Site icon Vistara News

Viral Video: ನೀಲಿ ದೋಸೆ ತಯಾರಿಸಿದ ಬಾಣಸಿಗ; ಹಿಟ್ಟಿಗೆ ಹಾರ್ಪಿಕ್‌ ಮಿಕ್ಸ್ ಅಂದ್ರು ನೆಟ್ಟಿಗರು

blue dosa

blue dosa

ರಾಯ್‌ಪುರ: ದೋಸೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ದಕ್ಷಿಣ ಭಾರತದಲ್ಲಿ ದೋಸೆ ಎಂದರೆ ಜನಪ್ರಿಯ ತಿಂಡಿ. ಇಲ್ಲಿ ವಿವಿಧ ಬಗೆಯ ದೋಸೆ ಮಾಡಲಾಗುತ್ತದೆ. ಉದ್ದಿನ ದೋಸೆ, ಮಸಾಲೆ ದೋಸೆ, ನೀರು ದೋಸೆ, ಸಿರಿ ಧಾನ್ಯ ದೋಸೆ, ಗೋಧಿ ದೋಸೆ, ಖಾರ ದೋಸೆ, ಸ್ವೀಟ್‌ ದೋಸೆ ಹೀಗೆ ನೂರಾರು ಬಗೆಯ ದೋಸೆಯ ಬಗ್ಗೆ ನೀವು ಕೇಳಿರಬಹುದು, ತಿಂದಿರಬಹುದು. ಆದರೆ ನೀಲಿ ದೋಸೆ ಬಗ್ಗೆ ಕೇಳಿದ್ದೀರಾ? ಈ ಹೊಸ ಬಗೆಯ ದೋಸೆ ಮಾಡುವ ವಿಡಿಯೊ ಇದೀಗ ವೈರಲ್‌ ಆಗಿದೆ (Viral Video).

ಸದ್ದು ಮಾಡುತ್ತಿದೆ ನೀಲಿ ದೋಸೆ

ಛತ್ತೀಸ್‌ಗಢದ ರಾಯ್‌ಪುರದ ಹೋಟೆಲ್‌ ಒಂದರಲ್ಲಿ ತಯಾರಿಸಲಾದ ಈ ವಿಶಿಷ್ಟ ಬಣ್ಣದ ದೋಸೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಾಲಗೆಗೆ ಮಾತ್ರವಲ್ಲ ಕಣ್ಣಿಗೂ ವಿಶಿಷ್ಟ ಅನುಭವ ನೀಡುತ್ತಿದೆ ಈ ತಿಂಡಿ. ರಾಯ್‌ಪುರದ ʼಅಯ್ಯಡಿ ದೋಶವಾಲಾʼ ಎಂಬ ಹೋಟೆಲ್‌ನಲ್ಲಿ ಈ ನೀಲಿ ಬಣ್ಣದ ದೋಸೆಯನ್ನು ತಯಾರಿಸಲಾಗಿದೆ.

ವಿಡಿಯೊ ಆರಂಭವಾಗುತ್ತಿದ್ದಂತೆ ಬಾಣಸಿಗ ಸಮುದ್ರ ನೀಲಿ ಬಣ್ಣದ ದೋಸೆ ಹಿಟ್ಟನ್ನು ಬಿಸಿ ಬಿಸಿ ತವಾ ಮೇಲೆ ಸುರಿಯುವುದನ್ನು ಕಾಣಬಹುದು. ದೋಸೆ ಹಿಟ್ಟನ್ನು ತವಾದ ಮೇಲೆ ಹರಡಿದ ಬಳಿಕ ಆತ ಅದರ ಮೇಲೆ ಮಸಾಲೆಗಳನ್ನು ತುಂಬುತ್ತಾನೆ. ಟೊಮ್ಯಾಟೊ ಸಾಸ್ ಮತ್ತು ಸಿಹಿ ಜೋಳದ ಟಾಪಿಂಗ್‌ಗಳನ್ನು ಅದರ ಮೇಲೆ ಸುರಿಯುತ್ತಾನೆ. ಬಳಿಕ ಕೆಲವು ತುಂಡು ಮಾಡಿದ ಚೀಸ್ ಅನ್ನು ಲೇಯರ್ ಮಾಡುತ್ತಾನೆ. ಕತ್ತರಿಸಿದ ತರಕಾರಿಗಳು ಮತ್ತು ಸ್ವಲ್ಪ ಚೀಸ್ ಬೆರೆಸಿ ಪಿಜ್ಜಾ ತಯಾರಿಸುವ ರೀತಿಯಲ್ಲೇ ಈ ದೋಸೆಯನ್ನು ಮಾಡುವುದು ಕಂಡು ಬರುತ್ತದೆ. ದೋಸೆ ಸರಿಯಾಗಿ ಬೆಂದ ಮೇಲೆ ಅದನ್ನು ಪಿಜ್ಜಾ ರೀತಿಯೇ ತುಂಡುಗಳನ್ನಾಗಿ ಮಾಡಿ ಚಟ್ನಿಯ ಜತೆ ವಿತರಿಸಲಾಗುತ್ತದೆ.

ನೆಟ್ಟಿಗರ ಪ್ರತಿಕ್ರಿಯೆ

ಸದ್ಯ ಈ ವಿಡಿಯೊವನ್ನು ಅನೇಕ ಮಂದಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ದೋಸೆ ಮೇಲೆ ನಡೆದ ಈ ಪ್ರಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼʼಬಾಣಸಿಗ ನೀಲಿ ಬಣ್ಣಕ್ಕಾಗಿ ಹಿಟ್ಟಿನ ಜತೆಗೆ ಸರ್ಫ್‌ ಎಕ್ಸೆಲ್‌ ಮತ್ತು ಹಾರ್ಪಿಕ್‌ ಬಳಸಿದ್ದಾನೆʼʼ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ʼʼಡೊರೆಮ್ಯಾನ್‌ ದೋಸೆ ಇದುʼʼ ಎಂದು ಹೇಳಿದ್ದಾರೆ. ʼʼಏಲಿಯನ್‌ಗಳು ಸೇವಿಸುವ ದೋಸೆ ಇದುʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬರು ಇದನ್ನು ʼʼಪ್ಲಾಸ್ಟಿಕ್‌ ದೋಸೆʼʼ ಎಂದು ಕರೆದಿದ್ದಾರೆ. ʼʼದಯವಿಟ್ಟು ಇನ್ನು ಮುಂದೆ ಈ ರೀತಿಯ ಪ್ರಯೋಗ ಮಾಡಬೇಡಿʼʼ ಎಂದು ನೆಟ್ಟಿಗರೊಬ್ಬರು ಕೈ ಮುಗಿದು ಮನವಿ ಮಾಡಿದ್ದಾರೆ. ʼʼಉಜಾಲಾ ದೋಸೆʼʼ ಎಂದು ಇದನ್ನು ಮಗದೊಬ್ಬರು ಹೆಸರಿಸಿದ್ದಾರೆ. ʼʼಯಾರಿಗಾದರೂ ಈ ಸಮುದ್ರ ದೋಸೆಯಲ್ಲಿ ಮೀನು ಲಭ್ಯವಾಗಿದೆಯಾ?ʼʼ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ವಿಶಿಷ್ಟ ದೋಸೆಗೆ ನೆಟ್ಟಿಗರು ಅಚ್ಚರಿ ಜತೆಗೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಪೊಲೀಸ್‌ ಹೆಲ್ಮೆಟ್‌ ಬಗ್ಗೆ ಪ್ರಶ್ನಿಸಿದ ಮಹಿಳೆ; ಓವರ್‌ ಸ್ಮಾರ್ಟ್‌ ಎಂದ ನೆಟ್ಟಿಗರು

ಹಿಂದೆಯೂ ನಡೆದಿತ್ತು ಪ್ರಯೋಗ

ದೋಸೆ ಮೇಲೆ ಪ್ರಯೋಗ ನಡೆಯುತ್ತಿರುವುದು ಇದು ಮೊದಲ ಸಲವೇನಲ್ಲ. ಕೆಲವು ತಿಂಗಳ ಹಿಂದೆ ಬೀದಿ ವ್ಯಾಪಾರಿಯೊಬ್ಬ ವೆನಿಲ್ಲಾ ಐಸ್‌ಕ್ರೀಮ್‌ನೊಂದಿಗೆ ಗುಲಾಬ್ ಜಾಮೂನ್ ಸೇರಿಸಿ ದೋಸೆ ತಯಾರಿಸುವ ವಿಡಿಯೊ ವೈರಲ್ ಆಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version