ಬೆಂಗಳೂರು: ಅನೇಕರಿಗೆ ಬೀದಿ ಬದಿ ಆಹಾರ ಎಂದರೆ ಬಹು ಪ್ರೀತಿ. ಇದು ಹೋಟೆಲ್, ರೆಸ್ಟೋರೆಂಟ್‌ಗೆ ಹೋಗಿ ಆಹಾರ ಸೇವಿಸುವುದಕ್ಕಿಂತ ಭಿನ್ನ ಅನುಭವ ಒದಗಿಸುತ್ತದೆ. ಕಡಿಮೆ ಬೆಲೆಗೆ, ವೈವಿಧ್ಯಮಯ ಆಹಾರವನ್ನು ಒದಗಿಸುವ ಮೂಲಕ ಬೀದಿ ಬದಿ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸುತ್ತಾರೆ. ಈ ಮಧ್ಯೆ ಬೀದಿ ಬದಿ ಆಹಾರದ ಸುರಕ್ಷತೆ ಮತ್ತು ಶುಚಿತ್ವದ ಬಗ್ಗೆಯೂ ಪ್ರಶ್ನೆಗಳು ಏಳುತ್ತವೆ. ಕೆಲವೊಮ್ಮೆ ಆಹಾರ ತಯಾರಿಸುವ ವಿಡಿಯೊ ವೈರಲ್ ಆಗಿ ಭಯವನ್ನೂ ಹುಟ್ಟಿಸುತ್ತವೆ. ನೀವು ಬೀದಿ ಬದಿಯ ನೂಡಲ್ಸ್ ಇಷ್ಟಪಡುವವರಾಗಿದ್ದರೆ ಈ ವೈರಲ್ ವಿಡಿಯೊ (Viral Video)ವನ್ನು ತಪ್ಪದೆ ನೋಡಲೇ ಬೇಕು.
ವಿಡಿಯೊದಲ್ಲೇನಿದೆ?
ಈ ವೈರಲ್ ವಿಡಿಯೊ ಬೀದಿ ಆಹಾರ ತಯಾರಿಕೆಯ ನೈರ್ಮಲ್ಯದ ಬಗ್ಗೆ ಅನುಮಾನ ಹುಟ್ಟು ಹಾಕುವಂತಿದೆ. ಇದು ಉತ್ತರ ಪ್ರದೇಶದ ಕುಕುರ್ಘಾಟಿ ಗ್ರಾಮದಲ್ಲಿನ ವಿಡಿಯೊ ಎನ್ನಲಾಗಿದೆ. ಬೀದಿ ಬದಿ ವ್ಯಾಪಾರಿಯೊಬ್ಬರು ನದಿಯಲ್ಲಿ ನೂಡಲ್ಸ್ ತೊಳೆಯುತ್ತಿರುವ ದೃಶ್ಯ ಇದು. ಈ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿದೆ. ಈ ನೀರು ಅತ್ಯಂತ ಕಲುಷಿತವಾಗಿರುವುದೇ ಇದಕ್ಕೆ ಕಾರಣ. ಹೀಗಾಗಿ ಇದು ಆಹಾರ ತಯಾರಿಕೆಯ ವಿಚಾರದಲ್ಲಿ ಕಠಿಣ ಕಾನೂನು ಕ್ರಮಗಳ ಅಗತ್ಯವನ್ನು ಒತ್ತಿ ಹೇಳುತ್ತದೆ. ಜತೆಗೆ ಬೀದಿ ಬದಿ ಆಹಾರ ಸೇವಿಸುವ ಹವ್ಯಾಸವನ್ನು ಮರು ಪರಿಶೀಲಿಸುವಂತೆ ಮಾಡುತ್ತದೆ.
ಸಾಮಾನ್ಯವಾಗಿ ನೂಡಲ್ಸ್ ತಯಾರಿಸಲು ಮೊದಲು ಅದನ್ನು ಕುದಿಸಿ ನಂತರ ತೊಳೆಯಲಾಗುತ್ತದೆ. ಹೀಗೆ ಕುದಿಸಿದ ನೂಡಲ್ಸ್ ಅನ್ನು ತೊಳೆಯುವುದು ಅವು ಪರಸ್ಪರ ಅಂಟಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ನೂಡಲ್ಸ್ ಅನ್ನು ಹುರಿಯುವ ಮೊದಲು ಶುದ್ಧ ತಣ್ಣೀರಿನಿಂದ ತೊಳೆಯಬೇಕು ಎಂದು ತಜ್ಞರು ಸೂಚಿಸುತ್ತಾರೆ. ಆದರೆ ಈ ವ್ಯಾಪಾರಿ ಬೇಯಿಸಿದ ನೂಡಲ್ಸ್ ಅನ್ನು ಟ್ರೇಯಲ್ಲಿ ತೆಗೆದುಕೊಂಡು ಹೋಗಿ ಕಲುಷಿತ ನೀರಿನಲ್ಲಿ ಮುಳಗಿಸುತ್ತಿರುವುದು ಕಂಡು ಬಂದಿದೆ.
ನೆಟ್ಟಿಗರು ಏನಂದ್ರು?
ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಆರೋಗ್ಯದ ಬಗ್ಗೆ ಹಲವು ಕಳವಳ ವ್ಯಕ್ತಪಡಿಸಿದ್ದಾರೆ. ʼʼಶುದ್ಧತೆ ಎನ್ನುವುದು ಇಲ್ಲಿ ಅಪರಾದ ಎನ್ನುವಂತಿದೆʼʼ ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ʼʼಇನ್ನು ಮುಂದೆ ಬೀದಿ ಬದಿ ಆಹಾರ ಸೇವಿಸುವ ಮುನ್ನ ನೂರು ಬಾರಿ ಆಲೋಚಿಸಿʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಬಹಳಷ್ಟು ರೋಗಗಳು ಅಶುದ್ಧ ನೀರಿನಿಂದಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆಹಾರದ ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದು ಹಲವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Viral Video: ಮೆಟ್ರೋ ರೈಲು ಬರುತ್ತಿದ್ದಂತೆ ಹಳಿಗೆ ಬಿದ್ದ ತಾಯಿ-ಮಗು; ಮುಂದೇನಾಯ್ತು? ಈ ವಿಡಿಯೊ ನೋಡಿ
ನೂಡಲ್ಸ್ ಫ್ಯಾಕ್ಟರಿ ವಿಡಿಯೊ ವೈರಲ್
ಕೆಲವು ತಿಂಗಳ ಹಿಂದೆ ಕೋಲ್ಕತ್ತಾದಲ್ಲಿನ ನೂಡಲ್ಸ್ ತಯಾರಿಸುವ ಫ್ಯಾಕ್ಟರಿಯೊಂದರ ವಿಡಿಯೊ ವೈರಲ್ ಆಗಿತ್ತು. ನೂಡಲ್ಸ್ ತಯಾರಿಸುವ ಎಲ್ಲ ಹಂತವನ್ನು ತೋರಿಸುವ ವಿಡಿಯೊ ಇದಾಗಿತ್ತು. ಇಲ್ಲಿನ ಶುಚಿತ್ವದ ಕೊರತೆ ನೆಟ್ಟಿಗರಲ್ಲಿ ಆಕ್ರೋಶವನ್ನು ಹುಟ್ಟು ಹಾಕಿತ್ತು. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಅಶುದ್ಧ ವಾತಾವರಣದ ಬಗ್ಗೆ ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದ್ದರು. ಶುಚಿತ್ವ ಇವರ ಪಾಲಿಗೆ ಪಾಪ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ