯೊವನ್ನು ಈಗಾಗಲೇ 1 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವು ಮಂದಿ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕೆಲವರು ಸೆಕ್ಯುರಿಟಿ ಗಾರ್ಡ್‌ನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪ್ರಾಣಿಗೆ ಈ ರೀತಿ ಹೊಡೆಯುವುದು, ಹಿಂಸೆ ನೀಡುವುದು ತಪ್ಪು ಎಂದು ಹೇಳಿದ್ದಾರೆ.
”ಈ ವಿಡಿಯೊ ನೋಡುವಾಗ ಒಂದು ಕಡೆ ನೋವಾದರೆ ಇನ್ನೊಂದು ಕಡೆ ಭಯಾನಕ ಅನುಭವವಾಯಿತು. ನೀರಾನೆಗಳು ಕೆಲವೊಮ್ಮೆ ನೋವಾದರೆ, ತಮ್ಮನ್ನು ರಕ್ಷಿಸಿಕೊಳ್ಳಲು ಕೆರಳುತ್ತವೆ” ಎಂದು ಒಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, ”ಪಾಪದ ಸೆಕ್ಯುರಿಟಿ ಗಾರ್ಡ್ ಯಾವುದೇ ತರಬೇತಿ ಇಲ್ಲದೆ, ಸುರಕ್ಷತೆ ಇಲ್ಲದೆ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ನೀರಾನೆ ಕೆರಳಿದರೆ ಆತನನ್ನು ನಿಮಿಷದ ಮೊದಲೇ ಮುಗಿಸಿ ಬಿಡುವ ಅಪಾಯವಿದೆ” ಎಂದು ಕಳವಳಗೊಂಡಿದ್ದಾರೆ. “ಪ್ರಾಣಿಯನ್ನು ಹೊಡೆಯುವುದು ತಪ್ಪು. ಪ್ರಾಣಿಯನ್ನು ಹೊಡೆಯಬಾರದು. ಪ್ರಾಣಿಗಳನ್ನು ಬಂಧಿಯಾಗಿಡಬಾರದು. ಪ್ರಾಣಿಗಳು ಅಭಯಾರಣ್ಯಗಳಲ್ಲಿ ಇರಬೇಕು, ಮಾನವ ಸಂತೋಷಕ್ಕಾಗಿ ಅಲ್ಲ” ಎಂದು ಮಗದೊಬ್ಬರು ಟ್ವೀಟ್ ಮಾಡಿದ್ದಾರೆ. “ಆ ಸೆಕ್ಯುರಿಟಿ ಧೈರ್ಯಶಾಲಿ! ನೀರಾನೆ ತುಂಬಾ ಮುದ್ದಾಗಿದೆ. ಅದು ತಾನೆಷ್ಟು ಬಲಶಾಲಿ ಎನ್ನುವುದನ್ನು ಮರೆತಂತಿದೆ” ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Viral Video: ನೆಲವ ಬಿಟ್ಟು ನೀರ ಮೇಲೆ ನಡೆದ ಜೇಡ; ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು
ನೀರಾನೆ ಬೃಹತ್ ಗಾತ್ರದ ಉಭಯಚರ ಪ್ರಾಣಿ. ಇದು ಆನೆ ಮತ್ತು ಖಡ್ಗಮೃಗದ ನಂತರ ಭೂಮಿ ಮೇಲೆ ಕಂಡು ಬರುವ ಅತಿದೊಡ್ಡ ಸಸ್ತನಿ. ನೀರಾನೆ ಅಗಲವಾದ ಬಾಯಿ, ಬಹುತೇಕ ಕೂದಲಿಲ್ಲದ ದೇಹ, ಕಂಬದಂತಹ ಕಾಲು ಹೊಂದಿದೆ. ಇದು ಗಂಟೆಗೆ 30 ಕಿ.ಮೀ. ಓಡುವ ಸಾಮರ್ಥ್ಯವನ್ನು ಹೊಂದಿದೆ. ನೀರಾನೆಗಳು ನದಿಗಳು, ಸರೋವರಗಳು ಮತ್ತು ಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ.