Site icon Vistara News

Viral Video: ಚಲಿಸುವ ಬೈಕ್‌ನಲ್ಲೇ ರೊಮಾನ್ಸ್‌ ಮಾಡಿ; ಬಳಿಕ ಹೋಗಿ ಫೈನ್‌ ಕಟ್ಟಿದ!

up

up

ನವ ದೆಹಲಿ: ಇತ್ತೀಚಿನ ದಿನಗಳಲ್ಲಿ ಚಲಿಸುವ ಬೈಕ್‌ನಲ್ಲೇ ಮುದ್ದಾಡುವ, ರೊಮಾನ್ಸ್‌ ಮಾಡುವ ಪ್ರೇಮಿಗಳಿಗೇನೂ ಕೊರತೆ ಇಲ್ಲ. ದೇಶದ ವಿವಿಧೆಡೆ ಇಂತಹ ಪ್ರಸಂಗ ನಡೆಯುತ್ತದೆ. ಅದಕ್ಕೆ ಪೊಲೀಸರು ದಂಡವನ್ನೂ ವಿಧಿಸುತ್ತಾರೆ. ಆದರೆ ಇಂತಹ ಪ್ರಕರಣ ನಿಯಂತ್ರಣಕ್ಕೆ ಮಾತ್ರ ಬಂದಿಲ್ಲ. ಮತ್ತೆ ಇನ್ನೊಂದು ಕಡೆ ಅಂತಹದ್ದೇ ದೃಶ್ಯ ವೈರಲ್‌ ಆಗುತ್ತದೆ (Viral Video). ಈಗ ನಾವು ಹೇಳ ಹೊರಟಿರುವುದು ಇದೇ ಮಾದರಿಯ ಘಟನೆ. ಹೀರೊ ರೀತಿ ಫೋಸ್‌ ಕೊಟ್ಟ ಯುವಕ ಈಗ ದಂಡ ಕಟ್ಟಬೇಕಿದೆ.

ಉತ್ತರ ಪ್ರದೇಶದ ಹಾಪುರದಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ಬೈಕ್‌ ಓಡಿಸುತ್ತಿದ್ದ. ಆತನ ಪ್ರೇಯಸಿ ಆಚೆ-ಈಚೆ ಕಾಲು ಹಾಕಿ ಟ್ಯಾಂಕ್‌ ಮೇಲೆ ಆತನ ಎದುರಿಗೇ ಕುಳಿತಿದ್ದಳು. ಬೈಕ್‌ ಓಡಿಸುತ್ತ ಆತ ಆಕೆಯನ್ನು ಮುದ್ದು ಮಾಡುತ್ತಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಈ ಲವ್‌ಸ್ಟೋರಿ ನಡೆದಿದ್ದು, ಸದ್ಯ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ದಂಡ ವಿಧಿಸಿದ ಪೊಲೀಸರು

ಮೋಟರ್‌ ವೆಹಿಕಲ್‌ ಆ್ಯಕ್ಟ್‌ ಪ್ರಕಾರ ಪೊಲೀಸರು ಯುವಕನಿಗೆ 8 ಸಾವಿರ ರೂ. ದಂಡ ವಿಧಿಸಿದ್ದಾರೆ. ಚಲಿಸುವ ಬೈಕ್‌ನಲ್ಲಿ ಯೋಡಿಯೊಂದು ಸಾಹಸ ಪ್ರದರ್ಶಿಸುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾಗಿ ಬೈಕ್‌ ಚಾಲಕನಿಗೆ 8 ಸಾವಿರ ರೂ. ದಂಡ ವಿಧಿಸಿದ್ದೇವೆ. ಉಳಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹಾಪುರ್‌ ಪೊಲೀಸರು ಎಕ್ಸ್‌ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಲ್ಲಿ ಮೊಬೈಲ್‌ ಟವರ್‌; ದೊಡ್ಡ ಸುದ್ದಿ ಎಂದ ಆನಂದ್‌ ಮಹೀಂದ್ರಾ

ತರಾಟೆ ತೆಗೆದುಕೊಂಡ ನೆಟ್ಟಿಗರು

ಸದ್ಯ ಈ ವಿಡಿಯೊ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹೆದ್ದಾರಿ ಮಧ್ಯೆ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಜೋಡಿಯನ್ನು ಹಲವರು ಕಮೆಂಟ್‌ ಮೂಲಕ ಝಾಡಿಸಿದ್ದಾರೆ. ʼʼಇಂತಹ ಮೂರ್ಖರ ಕಾರಣದಿಂದ ಇತರ ಪ್ರಯಾಣಿಕರ ಜೀವನವೂ ಅಪಾಯಕ್ಕೀಡಾಗುತ್ತದೆ. ಇಂತಹವರ ಚಾಲನಾ ಪರವಾನಗಿ ರದ್ದು ಪಡಿಸಬೇಕುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಹುಚ್ಚು ಸಾಹಸ ಪ್ರದರ್ಶಿಸುವವರಿಗೆ ತಕ್ಕ ಶಿಕ್ಷೆಯಾಬೇಕುʼʼ ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ. “ಜೈ ಹೋ. ಉತ್ತರ ಪ್ರದೇಶ ಪೊಲೀಸರು ಮಾಡಿದ ಶ್ಲಾಘನೀಯ ಕೆಲಸಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು” ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ʼʼಉತ್ತಮ ಕೆಲಸದಿಂದ ಹಾಪುರ್‌ ಪೊಲೀಸರು ನಮ್ಮ ಹೃದಯ ಗೆದ್ದಿದ್ದಾರೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ದಂಪತಿ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ಇದೇ ರೀತಿಯ ವಿಡಿಯೊ ಹೊರ ಬಂದು ವೈರಲ್‌ ಆಗಿತ್ತು. ಬಳಿಕ ಎಚ್ಚೆತ್ತುಕೊಂಡ ಸಂಚಾರ ಪೊಲೀಸರು ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದರು. ಹೆಲ್ಮೆಟ್ ಮತ್ತು ಪರವಾನಗಿ ಇಲ್ಲದೆ ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದಕ್ಕಾಗಿ ದಂಪತಿ ವಿರುದ್ಧ ಪ್ರಕರಣ ದಾಖಲಿಸಿ ಅವರಿಗೆ ಒಟ್ಟು 11,000 ರೂ. ದಂಡ ವಿಧಿಸಲಾಗಿತ್ತು. ಉತ್ತರ ಪ್ರದೇಶದಲ್ಲೂ ಕೆಲವು ದಿನಗಳ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಆದರೂ ಪದೇ ಪದೆ ಘಟನೆ ನಡೆಯುತ್ತಿದ್ದು, ಕಠಿಣ ಕ್ರಮ ಅಗತ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version