ಹೊಸದಿಲ್ಲಿ: ಸಾಮಾನ್ಯವಾಗಿ ವಾಹನಗಳನ್ನು ಓಡಾಟಕ್ಕೆಂದು ಬಳಸುತ್ತೇವೆ. ಆದರೆ ಕೆಲವರು ಸಾಹಸ ಪ್ರದರ್ಶಿಸಲೆಂದೇ ವಾಹನ ಇಟ್ಟುಕೊಂಡಿದ್ದಾರಾ ಎನ್ನುವ ಅನುಮಾನ ನಮ್ಮಲ್ಲಿ ಮೂಡುವಷ್ಟು ವರ್ತಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನ ನಿಬಿಡ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವುದು ಸಾಮಾನ್ಯ ದೃಶ್ಯ ಎಂಬಂತಾಗಿದೆ. ಅದಕ್ಕಿಂತ ಭಿನ್ನವಾಗಿ ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಪ್ರಯಾಣಿಕ ಸೀಟ್‌ನಲ್ಲಿ ಕುಳಿತುಕೊಂಡೇ ಕಾರು ಚಲಾಯಿಸುವ ದೃಶ್ಯ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ (Viral Video).
ವಿಡಿಯೊದಲ್ಲೇನಿದೆ?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ರಸ್ತೆಯೊಂದರಲ್ಲಿ ಮಾರುತಿ ಆಲ್ಟೋ ಕಾರು ಸಂಚರಿಸುವ ದೃಶ್ಯದೊಂದಿಗೆ ವಿಡಿಯೊ ಆರಂಭವಾಗುತ್ತದೆ. ಬಳಿಕದ ದೃಶ್ಯ ನೀವು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಯಾಕೆಂದರೆ ಚಾಲಕ ಆತನ ಸೀಟ್‌ನಲ್ಲಿ ಕುಳಿತುಕೊಳ್ಳದೆ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದಾನೆ. ಅಲ್ಲದೆ ಆತ ಕೈ ಬದಲು ಕಾಲಿನಿಂದ ಸ್ಟೇರಿಂಗ್ ತಿರುಗಿಸುತ್ತಿರುವುದು ಕಂಡು ಬಂದಿದೆ. ಆತ ಪ್ರಯಾಣಿಕ ಸೀಟ್‌ನಲ್ಲೇ ಕುಳಿತುಕೊಂಡು ಕಾರನ್ನು ಬಹು ದೂರದವರೆಗೆ ಚಲಾಯಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
Teslalto 😭 pic.twitter.com/oDrhYHwphX
— Gagan🇮🇳 (@1no_aalsi_) December 13, 2023
ನೆಟ್ಟಿಗರ ಪ್ರತಿಕ್ರಿಯೆ ಏನು?
ಈಗಾಗಲೇ ವೈರಲ್ ಆಗಿರುವ ಈ ವಿಡಿಯೊವನ್ನು 1 ಲಕ್ಷಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ಸುಮಾರು 1,200 ಮಂದಿ ಲೈಕ್ ಬಟನ್ ಒತ್ತಿದ್ದಾರೆ. ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ ಇಂತಹ ಹುಚ್ಚು ಸಾಹಸ ಪ್ರದರ್ಶಿಸುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ. ರಸ್ತೆಯಲ್ಲಿ ಇಂತಹ ದುಸ್ಸಾಹಸಕ್ಕೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಹುತೇಕರು ಆಗ್ರಹಿಸಿದ್ದಾರೆ. ಹಲವರು ಉತ್ತರ ಪ್ರದೇಶ ಪೊಲೀಸರನ್ನು ಉಲ್ಲೇಖಿಸಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ನಂಬರ್ ಪ್ಲೇಟ್ ಪ್ರಕಾರ ಈ ಕಾರು ಉತ್ತರ ಪ್ರದೇಶದ್ದು. ಹೀಗಾಗಿ ಈ ಅಪಾಯಕಾರಿ ಚಾಲನೆ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಮುಂದಾಗಿ ಎಂದು ಮತ್ತೊಬ್ಬರು ಸೂಚಿಸಿದ್ದಾರೆ.
ಇನ್ನು ಹಲವರು ತಮಾಷೆಯಾಗಿಯೂ ಪ್ರತಿಕ್ರಿಯಿಸಿದ್ದಾರೆ. ನಗುವ ಎಮೋಜಿ ಬಳಸಿದ್ದಾರೆ. ʼಎಲಾನ್ ಮಸ್ಕ್ ಒಡೆತನದ ಟೆಸ್ಲಾ ಇದೇ ಕಾರಣಕ್ಕೆ ಭಾರತಕ್ಕೆ ಬರುತ್ತಿಲ್ಲʼ ಎಂದು ಒಬ್ಬರು ಹೇಳಿದ್ದಾರೆ. ʼಎಲಾನ್ ಮಸ್ಕ್: ಭಾರತದಲ್ಲಿ ನಿಮ್ಮ ಬಹುದೊಡ್ಡ ಸವಾಲು ಇಂತಹ ಆಲ್ಟೊ ಅಂಕಲ್‌ಗಳುʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ವಿಡಿಯೊ ನೆಟ್ಟಿಗರ ನಡುವೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ಹಿಂದೆಯೂ ನಡೆದಿತ್ತು
ವಾಹನದ ಮೇಲೆ ಚಲಿಸುತ್ತಲೇ ಸಾಹಸ ಪ್ರದರ್ಶಿಸುತ್ತಿರುವ ಸಾಕಷ್ಟು ವಿಡಿಯೊಗಳು ಈ ಹಿಂದೆಯೂ ವೈರಲ್ ಆಗಿವೆ. ಕೆಲವು ದಿನಗಳ ಹಿಂದೆ ಹೊಸದಿಲ್ಲಿಯ ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಮೋಟಾರ್ ಸೈಕಲ್ನಲ್ಲಿ ಯುವ ಜೋಡಿಯೊಂದು ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ದಿಲ್ಲಿಯ ಮಂಗೋಲ್ಪುರಿ ನೆರೆಹೊರೆಯ ಹೊರ ವರ್ತುಲ ರಸ್ತೆ ಫ್ಲೈಓವರ್ ಬಳಿ ಈ ಘಟನೆ ನಡೆದಿತ್ತು. ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ ಯುವತಿ ಇಂಧನ ಟ್ಯಾಂಕ್ ಮೇಲೆ ಕುಳಿತು ತನ್ನ ಸಂಗಾತಿಯನ್ನು ಅಪ್ಪಿಕೊಂಡಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ದಿಲ್ಲಿ ಸಂಚಾರ ಪೊಲೀಸರು ತಕ್ಷಣದ ಕ್ರಮ ಕೈಗೊಂಡಿದ್ದು, ಅಜಾಗರೂಕ ಮತ್ತು ಅನುಚಿತ ವರ್ತನೆಗಾಗಿ ದಂಪತಿಗೆ 11,000 ರೂ.ಗಳ ದಂಡ ವಿಧಿಸಿದ್ದರು. ಅಲ್ಲದೆ ಇಂತಹ ಅನೇಕ ಪ್ರಕರಣಗಳಲ್ಲಿ ಪೊಲೀಸರು ದಂಡ ವಿಧಿಸಿದ್ದರೂ ಇನ್ನೂ ಇಂತಹ ಪ್ರವೃತ್ತಿ ನಿಂತಿಲ್ಲ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಪೆಟ್ರೋಲ್ ದರದ ಚಿಂತೆ ಬಿಟ್ಹಾಕಿ; ಈ ಯುವಕನ ಐಡಿಯಾ ಫಾಲೋ ಮಾಡಿ!