ಬೆಂಗಳೂರು: ಬೇಟೆಯಾಡುವ ವಿಚಾರದಲ್ಲಿ ಹದ್ದು, ಗಿಡುಗ ಎತ್ತಿದ ಕೈ. ಆಗಸದಲ್ಲಿ ಹಾರಾಡುವ ಅವು ಭೂಮಿಯ ಮೇಲೆ ಓಡಾಡುವ ಸಣ್ಣ ಪ್ರಾಣಿಗಳನ್ನೂ ಗುರುತಿಸಿ ಆಕ್ರಮಣ ಮಾಡುತ್ತವೆ. ಕೆಲವೊಮ್ಮೆ ಸಮುದ್ರದೊಳಗಿನ ಮೀನನ್ನೂ ಸೆರೆ ಹಿಡಿಯುತ್ತವೆ. ನಾವು ಅತ್ಯುತ್ತಮ ಬೇಟೆಗಾರರ ಪಟ್ಟಿ ಮಾಡುತ್ತ ಹೋದರೆ ಅದರಲ್ಲಿ ಸಿಂಹ, ಹುಲಿ, ಚಿರತೆ ಮುಂತಾದ ಪ್ರಾಣಿಗಳ ಜತೆಗೆ ಹದ್ದು, ಗಿಡುಗಗಳೂ ಸೇರುತ್ತವೆ. ಇದೀಗ ಗಿಡುವೊಂದು ಮುದ್ದಾದ ಬೆಕ್ಕಿನ ಮರಿ ಮೇಲೆ ದಾಳಿ ನಡೆಸಲು ಮುಂದಾಗುವ ವಿಡಿಯೊವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆದರೆ ನುರಿತ ಬೇಟೆಗಾರ ಎಂದೇ ಪರಿಗಣಿಸಲ್ಪಡುವ ಗಿಡುಗ ಇಲ್ಲಿ ವಿಫಲವಾಗುತ್ತದೆ. ಅದು ಹೇಗೆ ಎನ್ನುವುದನ್ನು ತಿಳಿಯಲು ವಿಡಿಯೊ ನೋಡಿ (Viral Video).
ವಿಡಿಯೊದಲ್ಲೇನಿದೆ?
ಬೆಕ್ಕಿನ ಮರಿಯೊಂದನ್ನು ನೋಡಿದ ಗಿಡುಗ ಭರ್ಜರಿ ಬೇಟೆ ಸಿಕ್ಕ ಖುಷಿಯಲ್ಲಿ ಹಾರಿಕೊಂಡು ಬರುವುದರೊಂದಿಗೆ ಈ ವಿಡಿಯೊ ಆರಂಭವಾಗುತ್ತದೆ. ಬೆಕ್ಕಿನ ಮರಿಯನ್ನು ಎಳೆದೊಯ್ಯಬೇಕು ಎನ್ನುವ ಆತುರದಲ್ಲಿ ಗಿಡುಗ ಕಾಲುಗಳಿಂದ ದಾಳಿ ನಡೆಸುತ್ತದೆ. ಆಶ್ಚರ್ಯ! ಅಲ್ಲೇ ಎದುರಿಗಿದ್ದರೂ ಬೆಕ್ಕಿನ ಮರಿ ಗಿಡುಗನ ದಾಳಿಗೆ ಸಿಗುವುದೇ ಇಲ್ಲ. ಯಾಕೆಂದರೆ ಅದು ಕಾರಿನ ಒಳಗಿದೆ. ಗಾಜಿನ ಅರಿವೇ ಇಲ್ಲದೆ ಆಕ್ರಮಣ ನಡೆಸಿದ ಗಿಡುಗ ಬೇಸ್ತು ಬಿದ್ದಿತ್ತು. ತನ್ನ ಹತ್ತಿರ ಬಂದ ಗಿಡುಗನನ್ನು ಕಂಡು ಭಯಪಟ್ಟ ಬೆಕ್ಕಿನ ಮರಿ ಕಾರಿನ ಒಳಗೆ ಅವಿತು ಕುಳಿತುಕೊಳ್ಳುತ್ತದೆ. ಮೊದ ಮೊದಲು ಗಾಜಿನ ವಿಚಾರ ತಿಳಿಯದೇ ಗಿಡುಗ ಬೆಕ್ಕಿನ ಬೇಟೆಗೆ ಸತತ ಪ್ರಯತ್ನ ನಡೆಸುತ್ತದೆ. ಗಿಡುಗ ತನ್ನ ಕಾಲಿನ ಉಗುರುಗಳ ಸಹಾಯದಿಂದ ಕಾರಿನ ಗಾಜಿಗೆ ಪರಚುತ್ತಾ ಹರಸಾಹಸ ಪ್ರದರ್ಶಿಸುತ್ತದೆ. ಕೊನೆಗೆ ಬೇಟೆ ಕೈಗೆ ಸಿಗದ ನಿರಾಸೆಯಲ್ಲಿ, ʼಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲʼ ಎಂಬಂತೆ ಗಿಡುಗ ವಾಪಸ್ ಹೊರಟು ಹೋಗುತ್ತದೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಹಲವರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಬಡಪಾಯಿ ಬೆಕ್ಕು ಬಹಳ ಹೆದರಿದೆʼʼ ಎಂದು ಒಬ್ಬರು ಹೇಳಿದ್ದಾರೆ. “ನಾನಾಗಿದ್ದರೆ ಆ ಸಂದರ್ಭದಲ್ಲಿ ವಿಂಡ್‌ಶೀಲ್ಡ್ ವೈಪರ್ ಅನ್ನು ಆನ್ ಮಾಡುತ್ತಿದ್ದೆ” ಎಂದು ಇನ್ನೊಬ್ಬರು ತಿಳಿಸಿದ್ದಾರೆ. “ಬೆಕ್ಕಿನ ಮರಿ ಒಳಗೆ ಇದ್ದಿದ್ದು ಒಳ್ಳೆಯದೇ ಆಯ್ತು” ಎಂದು ಸಮಾಧಾನದ ನಿಟ್ಟಿಸಿರು ಬಿಟ್ಟಿದ್ದಾರೆ ಮಗದೊಬ್ಬರು. ʼʼಗಿಡುಗನಿಗೆ ಊಟವಿಲ್ಲ!” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ʼʼಒಂದು ವೇಳೆ ಬೆಕ್ಕಿನ ಮರಿ ಗಾಜಿನ ಒಳಗಡೆ ಇಲ್ಲದಿದ್ದರೆ ಮರುಕ್ಷಣ 500 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತುʼʼ ಎಂದು ಊಹಿಸಿದ್ದಾರೆ ಮತ್ತೊಬ್ಬರು. ʼʼಚಿಕ್ಕ-ಪುಟ್ಟ ಪ್ರಾಣಿಗಳು ಹೊರಗಡೆ ಹೋದಾಗ ಯಾವ ರೀತಿ ತೊಂದರೆಗೆ ಒಳಗಾಗುತ್ತವೆ ಎನ್ನುವುದನ್ನು ಈ ವಿಡಿಯೊ ತಿಳಿಸುತ್ತದೆʼʼ ಎಂದು ವೀಕ್ಷಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಬೆಕ್ಕಿನ ಮರಿ ಯಾವುದೇ ಅಪಾಯವಿಲ್ಲದೆ ಪಾರಾದುದನ್ನು ನೋಡಿ ಅನೇಕರು ಸಮಾಧಾನ ಪಟ್ಟುಕೊಂಡಿದ್ದಾರೆ.
Nature is brutal 😲 pic.twitter.com/2qDjt15KaC
— Terrifying Nature (@TerrifyingNatur) May 22, 2023
ಹಿಂದೆಯೂ ವೈರಲ್ ಆಗಿತ್ತು
ಕೆಲವು ತಿಂಗಳ ಹಿಂದೆ ಗಿಡುಗವೊಂದು ಜೀವಂತ ನರಿಯನ್ನು ಬೇಟೆಯಾಡಿ ಎತ್ತಿಕೊಂಡು ಹಾರುವ ದೃಶ್ಯ ವೈರಲ್ ಆಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ: Viral Video; ಮಗಳೊಂದಿಗೆ ಮುದ್ದಾಗಿ ಹೊಸ ವರ್ಷ ಆಚರಿಸಿದ ಧೋನಿ