ಬೆಂಗಳೂರು: ಕಾನೂನಿನ ಮುಂದೆ ಎಲ್ಲರೂ ಸಮಾನರು. ಅದು ಜನ ಸಾಮಾನ್ಯರಿರಲಿ, ಪೊಲೀಸ್ ಇರಲಿ, ರಾಜಕಾರಣಿಯೇ ಆಗಿರಲಿ ಕಾನೂನನ್ನು ಎಲ್ಲರೂ ಪಾಲಿಸಲೇ ಬೇಕು. ಆದರೆ ಹಾಗೇ ನಡೆಯುತ್ತಿಲ್ಲ ಎನ್ನುವುದೇ ವಿಷಾದದ ಸಂಗತಿ. ಕೆಲವೊಮ್ಮೆ ಅಧಿಕಾರಿಗಳು, ಕಾನೂನು ಪಾಲಕರು ಎನಿಸಿಕೊಂಡವರೇ ನಿಯಮ ಮುರಿಯುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ಪೊಲೀಸ್ ಒಬ್ಬರು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದು, ಅವರನ್ನು ಮಹಿಳೆಯೊಬ್ಬರು ಕಾರಿನಲ್ಲಿ ಹಿಂಬಾಲಿಸಿ ಹೆಲ್ಮೆಟ್ ಎಲ್ಲಿ ಎಂದು ಕೇಳುವ ವಿಡಿಯೊ ವೈರಲ್ (Viral Video) ಆಗಿದೆ. ಅಚ್ಚರಿ ಎಂದರೆ ಸೀಟ್ ಬೆಲ್ಟ್ ಧರಿಸದೆ ಆ ಮಹಿಳೆಯೂ ಕಾನೂನು ಉಲ್ಲಂಘಿಸಿದ್ದಾರೆ!
Kalesh b/w a Woman and Police Officer over not wearing a helmet pic.twitter.com/msuGVbnPmA
— Ghar Ke Kalesh (@gharkekalesh) November 8, 2023
ವಿಡಿಯೊದಲ್ಲೇನಿದೆ?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 4 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಆಗ ಕಾರಿನಲ್ಲಿ ಬಂದ ಮಹಿಳೆ ʼʼಹೆಲ್ಮೆಟ್ ಎಲ್ಲಿ?ʼʼ ಎಂದು ಕೇಳುತ್ತಾರೆ. ಆಕೆ ಏನು ಹೇಳುತ್ತಿದ್ದಾರೆ ಎನ್ನುವುದು ಅರ್ಥವಾಗದೆ ಪೊಲೀಸ್ ತನ್ನ ಬೈಕ್‌ನ ವೇಗವನ್ನು ಕಡಿಮೆ ಮಾಡುತ್ತಾರೆ. ಆರಂಭದಲ್ಲಿ ಪೊಲೀಸ್ ಆಕೆ ದಾರಿ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದುಕೊಂಡಿದ್ದರು. ಬಳಿಕ ಆಕೆ ಏನು ಹೇಳುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಂಡು ತಮ್ಮ ಪಾಡಿಗೆ ತಾವು ಹೊರಟು ಹೋಗುತ್ತಾರೆ. ಈ ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ನೆಟ್ಟಿಗರು ಏನಂದ್ರು?
ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಕೆಲವರು ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಹಲವರು ಆಕೆ ಸೀಟ್ ಬೆಲ್ಟ್ ಧರಿಸದೆ ಪೊಲೀಸ್ ಅನ್ನು ಪ್ರಶ್ನಿಸಿರುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊದಲು ಆಕೆ ಸ್ವತಃ ಕಾನೂನು ಪಾಲಿಸಲಿ, ಬಳಿಕ ಬೇರೆಯವರಿಗೆ ಬುದ್ಧಿವಾದ ಹೇಳಲಿ ಎಂದಿದ್ದಾರೆ. ʼʼನಿಮ್ಮ ಸೀಟ್ ಬೆಲ್ಟ್ ಎಲ್ಲಿ ?ʼʼ ಎಂದು ಒಬ್ಬರು ಕೇಳಿದ್ದಾರೆ. ʼʼಮಹಿಳೆ ಸೀಟ್ ಬೆಲ್ಟ್ ಧರಿಸಿಲ್ಲ. ಅಲ್ಲದೆ ಪೊಲೀಸ್ ಹೆಲ್ಮೆಟ್ ಧರಿಸಿಲ್ಲ. ಇಬ್ಬರಿಗೂ ಶಿಕ್ಷೆಯಾಗಲಿʼʼ ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ. ʼʼಮೊದಲು ಸೀಟ್ ಬೆಲ್ಟ್ ಧರಿಸಿʼʼ ಎಂದು ಮತ್ತೊಬ್ಬರು ಮಹಿಳೆಗೆ ಸಲಹೆ ನೀಡಿದ್ದಾರೆ. ʼʼಆಕೆ ಓವರ್ ಸ್ಮಾರ್ಟ್ ಆಗಲು ಹೊರಟಿದ್ದಾರೆʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಹೀಗೆ ಹಲವರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಕೆಯ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರತ್ತ ಬೆರಳು ತೋರುವ ಮುನ್ನ ನಮ್ಮನ್ನು ನಾವು ಗಮನಿಸಬೇಕು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Viral Video: ಅರೆಬರೆ ಬಟ್ಟೆಯಲ್ಲೇ ರೈಲಿನಲ್ಲಿ ಡ್ಯಾನ್ಸ್ ಮಾಡಿದ ಯುವತಿ; ಛೀಮಾರಿ ಹಾಕಿದ ಜನ
ಹಿಂದೆಯೂ ಆಗಿತ್ತು
ಈ ರೀತಿಯ ಘಟನೆ ಹಿಂದೆಯೂ ನಡೆದಿತ್ತು. ಕೆಲವು ಸಮಯಗಳ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೈಕ್ ಒಂದರಲ್ಲಿ ಇಬ್ಬರು ಪೊಲೀಸರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದರು. ಅವರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿದ ಮಹಿಳೆಯರು ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದರು. ಕೂಡಲೇ ಪೊಲೀಸರು ಬೈಕ್‌ನ ವೇಗ ಹೆಚ್ಚಿಸಿ ಅಲ್ಲಿಂದ ಪರಾರಿಯಾಗಿದ್ದರು. ಈ ವಿಡಿಯೊ ವೈರಲ್ ಆದ ಬಳಿಕ ಎಚ್ಚೆತ್ತ ಅಧಿಕಾರಿಗಳು ಪೊಲೀಸರಿಗೆ 1,000 ರೂ. ದಂಡ ವಿಧಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ