Site icon Vistara News

Viral Video: ಥೂ ಅಸಹ್ಯ! ಹಣಕ್ಕಾಗಿ ವಿದ್ಯಾರ್ಥಿಗಳಿಂದ ದಾನಿಗಳ ಕಾಲು ನೆಕ್ಕಿಸಿದ ಶಾಲಾ ನಿರ್ವಾಹಕರು

Viral video us

Viral video us

ವಾಷಿಂಗ್ಟನ್‌: ನಿಧಿ ಸಂಗ್ರಹದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ದಾನಿಗಳ ಕಾಲ್ಬೆರಳುಗಳನ್ನು ಚೀಪುವ ಮತ್ತು ನೆಕ್ಕುವ ಆಘಾತಕಾರಿ ವಿಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ. ಅಮೆರಿಕದ ಶಾಲೆಯಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಒಕ್ಲಹೋಮದ ಡೀರ್‌ ಕ್ರೀಕ್‌ ಹೈಸ್ಕೂಲ್‌ (Deer Creek High School)ನ ಕನಿಷ್ಠ 4 ವಿದ್ಯಾರ್ಥಿಗಳು ನೆಲದ ಮೇಲೆ ಮಲಗಿ, ಚೇರ್‌ನಲ್ಲಿ ಕುಳಿತ ವ್ಯಕ್ತಿಗಳ ಕಾಲ್ಬೆರಳುಗಳನ್ನು ಚೀಪುವ, ನೆಕ್ಕುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ (Viral Video).

ಅನೇಕ ವಿದ್ಯಾರ್ಥಿಗಳು ಈ ಕೃತ್ಯಕ್ಕೆ ಹುರಿದುಂಬಿಸುತ್ತಿರುವುದು ಕೂಡ ಕಂಡು ಬಂದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಸಾಕಷ್ಟು ಟೀಕೆ ವ್ಯಕ್ತವಾದ ಬಳಿಕ ಘಟನೆ ಬಗ್ಗೆ ತನಿಖೆ ನಡೆಸಲು ಒಕ್ಲಹೋಮ ಸ್ಟೇಟ್ ಡಿಪಾರ್ಟ್‌ಮೆಂಟ್‌ ಆಫ್ ಎಜುಕೇಶನ್ (Oklahoma State Department of Education) ಮುಂದಾಗಿದೆ. ಒಕ್ಲಹೋಮ ರಾಜ್ಯ ಸೂಪರಿಂಟೆಂಡೆಂಟ್ ರಿಯಾನ್ ವಾಲ್ಟರ್ಸ್ ಪ್ರತಿಕ್ರಿಯಿಸಿ, “ಇದು ಅಸಹ್ಯಕರ. ನಾವು ಒಕ್ಲಹೋಮ ಶಾಲೆಗಳಲ್ಲಿನ ಈ ಕೊಳೆಯನ್ನು ಸ್ವಚ್ಛಗೊಳಿಸುತ್ತಿದ್ದೇವೆ. ನಮ್ಮ ಸಂಸ್ಥೆ ತನಿಖೆ ನಡೆಸುತ್ತಿದೆʼʼ ಎಂದು ಹೇಳಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ “ಇದು ಮಕ್ಕಳ ಮೇಲಿನ ದೌರ್ಜನ್ಯ” ಎಂದು ಅವರು ಬರೆದಿದ್ದಾರೆ.

ಖಂಡನೆ

ಮೂಲಗಳ ಪ್ರಕಾರ ಈ ವಿಡಿಯೊವನ್ನು 2024ರ ಫೆಬ್ರವರಿ 29ರಂದು ಕ್ಲಾಶ್ ಆಫ್ ಕ್ಲಾಸಸ್ ಅಸೆಂಬ್ಲಿಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ. ಪ್ರೌಢಶಾಲೆಯ ಒಂದು ವಾರದ ನಿಧಿಸಂಗ್ರಹ ಅಭಿಯಾನದ ಒಂದು ಭಾಗವಾಗಿ ಈ ವಿಚಿತ್ರ ಟೂರ್ನಮೆಂಟ್‌ ನಡೆಸಲಾಗಿದೆ. 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಕಾಲ್ಬೆರಳು ಚೀಪುವ ಪಂದ್ಯಾವಳಿಯಂತಹ ಸ್ಪರ್ಧೆಗಳಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು ಎಂದು ಮೂಲಗಳು ಸಮರ್ಥನೆ ಬೇರೆ ಮಾಡಿಕೊಂಡಿವೆ. ಈ ಅಭಿಯಾನದಲ್ಲಿ ಒಟ್ಟು 152,830.38 ಡಾಲರ್ (1,26,60,621.51 ರೂ.) ಸಂಗ್ರಹಿಸಲಾಗಿದೆ. ಶಾಲೆಯ ವಂಡರ್ ಫುಲ್ ವೀಕ್ ಆಫ್ ಫಂಡ್ ರೈಸಿಂಗ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ನಂತರ ನಿರ್ವಾಹಕರು ಪೋಷಕರು ಮತ್ತು ವಿದ್ಯಾರ್ಥಿಗಳ ಬಳಿ ಈ ಕೃತ್ಯಕ್ಕಾಗಿ ಕ್ಷಮೆಯಾಚಿಸಿದರು.

ಆಘಾತ

ಈ ಘಟನೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದು ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಧಿ ಸಂಗ್ರಹದ ಹೆಸರಿನಲ್ಲಿ ಇಂತಹ ವಿಕೃತಿ ಸಹಿಸಲು ಸಾಧ್ಯವಿಲ್ಲ ಎಂದು ಹಲವರು ತಿಳಿಸಿದ್ದಾರೆ. ವಿದ್ಯಾರ್ಥಿಯೊಬ್ಬ ಮಾತನಾಡಿ, “ವಿಡಿಯೊ ನೋಡಿ ಶಾಕ್‌ಗೆ ಒಳಗಾದೆ. ಅವರು ಅದೆಲ್ಲವನ್ನೂ ಮಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ನನಗೆ ಒಂದು ರೀತಿಯ ಅಸಹ್ಯವಾಯಿತು ಮತ್ತು ನಾನು ಅಲ್ಲಿ ಇರಲಿಲ್ಲ ಎಂದು ಸಮಾಧಾನವೂ ಆಯ್ತುʼʼ ಎಂದು ಹೇಳಿದ್ದಾರೆ.

ʼʼಅವರು ಒಂದು ಒಳ್ಳೆಯ ಉದ್ದೇಶಕ್ಕಾಗಿ ನಿಧಿ ಸಂಗ್ರಹಿಸುತ್ತಿರುವುದು ಶ್ಲಾಘನೀಯ. ಇದಕ್ಕಾಗಿ ಕೆಲವೊಂದು ಮೋಜಿನ ಚಟುವಟಿಕೆ ನಡೆಸುವುದು ತಪ್ಪಲ್ಲ. ಆದರೆ ಇದು ಮಾತ್ರ ಅತಿರೇಕವಾಯ್ತು. ವಿಡಿಯೊ ನೋಡಿ ಅಸಹ್ಯ ಎನಿಸಿತುʼʼ ಎಂದು ಪೋಷಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Viral News: ವೈದ್ಯರ ಎಡವಟ್ಟು; ಪಿತ್ತಕೋಶದ ಶಸ್ತ್ರಚಿಕಿತ್ಸೆ ಬದಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರು !

ವಿಡಿಯೊ ನೋಡಿ ಆಘಾತದಿಂದ ಚೇತರಿಸಿಕೊಳ್ಳಲು ಕೆಲವು ಸಮಯವೇ ಹಿಡಿಯಿತು ಎಂದು ನೆಟ್ಟಿಗರು ಹೇಳಿದ್ದಾರೆ. ʼʼನಾವು ಹೈಸ್ಕೂಲ್‌ನಲ್ಲಿರುವಾಗ ನಿಧಿ ಸಂಗ್ರಹಕ್ಕಾಗಿ ಕ್ಯಾಂಡಿ ಮಾರಾಟ ಮಾಡಿದ್ದೆವುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಶಿಕ್ಷಕರು ಮತ್ತು ಸಂಘಟಕರು ಈ ಅಸಹ್ಯ ಕಾರ್ಯಕ್ಕೆ ಹೇಗೆ ಒಪ್ಪಿಗೆ ಸೂಚಿಸಿದರು?ʼʼ ಎಂದು ಇನ್ನೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ವಿಡಿಯೊ ನೋಡಿದ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version