ಚೆನ್ನೈ: ಮಕ್ಕಳಿಗಾಗಿ ತಾಯಿ, ತಂದೆ ಲಾಲಿ ಹಾಡನ್ನು ಹಾಡಿ ಮಲಗಿಸುವುದು ಸಾಮಾನ್ಯ. ಅಂತಹ ಅದೆಷ್ಟೋ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ ಕೂಡ. ಆದರೆ ಈ ವಿಡಿಯೊ ಆ ರೀತಿಯದ್ದಲ್ಲ. ಹಾಸಿಗೆ ಹಿಡಿದಿರುವ ಅಪ್ಪನಿಗಾಗಿ ಮಗನೇ ಹಾಡನ್ನು ಹಾಡುವ ವಿಶೇಷವಾದ ವಿಡಿಯೊವಿದು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News : ಕೈಗೆ ಸಿಕ್ಕಿದ್ದ ಲಕ್ಷಾಂತರ ಮೌಲ್ಯದ ನಾಣ್ಯವನ್ನು ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವತಿ
105 ವರ್ಷದ ಅಪ್ಪ ಹಾಸಿಗೆ ಮೇಲೆ ಮಲಗಿದ್ದಾರೆ. ಹಾಸಿಗೆ ಮೇಲೆ ಅವರ ಪಕ್ಕದಲ್ಲಿಯೇ ಕುಳಿತಿರುವ 70 ವರ್ಷದ ಮಗ ಅಪ್ಪನೊಂದಿಗೆ ಪ್ರೀತಿಯಿಂದ ಮಾತನಾಡುತ್ತಿದ್ದಾರೆ. ಹಾಗೆಯೇ ಅವರಿಗಾಗಿ ಹಾಡನ್ನೂ ಹಾಡುತ್ತಾರೆ. ಇದೆಲ್ಲದಕ್ಕೂ ಹಾಸಿಗೆ ಮೇಲೆ ಮಲಗಿರುವ ತಂದೆ ಉತ್ತಮ ರೀತಿಯಲ್ಲಿ ಸ್ಪಂದಿಸುವುದನ್ನು ನೀವು ವಿಡಿಯೊದಲ್ಲಿ ಕಾಣಬಹುದು. ಈ ವಿಡಿಯೊ ತಮಿಳುನಾಡಿನದ್ದು ಎನ್ನಲಾಗಿದೆ.
ಈ ವಿಶೇಷ ವಿಡಿಯೊವನ್ನು ಗುಡ್ ಪರ್ಸನ್ ಶ್ರೀನಿ ಹೆಸರಿನವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ತಂದೆಗೆ 100+ ವರ್ಷ. ಮಗನಿಗೆ 75 ವರ್ಷ. ಮುಂದಿನ ಪೀಳಿಗೆಗಳಲ್ಲಿ ನಾವು ಇಂಥಹ ಬಾಂಧವ್ಯಗಳು ಉಳಿದುಕೊಳ್ಳುತ್ತದೆಯೇ?” ಎಂದು ಅವರು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವಿಡಿಯೊವನ್ನು ಲಕ್ಷಾಂತರ ಮಂದಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ. “ಮಕ್ಕಳು ತಂದೆಯನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಅಪರೂಪ” ಎಂದು ಜನರು ಕಾಮೆಂಟ್ ಹಾಕಲಾರಂಭಿಸಿದ್ದಾರೆ.
ಜಗನ್ನಾಥನ್ ಹೆಸರಿನವರು ಈ ಟ್ವೀಟ್ ಗೆ ಕಾಮೆಂಟ್ ಮಾಡಿದ್ದು, “ಇದು ನನ್ನ ತಂದೆಯ ವಿಡಿಯೊ. ಇದೇ ಜನವರಿ 19ರಂದು ಅವರ 105ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಿದೆವು. ಹಾಡುತ್ತಿರುವುದು ನನ್ನ ತಮ್ಮ. ಅವರಿಗೆ 68 ವರ್ಷ. ನನಗೀಗ 75 ವರ್ಷ” ಎಂದು ಹೇಳಿದ್ದಾರೆ.