Site icon Vistara News

Viral story | ಕಣ್ಣು, ಮೂಗು, ಬಾಯಿಯೆಲ್ಲ ಹಿಮ ಮೆತ್ತಿಕೊಂಡು ಫ್ರೀಝ್‌ ಆದ ಜಿಂಕೆಯ ರಕ್ಷಣೆ!

viral video

ಈ ಶತಮಾನದಲ್ಲೇ ಅತ್ಯಂತ ಹೆಚ್ಚು ಚಳಿಯನ್ನು ಕಾಣುತ್ತಿರುವ ಯುಎಸ್‌ಎ ಹಾಗೂ ಕೆನಡಾದಲ್ಲಿ ಈ ಬಾರಿ ಅತೀ ಹೆಚ್ಚು ಮಂದಿ ಚಳಿಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕೇವಲ ಇವೆರಡೇ ಅಲ್ಲ, ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಅತ್ಯಂತ ಹೆಚ್ಚು ಹಿಮಪಾತವಾಗಿದ್ದು ಚಳಿಯಿಂದ ಜನರು ತತ್ತರಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಕೇವಲ ಮನುಷ್ಯರಿಗೆ ಮಾತ್ರವಲ್ಲ, ಪ್ರಕೃತಿಯ ಈ ಕಠಿಣ ಚಳಿಯ ಪರಿಸ್ಥಿತಿಯಿಂದ ಪ್ರಾಣಿ ಪಕ್ಷಿಗಳೂ ಕಷ್ಟಕ್ಕೀಡಾಗಿವೆ. ಇದಕ್ಕೆ ಸಾಕ್ಷಿಯೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಜಿಂಕೆಯೊಂದರ ಕಣ್ಣು, ಬಾಯಿ, ಕಿವಿಗಳು ಚಳಿಯಿಂದ ಮರಗಟ್ಟಿ ಫ್ರೀಜ್‌ ಆದ ವಿಡಿಯೋ ಒಂದು ಹರಿದಾಡುತ್ತಿದೆ.

ಇದು ಎಲ್ಲಿ ನಡೆದ ಘಟನೆ ಎಂಬುದರ ವಿವರ ಲಭ್ಯವಾಗದಿದ್ದರೂ, ಜಿಂಕೆಯೊಂದರ ಕಣ್ಣು, ಕಿವಿ, ಮೂಗು ಬಾಯಿ ಎಲ್ಲ ಭಾಗವೂ ಫ್ರೀಜ್‌ ಆಗಿ ಚಳಿಯಿಂದ ಮರಗಟ್ಟಿ ಕಣ್ಣು ಬಿಡಲಾಗದ ಮಾರಣಾಂತಿಕ ಸನ್ನಿವೇಶ ತಲುಪಿತ್ತು. ಅದೃಷ್ಟವಶಾತ್‌, ಈ ಜಿಂಕೆ ಚಾರಣಿಗರಿಗೆ ಮುಖಾಮುಖಿಯಾದ್ದರಿಂದ ಅವರು ಇದನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಅಂದಾಜಿನ ಪ್ರಕಾರ, ಈ ಜಿಂಕೆ ಹಿಮಾವೃತವಾದ ಪ್ರದೇಶದಲ್ಲಿ ಆಹಾರ ಅನ್ವೇಷಣೆಗಾಗಿ ತನ್ನ ಬೆಚ್ಚಗಿನ ಪ್ರದೇಶದಿಂದ ಹೊರಬಂದ ಸಂದರ್ಭ ತೀವ್ರ ಹಿಮಪಾತದಿಂದಾಗಿ, ತನ್ನ ಕಣ್ಣು ಮೂಗು, ಬಾಯಿಯನ್ನೂ ತೆರೆಯಲಾರದ ಸ್ಥಿತಿ ತಲುಪಿದೆ. ಇದು ಆಹಾರಕ್ಕಾಗಿ ಹಿಮವನ್ನು ತನ್ನ ಬಾಯಿಯ ಸಹಾಯದಿಂದ ಒಕ್ಕಲು ಪ್ರಯತ್ನಿಸುವಾಗ, ಮುಖದ ಮೇಲೆಲ್ಲ ಹಿಮ ಮೆತ್ತಿಕೊಂಡು ಅದು ಮರಗಟ್ಟುವ ಪರಿಸ್ಥಿತಿ ತಲುಪಿರಬಹುದು ಎಂದು ಅಂದಾಜಿಸಲಾಗಿದೆ. ಇಬ್ಬರು ಚಾರಣಿಗರಿಗೆ ಇದು ಮುಖಾಮುಖಿಯಾಗಿದ್ದು, ಅವರು ಅದರ ಸಹಾಯಕ್ಕೆ ಧಾವಿಸಿದಾಗ, ಅದು ಭಯದಿಂದ ಅವರಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿತ್ತು. ಆದರೂ, ಹೇಗೋ ಪ್ರಯತ್ನಪಟ್ಟು ಜಿಂಕೆಯನ್ನು ಹಿಡಿದು, ಮುಖದಲ್ಲಿ ಮೆತ್ತಿಕೊಂಡ ಹಿಮವನ್ನು ಅವರು ತೆಗೆದುಹಾಕಿದ್ದರಿಂದ ಅದು ಪ್ರಾಣಾಪಾಯದಿಂದ ಪಾರಾಗಿದೆ. ಮತ್ತೆ ಸಾಮಾನ್ಯ ಸ್ಥಿತಿಗೆ ಬಂದ ತನ್ನ ಮುಖದೊಂದಿಗೆ ಅದು ಕೃತಜ್ಞತೆಯಿಂದ ಅದು ಅಲ್ಲಿಂದ ಓಡುವುದು ವಿಡಿಯೋನಲ್ಲಿ ದಾಖಲಾಗಿದೆ.

ಇದನ್ನೂ ಓದಿ | Viral story | ಗರ್ಭಿಣಿಯಾಗಿದ್ದಕ್ಕೆ ಕೆಲಸದಿಂದ ವಜಾ! 15 ಲಕ್ಷ ರೂ ಪರಿಹಾರ ಪಡೆದಳಾಕೆ!

ಚಾರಣಿಗರ ಈ ಸಹಾಯವನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ್ದು, ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಮನುಷ್ಯ ಇತರ ಪ್ರಾಣಿಗಳಿಗೆ ಸಹಾಯ ಮಾಡುವುದು ಆತನಲ್ಲಿರುವ ಮಾನವೀಯತೆ ಎಂಬ ಗುಣದ ಸುಂದರ ಅಧ್ಯಾಯ ಎಂದು ಒಬ್ಬರು ಈ ಸಹಾಯವನ್ನು ನೋಡಿ ಪ್ರತಿಕ್ರಿಯಿಸಿದ್ದಾರೆ. ಅಯ್ಯೋ ಪಾಪ ಕಷ್ಟದಲ್ಲಿದ್ದ ಜಿಂಕೆಯ ಸ್ಥಿತಿ ನೋಡಿ ಬೇಸರವಾಯಿತು. ಪುಣ್ಯಕ್ಕೆ ಚಾರಣಿಗರು ದೇವರ ಹಾಗೆ ಬಂದು ಅದನ್ನು ಕಾಪಾಡಿದರು ಎಂದು ಕಾಮೆಂಟಿಸಿದ್ದಾರೆ.

ಮುಖದ ಮೇಲೆಲ್ಲಾ ಹೀಗೆ ಐಸ್‌ ಮೆತ್ತಿಕೊಂಡು ಫ್ರೀಜ್‌ ಆಗಿದ್ದು ಹೇಗೆ ಎಂಬುದೇ ಅತ್ಯಂತ ಆಶ್ಚರ್ಯಕರ ವಿಷಯ. ಬಹುಶಃ ಜಿಂಕೆ ಚಳಿಗಾಲದಲ್ಲಿ ದುಸ್ತರವಾದ ಆಹಾರದ ಅನ್ವೇಷಣೆಗಾಗಿ ಹುಲ್ಲಿಗೋ, ಸೊಪ್ಪಿಗಾಗಿಯೋ, ಹಿಮವನ್ನು ಕೆದರಲು ಪ್ರಯತ್ನಿಸಿರಬಹುದು, ತನ್ನ ಕಾಲಿನ ಸಹಾಯದಿಂದ ಮಾಡುವಾಗ ಮುಖವನ್ನು ಬಳಸಿರಬಹುದು, ಹೀಗಾಗಿ ಇಷ್ಟು ದಟ್ಟವಾಗಿ ಮುಖದ ತುಂಬ ಹಿಮ ಮೆತ್ತಿಕೊಂಡಿದೆ. ಇಲ್ಲದಿದ್ದರೆ ಹೀಗಾಗಲು ಸಾಧ್ಯವಿಲ್ಲ. ಇಂತಹ ಸಂದರ್ಭ ಅದರ ಪರಿಸ್ಥಿತಿ ಹೇಗಿದ್ದಿರಬಹುದು ಊಹಿಸಿ ಎಂದಿದ್ದಾರೆ.

ಇನ್ನೂ ಕೆಲವರು, ಬಹುಶಃ ಹಿಮಪಾತವೊಂದರ ಸಂದರ್ಭ ಈ ಜಿಂಕೆ ಎಲ್ಲೋ ದೊಡ್ಡ ಖಾಲಿ ಜಾಗದಲ್ಲಿ ಸಿಕ್ಕಿಹಾಕಿಕೊಂಡಿರಬೇಕು. ಅಲ್ಲಿಂದ ಬರುವ ಪ್ರಯತ್ನದಲ್ಲಿ ಇಷ್ಟು ಹಿಮ ಬಾಯಿ ಕಣ್ಣು ಮೂಗಲ್ಲೆಲ್ಲ ಮೆತ್ತಿಕೊಂಡಿದೆ. ಪಾಪ ಎಂದು ಹೇಳಿದ್ದಾರೆ. ಅಂತೂ ಕೊನೆಗೂ ಈ ಪ್ರಾಣಿಯ ಮುಖದ ಮೇಲೆ ಅಂಟಿಕೊಂಡ ಹಿಮವನ್ನು ತೆರೆದ ಈ ಮಂದಿಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ | Viral Video | ಹೆಡೆಬಿಚ್ಚಿ ಮನೆ ಕಾವಲು ಕೂತ ನಾಗರಹಾವು ಎಂಬ ಸೆಕ್ಯುರಿಟಿ ಸಿಸ್ಟಂ!

Exit mobile version