ನಾವೇನೇ ಮಾಡಿದರೂ ಕರ್ಮಫಲ ನಮ್ಮನ್ನು ಬಿಡುವುದಿಲ್ಲವಂತೆ. ಭಾರತೀಯರು ನಂಬಿದ ತತ್ವ ಇದು. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲ, ಕೆಟ್ಟ ಕೆಲಸಕ್ಕೆ ಕೆಟ್ಟ ಫಲ ನಮ್ಮನ್ನು ಬೆಂಬಿಡದೆ ಬಿಡುವುದಿಲ್ಲ ಎಂಬ ನಂಬಿಕೆಯಿದು. ಇದಕ್ಕೆ ಪಕ್ಕಾ ಉದಾಹರಣೆಯಂತೆ ನಿಲ್ಲುತ್ತದೆ, ಇದೀಗ ದಕ್ಷಿಣ ಆಫ್ರಿಕಾದಿಂದ ಬಂದ ಸುದ್ದಿ. ದಕ್ಷಿಣ ಆಫ್ರಿಕಾದ ಟ್ರೋಫಿ ಹಂಟರ್ (ಬೇಟೆಗಾರ) ಒಬ್ಬ ತಾನು ಮಾಡಿದ ಕೆಲಸಕ್ಕೆ ಕ್ಷಣಾರ್ಧದಲ್ಲಿ ಕರ್ಮ ಫಲ ಅನುಭವಿಸಿದ್ದಾರೆ ಎಂದೇ ಈ ಘಟನೆಯನ್ನು ವ್ಯಾಖ್ಯಾನಿಸಬಹುದೇನೋ. ಯಾಕೆಂದರೆ, ತಾನು ಕೊಂದ ಸಿಂಹದ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವಾಗಲೇ ಇನ್ನೊಂದು ಸಿಂಹ ದಾಳಿಗೆ ಈತ ಪ್ರಾಣ ಕಳೆದುಕೊಂಡಿದ್ದಾರಂತೆ! ಹಾಗಂತ ಇದೀಗ ಭಾರೀ ವೈರಲ್ ಆದ ವಿಡಿಯೋವೊಂದು ಹೇಳುತ್ತಿದೆ. ಆದರೆ ಇದರ ಸತ್ಯಾಸತ್ಯತೆ ಇನ್ನೂ ಹೊರಬಂದಿಲ್ಲ. ಹಲವು ಸುದ್ದಿ ಸಂಸ್ಥೆಗಳೀಗ ಈ ಸುದ್ದಿಯಲ್ಲಿ ಹುರುಳಿಲ್ಲ ಎಂದೂ ವರದಿ ಮಾಡಿವೆ.
ದಕ್ಷಿಣ ಆಫ್ರಿಕಾದ ರಿವರ್ ಸಿಟಿ ಪೋಸ್ಟ್ ಎಂಬ ಖಾಸಗಿ ವೆಬ್‌ಸೈಟೊಂದು ವರದಿ ಮಾಡಿರುವಂತೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಹುಕಿಗೆ ಬಿದ್ದ ವ್ಯಕ್ತಿಯೊಬ್ಬರು, ತಾನು ಕೊಂದ ಸಿಂಹದ ಜೊತೆ ಫೋಟೋ ಕ್ಲಿಕ್ಕಿಸುತ್ತಿರುವಾಗಲೇ ಹಿಂದಿನಿಂದ ಇನ್ನೊಂದು ಸಿಂಹದ ದಾಳಿಗೆ ಅಸುನೀಗಿದ್ದಾರೆ ಎಂಬ ಸುದ್ದಿ ವರದಿ ಮಾಡುವ ಮೂಲಕ ಎಲ್ಲರನ್ನೂ ದಂಗುಬಡಿಸಿತ್ತು. ಇದಕ್ಕೆ ಪೂರಕವಾದ ವಿಡಿಯೋ ಹಾಗೂ ಫೋಟೋವನ್ನೂ ಇದು ಪೋಸ್ಟ್ ಮಾಡಿತ್ತು. ಸತ್ತಿದ್ದಾರೆ ಎಂದು ಹೇಳಲಾಗುವ ವ್ಯಕ್ತಿ, ಇನ್ಸ್‌ಟಾಗ್ರಾಂನಲ್ಲಿ ಹಲವಾರು ಪ್ರಾಣಿಗಳನ್ನು ಕೊಂದು ಅವುಗಳ ಜೊತೆಗೆ ಪೋಸ್ ಕೊಡುವುದಕ್ಕೇ ಹೆಸರುವಾಸಿ. ಈವರೆಗೆ ಸಾಕಷ್ಟು ಪ್ರಾಣಿಗಳನ್ನು ಮುಖ್ಯವಾಗಿ ಸಿಂಹಗಳನ್ನು ಕೊಂದು ಅವುಗಳ ಜೊತೆಗೆ ಫೋಟೋ ತೆಗೆಸಿಕೊಂಡು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡುವುದು ಈತನ ಖಯಾಲಿ. ಸಿಂಹಗಳೂ ಸೇರಿದಂತೆ ಹಲವು ಪ್ರಾಣಿಗಳನ್ನು ಈತ ಮಣಿಸಿದ ಫೋಟೋಗಳು ಈತನ ಜಾಲತಾಣದ ಅಕೌಂಟಿನಲ್ಲಿವೆ ಎಂದು ಹೇಳಿತ್ತು. ಈ ಬಾರಿ ಸಿಂಹವನ್ನೇ ಮಣಿಸಲು ಯೋಜನೆ ರೂಪಿಸಿ ಅದರಂತೆ ಬೇಟೆಯನ್ನೂ ಆಡಿದ್ದಾನೆ. ಆದರೆ, ಫೋಟೋ ತೆಗೆಯುತ್ತಿದ್ದಾಗ, ಹಿಂದಿನಿಂದ ಇನ್ನೊಂದು ಸಿಂಹದ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿ ಮಾಡಿತ್ತು.
ಸಿಂಹವನ್ನು ಹತ್ಯೆ ಮಾಡಿದ ಮೇಲೆ ಈತ ಹಾಗೂ ಒಬ್ಬ ಮಹಿಳೆ ವಿಡಿಯೋಗೆ ಪೋಸ್ ಕೊಡುತ್ತಿದ್ದಾಗ ಹಿಂದಿನಿಂದ ಸಿಂಹ ಬಂದು ಇವರ ಮೇಲೆ ದಾಳಿ ಮಾಡಿದ ವಿಡಿಯೋ ಇದಾಗಿದೆ. ವಿಡಿಯೋದ ಮುಂದುವರಿದ ಭಾಗ ಇಲ್ಲ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ವಾದವಿವಾದಗಳನ್ನೂ ಹುಟ್ಟು ಹಾಕಿದೆ. ಹಲವರು ಈತನ ಕೆಲಸಕ್ಕೆ ತಕ್ಕ ಶಾಸ್ತಿಯೇ ಆಗಿದೆ, ಸಿಂಹ ಆತನನ್ನು ತಿಂದು ಒಳ್ಳೆಯ ಕೆಲಸ ಮಾಡಿದೆ ಎಂದು ಕಾಮೆಂಟ್ ಮಾಡಿದರೆ, ಅನೇಕರು ಪ್ರಾಣಿಗಳ ಬೇಟೆಯೆಂಬ ಈ ಟ್ರೋಫಿ ಹಂಟಿಂಗ್ ಅನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಆಫ್ರಿಕಾದ ಫಲಬೋರ್ವಾ ನಗರದ ಪಕ್ಕದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದರೂ, ಇದೊಂದು ಕಟ್ಟುಕಥೆ ಎಂಬ ವಾದವನ್ನೂ ಇನ್ನೂ ಕೆಲವು ಪತ್ರಿಕೆಗಳು ವರದಿ ಮಾಡುತ್ತಿವೆ ೨೦೧೩ರ ಹಳೆಯ ಬೇಟೆಯ ವಿಡಿಯೋ ಒಂದನ್ನು ಈ ಫೋಟೋ ಜೊತೆಗೆ ಸೇರಿಸುವ ಮೂಲಕ ಅಪಾರ್ಥ ಸೃಷ್ಠಿಸಲಾಗಿದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: Viral Video: ರೈಲ್ವೆ ಸಚಿವರ ಕ್ಲೀನಿಂಗ್ ವಿಡಿಯೋ ವೈರಲ್!, ಈಗ ವಂದೇ ಭಾರತ್ ಟ್ರೈನ್‌ಗಳಲ್ಲಿ ಸ್ವಚ್ಛತಾ ವ್ಯವಸ್ಥೆ ಬದಲು
ಏನಿದು ಟ್ರೋಫಿ ಹಂಟಿಂಗ್?: ಟ್ರೋಫಿ ಹಂಟಿಂಗ್ ಇಂದಿಗೂ ಕೆಲವು ದೇಶಗಳಲ್ಲಿ ಚಾಲ್ತಿಯಲ್ಲಿರುವ ಶೋಕಿ ಕ್ರೀಡೆ. ಇಲ್ಲಿ, ಲಕ್ಷಗಟ್ಟಲೆ (೭೦ರಿಂದ ೮೦ ಸಾವಿರ ಡಾಲರ್‌ಗಳಷ್ಟು) ಭಾರೀ ಮೊತ್ತದ ಟಿಕೆಟ್ ಖರೀದಿಸಿ ಪ್ರಾಣಿಗಳನ್ನು ಬೇಟೆಯಾಡಲು ಅನುಮತಿ ಪಡೆಯಲಾಗುತ್ತದೆ. ಆಹಾರಕ್ಕಾಗಿಯೋ ಅಥವಾ ಇನ್ನಾವುದೇ ಉದ್ದೇಶ ಇಲ್ಲಿಲ್ಲ. ಕೇವಲ ತನ್ನ ಮನರಂಜನೆಗೆ ಮಾತ್ರ. ತನ್ನ ಶೌರ್ಯ ಮೆರೆಯುವುದಕ್ಕೆ, ಜಗತ್ತಿನ ಮುಂದೆ ತನ್ನ ಪರಾಕ್ರಮ ತೋರಿಸುವಂಥ ಅಪ್ಪಟ ಶೋಕಿ ಕ್ರೀಡೆ ಇದು. ಹಲವು ಶ್ರೀಮಂತರಿಗೆ ಇದೊಂದು ಐಷಾರಾಮಿ ಹವ್ಯಾಸ. ಇಲ್ಲಿ ಟಿಕೆಟ್ ಖರೀದಿಸಿದಾತ, ಕಾಡುಪ್ರಾಣಿಯನ್ನು ಬೇಟೆಯಾಡಿ, ಅದರ ಮುಂದೆ ಫೋಟೋ ತೆಗೆಸಿಕೊಳ್ಳುತ್ತಾನೆ ಹಾಗೂ ಅವುಗಳ ತಲೆಯನ್ನು ತನ್ನ ಮನೆಯಲ್ಲಿ ತಾನು ಬೇಟೆಯಾಡಿದ ಮೃಗವೆಂದು ಪ್ರದರ್ಶನಕ್ಕಿಡುತ್ತಾನೆ. ಕೆನಡಾ, ದಕ್ಷಿಣ ಆಫ್ರಿಕಾ, ನಮೀಬಿಯಾ, ಮೆಕ್ಸಿಕೋ, ಜಿಂಬಾಬ್ವೆ, ನ್ಯೂಜಿಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈಗಲೂ ಟ್ರೋಫಿ ಹಂಟಿಂಗ್ ಚಾಲ್ತಿಯಲ್ಲಿದೆ. ಅದರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಇದು ಅತ್ಯಂತ ಹೆಚ್ಚು ಚಾಲ್ತಿಯಲ್ಲಿದೆ. ಹಾಗೂ ಕೆನಡಾದ ಮಂದಿಯೇ ಅತ್ಯಂತ ಹೆಚ್ಚು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಈಗಲೂ ಟ್ರೋಫಿ ಹಂಟಿಂಗ್ ಹೆಸರಿನಲ್ಲಿ ವಿಶ್ವದಾದ್ಯಂತ ವರ್ಷವೊಂದಕ್ಕೆ ಸುಮಾರು ೧,೨೫,೦೦೦ಕ್ಕೂ ಹೆಚ್ಚು ಪ್ರಾಣಿಗಳನ್ನು ಬೇಟೆಯಾಡಲಾಗುತ್ತದಂತೆ. ಸಿಂಹ, ಚಿರತೆ, ರೈನೋ, ಆನೆ, ಕಾಡೆಮ್ಮೆ, ಕರಡಿಗಳಂತ ಪ್ರಾಣಿಗಳು ಹೆಚ್ಚು ಬೇಟೆಗೆ ಬಲಿಯಾಗುತ್ತವೆ. ಭಾರತದಲ್ಲಿ ವನ್ಯಪ್ರಾಣಿಗಳ ಹತ್ಯೆಯನ್ನು ನಿಷೇಧಿಸಲಾಗಿರುವುದರಿಂದ ಈ ಬಗೆಯ ಟ್ರೋಫಿ ಹಂಟಿಂಗ್ ಹೆಸರಿನಲ್ಲಿ ಬೇಟೆ ನಡೆಯುವುದಿಲ್ಲ.
ಇದನ್ನೂ ಓದಿ: Viral Video: ಪಠಾಣ್ ಹಾಡಿಗೆ ಹುಚ್ಚೆದ್ದು ಕುಣಿದ ಜರ್ಮನಿ ಮಹಿಳೆ, ವೈರಲ್ ಆಯ್ತು ವಿಡಿಯೊ