ಮಂಗಗಳು ಬಾಳೆಹಣ್ಣು ಸುಲಿದು ತಿನ್ನುವುದನ್ನು ನೋಡಿರುತ್ತೇವೆ. ಆದರೆ ಆನೆ? ಆನೆ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುವುದನ್ನು ಎಲ್ಲಾದರೂ ನೋಡಿದ್ದೀರಾ? ಆನೆ ಹೇಗೆ ಸಿಪ್ಪೆ ಸುಲಿದೀತು ಅಂತೀರಾ? ಹಾಗಂತ ಆನೆ ಸಿಪ್ಪೆ ಸುಲಿಯಲು ಸಾಧ್ಯವೇ ಇಲ್ಲ ಎಂದು ನೀವು ಅಂದುಕೊಂಡರೆ ನಿಮ್ಮ ಲೆಕ್ಕಾಚಾರ ಈ ವಿಡಿಯೋ ನೋಡಿದ ಮೇಲೆ ತಲೆಕೆಳಗಾಗಲಿದೆ.
ಆನೆಗಳನ್ನು ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಹೇಳಲಾಗುತ್ತದೆ. ಈ ದೈತ್ಯಗಾತ್ರದ ಪ್ರಾಣಿಯ ಬುದ್ಧಿಮತ್ತೆಯ ಬಗ್ಗೆ ಮನುಷ್ಯನಾದ ನಮಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಎಂದೇ ಹೇಳಬೇಕು. ಯಾಕೆಂದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಪಂಗ್ ಫಾ ಎಂಬ ಹೆಸರಿನ ಏಷ್ಯನ್ ಆನೆಯೊಂದು ಬಾಳೆಹಣ್ಣನ್ನು ಸುಲಿದು ತಿನ್ನುತ್ತಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಬರ್ಲಿನ್ ಮೃಗಾಲಯದ ಈ ಆನೆ ಬಾಳೆಹಣ್ಣನ್ನು ಚಂದಕ್ಕೆ ಸುಲಿದು ತಿನ್ನುತ್ತದೆ. ಇದಕ್ಕೆ ಸುಲಿಯುವುದನ್ನು ಯಾರೂ ಕಲಿಸಿ ಕೊಟ್ಟಿಲ್ಲವಾದರೂ ಮನುಷ್ಯರು ಸುಲಿದು ತಿನ್ನುವುದನ್ನು ಗಮನಿಸಿಯೇ ತಾನೇ ಕಲಿತುಕೊಂಡಿದೆಯಂತೆ. ಅಷ್ಟೇ ಅಲ್ಲ. ಇದು ಕಪ್ಪಾದ, ಕಂದು ಬಣ್ಣಕ್ಕೆ ತಿರುಗಿದ ಬಾಳೆಹಣ್ಣನ್ನು ತಿನ್ನುವುದಿಲ್ಲವಂತೆ. ಹಳದಿ ಬಣ್ಣಕ್ಕೆ ತಿರುಗಿದ ಸರಿಯಾಗಿ ಹಣ್ಣಾದ ಬಾಳೆಹಣ್ಣನ್ನು ಇದಕ್ಕೆ ಕೊಟ್ಟರೆ, ಅದನ್ನು ಸೊಂಡಿಲಿನಲ್ಲಿ ತೆಗೆದುಕೊಂಡು, ಕೇವಲ ಸೊಂಡಿಲಿನ ಸಹಾಯದಿಂದಲೇ ಕಷ್ಟಪಟ್ಟು ಸುಲಿದು ಒಳಗಿನ ಹಣ್ಣನ್ನು ಮಾತ್ರ ತಿಂದು ಸಿಪ್ಪೆಯನ್ನು ಎಸೆಯುತ್ತದೆ. ಜೊತೆಗೆ ಸಿಪ್ಪೆಯೊಂದಿಗೆ ಹಣ್ಣಿನ ತುಂಡುಗಳು ಉಳಿದಿವೆಯೇ ಎಂದು ಚೆಕ್ ಮಾಡಿ ಹಣ್ಣಿನ ತುಂಡು ಉಳಿದಿದ್ದರಾದನ್ನು ತೆಗೆದು ತಿನ್ನುತ್ತದೆ. ಸಿಪ್ಪೆ ಕಪ್ಪಾದ ಅಥವಾ ಕಂದು ಬಣ್ಣಕ್ಕೆ ತಿರುಗಿದ ಬಾಳೆಹಣ್ಣುಗಳನ್ನು ಪಂಗ್ ಫಾ ತೆಗೆದುಕೊಂಡರೂ ಕೂಡಲೇ ಅದನ್ನು ಬೇಡವೆಂದು ಎಸೆದುಬಿಡುತ್ತದಂತೆ.
ಬರ್ಲಿನ್‌ನ ಬರ್ನ್‌ಸ್ಟೈನ್ ಸೆಂಟರ್ ಫಾರ್ ಕಂಪ್ಯೂಟೇಷನಲ್ ನ್ಯೂರೋಸೈನ್ಸ್ ವಿಭಾಗದ ಮೈಕಲ್ ಬ್ರೆಕ್ಟ್ ಹೇಳುವಂತೆ, ನಾವು ಇತ್ತೀಚೆಗೆ ಪಂಗ್ ಫಾ ಬಗೆಗೆ ಬಹಳ ವಿಶೇಷವಾದ ನಡವಳಿಕೆಗಳನ್ನು ಗಮನಿಸಿದೆವು. ಬಾಳೆಹಣ್ಣು ಸುಲಿವ ವೇಗ, ಅದನ್ನು ಸರಿಯಾಗಿ ಸುಲಿಯುವ ಚಾಕಚಕ್ಯತೆ ಎಲ್ಲವೂ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದವು. ಯಾರೂ ಕಲಿಸಿಕೊಡದಿದ್ದರೂ ಮನುಷ್ಯನ ನಡವಳಿಕೆಯನ್ನು ಗಮನಿಸಿಯೇ ತಾನು ಕಲಿತುಕೊಂಡಿದ್ದು ಇದರ ವಿಶೇಷ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಆಸ್ತಿ ಮೇಲಿನ ವ್ಯಾಮೋಹಕ್ಕೆ ಮೃತ ವೃದ್ಧೆಯ ಶವದಿಂದಲೇ ಬೆರಳಚ್ಚು ಪಡೆದ ವ್ಯಕ್ತಿ!