Site icon Vistara News

Viral Video: ಸೈಕಲ್‌ನಲ್ಲೇ ಗರ್ಬಾ ನೃತ್ಯ ಪ್ರದರ್ಶನ ನೀಡಿದ ಕಲಾವಿದರು; ಕೆಂಡವಾದ ನೆಟ್ಟಿಗರು!

garba

garba

ಸೂರತ್‌: ನವರಾತ್ರಿ ಸಡಗರ ಆರಂಭವಾಗಿದೆ. ದೇವಿಯ ಆರಾಧನೆಯನ್ನು ವಿವಿಧ ಕಡೆ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಹೇಳಿಕೇಳಿ ಭಾರತ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಇಲ್ಲಿ ಪ್ರತಿ ರಾಜ್ಯಕ್ಕೊಂದು ಸಂಸ್ಕೃತಿ ಇದೆ, ಪ್ರಾದೇಶಿಕವಾಗಿ ವಿವಿಧ ಸಂಪ್ರದಾಯವಿದೆ. ಉತ್ತರ ಭಾರತದಲ್ಲಿ ನವರಾತ್ರಿ ಸಂದರ್ಭದಲ್ಲಿ ಗರ್ಬಾ ನೃತ್ಯವನ್ನು ಆಯೋಜಿಸಲಾಗುತ್ತದೆ. ಈ ಸಾಂಪ್ರದಾಯಿಕ ನೃತ್ಯ ಪ್ರದರ್ಶನವಿಲ್ಲದೆ ನವರಾತ್ರಿ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಇದು ಗುಜರಾತ್‌ನ ಜನ ಜೀವನದಲ್ಲಿ ಹಾಸು ಹೊಕ್ಕಿದೆ. ಇದೀಗ ನವರಾತ್ರಿಯ ಆರಂಭ ದಿನವಾದ ರವಿವಾರ (ಅಕ್ಟೋಬರ್‌ 15) ಗುಜರಾತ್‌ನ ಸೂರತ್‌ನಲ್ಲಿ ಆಯೋಜಿಸಿದ್ದ ʼಸೈಕಲ್‌ನಲ್ಲಿ ಗರ್ಬಾ ಪ್ರದರ್ಶನʼದ (Bicycle Garba) ವಿಡಿಯೊ ವೈರಲ್‌ (Viral Video) ಆಗಿದೆ.

ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ ಆಯೋಜಿಸಿದ್ದ ಈ ವಿಶಿಷ್ಟ ಪ್ರಯತ್ನದಲ್ಲಿ ಅನೇಕ ಮಂದಿ ವಿವಿಧ ವಯೋಮಾನದ, ಪುರುಷರು, ಮಹಿಳೆಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ವಿಡಿಯೊವನ್ನು ಎಎನ್‌ಐ ಸುದ್ದಿ ಸಂಸ್ಥೆ ಎಕ್ಸ್‌ ಮೂಲಕ ಹಂಚಿಕೊಂಡಿದೆ. ಹಿನ್ನಲೆಯಲ್ಲಿ ಸಾಂಪ್ರದಾಯಿಕ ಗರ್ಬಾ ಹಾಡಿನ ರಾಗ ಕೇಳಿ ಬರುತ್ತಿದ್ದಂತೆ ಸೈಕಲ್‌ನಲ್ಲಿ ಪ್ರದರ್ಶನಕಾರರು ವೃತ್ತಾಕಾರದಲ್ಲಿ ಚಲಿಸುವುದು ಕಂಡು ಬರುತ್ತದೆ. ಅವರು ಸೈಕಲ್‌ ತುಳಿಯುತ್ತಾ ಹೆಜ್ಜೆ ಹಾಕುತ್ತಿರುವುದು ವಿಶೇಷ. ಎಲ್ಲರೂ ಒಂದೇ ರೀತಿಯ ಬಟ್ಟೆ ಧರಿಸಿದ್ದಾರೆ. “ನವರಾತ್ರಿಯ ಮೊದಲ ದಿನದಂದು ಆಚರಣೆಗಳು ಪ್ರಾರಂಭವಾಗುತ್ತಿದ್ದಂತೆ ಸೂರತ್ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ‘ಬೈಸಿಕಲ್ ಗರ್ಬಾ’ ಆಯೋಜಿಸಿದೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ನೆಟ್ಟಿಗರು ಏನಂದರು?

ಈ ವಿಶಿಷ್ಟ ಗರ್ಬಾ ನೃತ್ಯ ಪ್ರದರ್ಶನ ನೆಟ್ಟಿಗರ ಗಮನ ಸೆಳೆದಿದೆ. ಈಗಾಗಲೇ ಈ ವಿಡಿಯೊವನ್ನು 80 ಸಾವಿರಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಅಸಮಾಧಾನ ಸೂಚಿಸಿದ್ದಾರೆ. ʼʼಅದ್ಭುತ ಪ್ರಯತ್ನʼʼ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ತಮಾಷೆ ಮಾಡಿ, ʼʼಮುಂದಿನ ಬಾರಿ ವಿಮಾನದಲ್ಲಿ ಗರ್ಬಾ ಪ್ರದರ್ಶನ ನೀಡುವ ಯೋಜನೆ ಇದೆಯೇ?ʼʼ ಎಂದು ಪ್ರಶ್ನಿಸಿದ್ದಾರೆ. ಆದರೆ ಹಲವರು ಕಮೆಂಟ್‌ ಮಾಡಿ ಸಂಘಟಕರು ನಿಜವಾದ ಗರ್ಬಾ ನೃತ್ಯದ ಸಾರವನ್ನು, ಉದ್ದೇಶವನ್ನು ಕೆಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼಹೀಗ್ಯಾಕೆ?ʼʼ ಮಗದೊಬ್ಬರು ಪ್ರಶ್ನಿಸಿದ್ದಾರೆ. ʼʼಕೇವಲ ಜನರ ಗಮನ ಸೆಳೆಯಲು ಇಂತಹ ಪ್ರಯತ್ನ ಮಾಡಿ ಗರ್ಬಾ ನೃತ್ಯದ ಪಾವಿತ್ರ್ಯತೆಯನ್ನು ಕಲುಷಿತಗೊಳಿಸಲಾಗಿದೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಲ್ಲಿ ಮೊಬೈಲ್‌ ಟವರ್‌; ದೊಡ್ಡ ಸುದ್ದಿ ಎಂದ ಆನಂದ್‌ ಮಹೀಂದ್ರಾ

ಏನಿದು ಗರ್ಬಾ ನೃತ್ಯ?

ಗರ್ಬಾ ಗುಜರಾತ್‌ನ ಸಾಂಪ್ರದಾಯಿಕ ನೃತ್ಯ ಪ್ರಕಾರ. ಇದು ಗುಜರಾತ್‌ನ ಹಳ್ಳಿಗಳಲ್ಲಿ ಹುಟ್ಟಿಕೊಂಡಿತು ಎನ್ನಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅನೇಕ ಸಾಮಾಜಿಕ ಘಟನೆಗಳಂತೆ ಗರ್ಬಾ ಕೂಡ ಧಾರ್ಮಿಕ ಮಹತ್ವವನ್ನು ಹೊಂದಿದೆ. ಅದರಲ್ಲೂ ನವರಾತ್ರಿ ಸಮಯದಲ್ಲಿ ಇದರ ಪ್ರದರ್ಶನ ಇದ್ದೇ ಇರುತ್ತದೆ. ಇದನ್ನು ಪೂಜೆ ಮತ್ತು ಆರಾಧನೆಯ ಒಂದು ರೂಪವಾಗಿ ಒಂಬತ್ತು ರಾತ್ರಿ ಪ್ರದರ್ಶಿಸುವ ಸಂಪ್ರದಾಯವಿದೆ. ಸಂಜೆಯಿಂದ ಪ್ರಾರಂಭವಾಗಿ ಪುರುಷರು ಮತ್ತು ಮಹಿಳೆಯರು ದುರ್ಗಾ ಮಾತೆಯ ಗೌರವಾರ್ಥವಾಗಿ ತಡರಾತ್ರಿಯವರೆಗೆ ನೃತ್ಯ ಮಾಡುತ್ತಾರೆ. ಗುಜರಾತ್‌ನಲ್ಲಿ ನವರಾತ್ರಿ ಆಚರಣೆಗಳಲ್ಲಿ ಗರ್ಬಾ ಮುಖ್ಯವಾದರೂ ಇತರ ಸಮಯದಲ್ಲೂ ಪ್ರದರ್ಶಿಸಲಾಗುತ್ತದೆ. ಮದುವೆಯಂತಹ ಸಮಾರಂಭದಲ್ಲಿಯೂ ಗರ್ಬಾ ನೃತ್ಯ ಆಯೋಜಿಸಲಾಗುತ್ತದೆ.

Exit mobile version