ಬೆಂಗಳೂರು: ಅಣ್ಣ-ತಂಗಿ ಸಂಬಂಧ ಎನ್ನುವುದು ಬಹಳ ಪವಿತ್ರ ಮತ್ತು ಮುಖ್ಯ. ಮನೆಯೊಳಗೆ ಅವರಿಬ್ಬರು ಎಷ್ಟೇ ಜಗಳವಾಡಲಿ ಹೊರಗೆ ಬಂದಾಗ ಇಬ್ಬರು ಒಂದೇ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಹೆಗಲು ಕೊಟ್ಟೇ ಕೊಡುತ್ತಾರೆ. ಇತರರ ಮುಂದೆ ಪರಸ್ಪರ ಬಿಟ್ಟು ಕೊಡುವುದಿಲ್ಲ. ಇದೀಗ ಪುಟಾಣಿ ಅಣ್ಣ-ತಂಗಿಯರಿಬ್ಬರ ವಿಡಿಯೊಗಳು ಈ ವಿಚಾರಕ್ಕೆ ಸದ್ದು ಮಾಡುತ್ತಿದೆ (Viral Video). ತನ್ನ ತಂಗಿಯ ವಿಚಾರದಲ್ಲಿ ಅಣ್ಣ ಎಷ್ಟೊಂದು ಕಾಳಜಿ ವಹಿಸುತ್ತಾನೆ ಎನ್ನುವುದನ್ನು ಈ ವಿಡಿಯೊಗಳೇ ಸಾಕ್ಷಿ. ತುಂಬಾ ಚಿಕ್ಕವನಾದರೂ ಆತನ ಪ್ರಬುದ್ಧತೆಗೆ, ತಂಗಿಯ ಬಗೆಗಿನ ಕಾಳಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. 2022ರ ವಿಡಿಯೊ ಮತ್ತು ಈ ವರ್ಷದ ವಿಡಿಯೊವನ್ನು ಜತೆಗೆ ಶೇರ್ ಮಾಡಲಾಗಿದೆ. ವರ್ಷ ಉರುಳಿದರೂ ಅಣ್ಣನ ಕಾಳಜಿಯಲ್ಲಿ ಒಂದಿನಿತೂ ಬದಲಾವಣೆ ಕಂಡು ಬಂದಿಲ್ಲ ಎನ್ನುವುದು ವಿಶೇಷ.
ಮೊದಲ ವಿಡಿಯೊದಲ್ಲೇನಿದೆ?
ಆಶ್ಲೆ ಫಿಶರ್ ಎನ್ನುವವರ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೊಗಳನ್ನು ಶೇರ್ ಮಾಡಲಾಗಿದೆ. ಮೊದಲ ವಿಡಿಯೊದಲ್ಲಿ ಕೆರೆ ದಡದಲ್ಲಿನ ಉದ್ಯಾನವನ್ನು ತೋರಿಸುವ ಮೂಲಕ ದೃಶ್ಯ ಆರಂಭವಾಗುತ್ತದೆ. ಆ ಪಾರ್ಕ್‌ನಲ್ಲಿ ಇರಿಸಿದ್ದ ಟ್ರ್ಯಾಂಪೊಲಿನ್‌ನಲ್ಲಿ ಪುಟಾಣಿ ಬಾಲಕಿಯೊಬ್ಬಳು ನಿಂತಿದ್ದಾಳೆ. ಅದರ ಮೇಲಿನಿಂದ ಆಕೆಗೆ ಇಳಿಯಲು ಸಾಧ್ಯವಿಲ್ಲ. ಹೀಗಾಗಿ ಆಕೆಯ ಸಹೋದರ (ಆತನೂ ಪುಟ್ಟ ಬಾಲಕ) ನೆಲದಲ್ಲಿ ಬೆನ್ನು ಮೇಲ್ಮುಖವಾಗಿ ಇರುವಂತೆ ಮಲಗುತ್ತಾನೆ. ಆಕೆ ತನ್ನ ಸಹೋದರನ ಬೆನ್ನಿನ ಸಹಾಯದಿಂದ ನೆಲಕ್ಕೆ ಇಳಿಯುತ್ತಾಳೆ. ಆತ ತನ್ನ ತಂಗಿಯ ರಕ್ಷಣೆಗೆಗಾಗಿ ಎಂತಹ ಕೆಲಸ ಮಾಡಲೂ ತಯಾರು ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಇದು ಕಳೆದ ವರ್ಷದ ವಿಡಿಯೊ.
ಎರಡನೇ ವಿಡಿಯೊ
ಇದರ ಜತೆಗೆ ಈ ವರ್ಷದ ವಿಡಿಯೊವೊಂದನ್ನೂ ಶೇರ್ ಮಾಡಲಾಗಿದೆ. ಇದರಲ್ಲಿಯೂ ಅದೇ ಅಣ್ಣ-ತಂಗಿಯ ಬಾಂಧವ್ಯದ ತುಣುಕುಗಳಿವೆ. ಈ ಬಾರಿ ಅಣ್ಣ ಟ್ರ್ಯಾಂಪೊಲಿನ್ ಹೇಗೆ ಹತ್ತಬೇಕು ಎನ್ನುವುದನ್ನು ತನ್ನ ತಂಗಿಗೆ ಪ್ರಾಯೋಗಿಕವಾಗಿ ಹೇಳಿಕೊಡುತ್ತಾನೆ. ಅಣ್ಣ ಮಾಡುವಂತೆಯೇ ಮಾಡಿ ಟ್ರ್ಯಾಂಪೊಲಿನ್ ಮೇಲೆ ಹತ್ತಲು ಆಕೆ ಯಶಸ್ವಿಯಾಗುತ್ತಾಳೆ. “ಒಂದು ವರ್ಷದ ನಂತರ ಈಗ ಅವನು ಅವಳಿಗೆ ಸ್ವಂತವಾಗಿ ಜಿಗಿಯುವ ತಂತ್ರವನ್ನು ಕಲಿಸುತ್ತಿದ್ದಾನೆ. ಅವರಿಬ್ಬರು ಖಂಡಿತವಾಗಿಯೂ ಯಾವಾಗಲೂ ಜೊತೆಯಾಗುವುದಿಲ್ಲ… ಆದರೆ ಆಕೆ ‘ನನಗೆ ಸಹಾಯ ಮಾಡಿ’ ಎಂದು ಹೇಳಿದಾಗ ಒಂದು ಕ್ಷಣವೂ ಯೋಚಿಸದೆ ಓಡಿ ಹೋಗಿ ಅವನು ಏನು ಮಾಡಬೇಕೆಂದು ಅವಳಿಗೆ ತೋರಿಸುತ್ತಾನೆ. ಒಬ್ಬರನ್ನೊಬ್ಬರು ಚೆನ್ನಾಗಿ ಪ್ರೀತಿಸಲು ದೇವರು ಅವರಿಗೆ ಕಲಿಸುತ್ತಲೇ ಇರಲಿ” ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Viral Video: ನನ್ನ ಸ್ನೇಹಿತನನ್ನು ಯಾರೂ ಮುಟ್ಟಬೇಡಿ; ನೆಟ್ಟಿಗರ ಗಮನ ಸೆಳೆದ ಬೆಕ್ಕಿನ ಪೊಸೆಸಿವ್‌ನೆಸ್
ಹೃದಯಸ್ಪರ್ಶಿ ಎಂದ ನೆಟ್ಟಿಗರು
ಸಹಜವಾಗಿಯೇ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಸಹೋದರ ಸಂಬಂಧವನ್ನು ನೋಡಿ ಅನೇಕರು ಭಾವುಕರಾಗಿದ್ದಾರೆ. ʼʼಅವನು ಅತ್ಯುತ್ತಮ ಸಹೋದರʼʼ ಎಂದು ಒಬ್ಬರು ಹೇಳಿದ್ದಾರೆ. ʼʼಅವನು ಯಾವತ್ತಿಗೂ ಅವಳ ಬಗ್ಗೆ ಕಾಳಜಿ ತೋರಿಸುತ್ತಿದ್ದಾನೆʼʼ ಎಂದು ಇನ್ನೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಸಂಬಂಧದ ಮೌಲ್ಯವನ್ನು, ಪ್ರಾಧಾನ್ಯಯತೆಯನ್ನು ಈ ವಿಡಿಯೊ ಎತ್ತಿ ಹಿಡಿಯುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಒಂದು ಕುಟುಂಬ ಎಂದರೆ ಅಲ್ಲಿ ಜವಾಬ್ದಾರಿ ಎನ್ನುವುದನ್ನೂ ಮೀರಿ ಪರಸ್ಪರ ಪ್ರೀತಿ, ವಿಶ್ವಾಸ, ಕಾಳಜಿ ತುಂಬಿರಬೇಕು ಎನ್ನುವುದನ್ನು ಈ ಪುಟಾಣಿಗಳು ಉತ್ತಮವಾಗಿ ಸಾರಿ ಹೇಳಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.