ಬೆಂಗಳೂರು: ಹಾವು ನೋಡಿದರೆ ಬಿಡಿ ಹೆಸರು ಕೇಳಿದರೇನೆ ಅನೇಕ ಮಂದಿ ಬೆಚ್ಚಿ ಬೀಳುತ್ತಾರೆ. ಅದರಲ್ಲೂ ನಾಗರಹಾವು ಬಗ್ಗೆ ಭಕ್ತಿ ಮಿಶ್ರಿತ ಭಯವಿದೆ. ಗಮನಿಸಬೇಕಾದ ಸಂಗತಿ ಎಂದರೆ ಹಾವು ಕಂಡರೆ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳೂ ಬೆಚ್ಚುತ್ತವೆ. ದನವೊಂದು ನಾಗರಹಾವನ್ನು ನೋಡಿ ಗಾಬರಿಯಾಗುವ ವಿಡಿಯೊ ಇದೀಗ ವೈರಲ್ (Viral Video) ಆಗುತ್ತಿದೆ. ಈ ಸಮಯದಲ್ಲಿ ದನದ ನೆರವಿಗೆ ಧಾವಿಸದೆ ವಿಡಿಯೊ ಚಿತ್ರೀಕರಣ ಮಾಡುತ್ತಿರುವ ಬಗ್ಗೆಯೂ ಟೀಕೆ ವ್ಯಕ್ತವಾಗುತ್ತಿದೆ.
ʼಟಿಪ್ ಟಾಪ್ ಯಾತ್ರಾʼ ಎನ್ನುವ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶವೊಂದರಲ್ಲಿ ಮರಕ್ಕೆ ದನವನ್ನು ಕಟ್ಟಿಹಾಕುವುದನ್ನು ಕಾಣಬಹುದು. ಆರಂಭದಲ್ಲಿ ದನ ಶಾಂತವಾಗಿ ಸುಮ್ಮನೆ ನಿಂತುಕೊಂಡಿತ್ತು. ಆಗಲೇ ಅದು ಇರುವ ಕಡೆಗೆ ನಾಗರಹಾವೊಂದು ಹರಿದು ಬರಲಾರಂಭಿಸಿತು. ಆಗ ದನ ಉದ್ವಿಗ್ನಗೊಳ್ಳಲು ಮತ್ತು ಚಡಪಡಿಕೆಯಿಂದ ಅತ್ತ ಇತ್ತ ಚಲಿಸಲು ಶುರು ಮಾಡಿತು. ನಾಗರಹಾವು ನೇರ ಅದರ ಕಾಲ ಬಳಿಗೆ ಬಂತು. ದೂರ ಓಡಿ ಹೋಗಲು ದನ ಚಡಪಡಿಸಿದರೂ ಅದನ್ನು ಮರಕ್ಕೆ ಬಿಗಿಯಾಗಿ ಕಟ್ಟಿ ಹಾಕಿದ್ದರಿಂದ ಅದರ ಪ್ರಯತ್ನ ಫಲಿಸಲಿಲ್ಲ. ಇತ್ತ ಹಾವು ಕೂಡ ಸಾಕಷ್ಟು ಗೊಂದಲಕ್ಕೀಡಾಯಿತು. ಒಂದು ಹಂತದಲ್ಲಿ ಅದು ಹೆಡೆ ಎತ್ತಿ ದಾಳಿ ಮಾಡಲು ನೋಡಿತು. ಅದೃಷ್ಟವಶಾತ್ ಇದರಿಂದ ದನ ತಪ್ಪಿಸಿಕೊಂಡಿತು. ಪಟ್ಟು ಬಿಡದ ಹಾವು ಮತ್ತೊಮ್ಮೆ ಕಡಿಯಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಮತ್ತೆ ಅದರ ಪಾಡಿಗೆ ಅದು ಹೊರಟು ಹೋಯಿತು. ಅದುವರೆಗೆ ಉಸಿರು ಬಿಗಿ ಹಿಡಿದು ನೋಡುತ್ತಿದ್ದವರು ಕೊನೆಗೆ ʼಅಬ್ಬಾʼ ಎನ್ನುವ ಉದ್ಘಾರದೊಂದಿಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ದನ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಕ್ಕೆ ಹಲವು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಾವನ್ನು ತಡೆಯದೆ, ಜಾನುವಾರು ರಕ್ಷಣೆಗೆ ಮುಂದಾಗದೆ ಕೇವಲ ವಿಡಿಯೊ ಚಿತ್ರೀಕರಿಸುತ್ತಿದ್ದ ಕ್ಯಾಮೆರಾ ಮ್ಯಾನ್ ಬಗ್ಗೆ ಅನೇಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ದನದ ರಕ್ಷಣೆಗೆ ಮುಂದಾಗದೆ ವಿಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಗೆ ಮನುಷ್ಯತ್ವ ಇಲ್ಲವೆ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ. “ಅತ್ಯಧಿಕ ವ್ಯೂವ್ಸ್ ಪಡೆಯಬೇಕೆಂಬ ಹಪಾಹಪಿಯಲ್ಲಿ ಪ್ರಾಣಿಗಳ ಜೀವವನ್ನು ಕೆಲವರು ಅಪಾಯಕ್ಕೆ ತಳ್ಳುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ವಿಡಿಯೊ ನೋಡಿ ತುಂಬಾ ದುಃಖವಾಗುತ್ತದೆʼʼ ಎಂದು ಇನ್ನೊಬ್ಬರು ನೋವು ತೋಡಿಕೊಂಡಿದ್ದಾರೆ. “ಈ ಛಾಯಾಗ್ರಾಹಕ ಭೂಮಿ ಮೇಲಿನ ಅತ್ಯಂತ ಮೂರ್ಖ ವ್ಯಕ್ತಿ” ಎಂದು ಮತ್ತೊಬ್ಬರು ಜರೆದಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಹಲವರ ಮನ ಕಲಕಿದ್ದಂತೂ ನಿಜ.
ಇದನ್ನೂ ಓದಿ: Viral Video: ಹಗಲು-ರಾತ್ರಿ ಉಂಟಾಗುವುದು ಹೇಗೆ ಗೊತ್ತೆ? ಈ ವಿಡಿಯೊ ನೋಡಿ
ಸುಮಾರು 5 ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ ಲಕ್ಷಕ್ಕಿಂತ ಅದಿಕ ಮಂದಿ ನೋಡಿದ್ದಾರೆ. ಪ್ರಾಣಿಗಳು ಅಪಾಯಕ್ಕೆ ಸಿಲುಕಿದಾಗ ರಕ್ಷಣೆಗೆ ಧಾವಿಸದೆ ಅದನ್ನು ನೋಡಿ, ವಿಡಿಯೊ ಮಾಡುತ್ತಿರುವ ಘಟನೆ ಇದು ಮೊದಲ ಸಲವೇನಲ್ಲ. ಹಿಂದೆಯೂ ಈ ರೀತಿಯ ಹಲವು ಘಟನೆ ನಡೆದಿದ್ದರೂ ಜನ ಇನ್ನೂ ಬದಲಾಗಿಲ್ಲ ಎಂದು ಹಲವರು ವಿಷಾದ ವ್ಯಕ್ತಪಡಿಸುತ್ತಾರೆ.