ಬೆಂಗಳೂರು: ಮನುಷ್ಯ ಶತಮಾನಗಳ ಹಿಂದಿನಿಂದಲೂ ಪ್ರಾಣಿಗಳನ್ನು ಸಾಕುವುದನ್ನು ರೂಢಿ ಮಾಡಿಕೊಂಡಿದ್ದಾನೆ. ಅದರಲ್ಲೂ ಶ್ವಾನ, ಬೆಕ್ಕು, ಜಾನುವಾರುಗಳಿಂತಹ ಸಾಕು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ವಿಶೇಷ ಸಂಬಂಧವಿದೆ. ಸಾಕು ಪ್ರಾಣಿಗಳಿಗೆ ನಾವು ಸ್ವಲ್ಪ ಪ್ರೀತಿ ಕೊಟ್ಟರೂ ಸಾಕು ಅವು ಅದನ್ನು ಎಂದಿಗೂ ಮರೆಯುವುದಿಲ್ಲ. ಇಂತಹ ಸಾಕು ಪ್ರಾಣಿ-ಮಾನವರ ಒಡನಾಟದ ವಿಡಿಯೊ ಆಗಾಗ ಇಂಟರ್‌ನೆಟ್‌ನಲ್ಲಿ ಹರಿದಾಡಿ ಸದ್ದು ಮಾಡುತ್ತಿದೆ. ಇದೀಗ ಅಂತಹದ್ದೇ ದೃಶ್ಯವೊಂದು ವೈರಲ್ ಆಗಿದೆ. ಹಸು ಮತ್ತು ಮಗುವೊಂದರ ಆತ್ಮೀಯ ಬಂಧ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ (Viral Video).
ವಿಡಿಯೊದಲ್ಲೇನಿದೆ?
ಇಸ್ಟಾಗ್ರಾಮ್ ಖಾತೆಯೊಂದರಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಮರವೊಂದರ ಅಡಿಯಲ್ಲಿ ದನವನ್ನು ಕಟ್ಟಿ ಹಾಕಲಾಗಿತ್ತು. ಅದರ ಪಕ್ಕದಲ್ಲೇ ಹಾಕಿದ್ದ ಮಂಚವೊಂದರಲ್ಲಿ 2 ವರ್ಷದೊಳಗಿನ ಪುಟ್ಟ ಮಗುವೊಂದು ಕುಳಿತಿತ್ತು. ಬಳಿ ಬಂದ ಹಸು ಅಕ್ಕರೆಯಿದ ಮಗುವಿನ ಮೈಯನ್ನು ನೆಕ್ಕುತ್ತದೆ. ಮಗು ಕೂಡ ಯಾವುದೇ ವಿರೋಧ ವ್ಯಕ್ತಪಡಿಸದೆ ನಗು ನಗುತ್ತಾ ಹಸುವಿನೊಂದಿಗೆ ಆಟವಾಡುತ್ತದೆ. ಬಳಿಕ ಹಸುವಿನ ಮೈ ತಡವುತ್ತದೆ. ಹಸು ಮಗುವಿನ ಮಡಿಲಲ್ಲಿ ತಲೆ ಇಟ್ಟು ಮಲಗುವಂತೆ ಮಾಡುತ್ತದೆ. ಒಟ್ಟಿನಲ್ಲಿ ಜನ್ಮ ಜನ್ಮದ ಅನುಬಂಧವೇನೋ ಎನ್ನುವಂತೆ ಇಬ್ಬರೂ ವರ್ತಿಸುತ್ತಾರೆ. ತಾಯಿಯೊಬ್ಬಳು ತನ್ನ ಕಂದನನ್ನು ಮುದ್ದು ಮಾಡುವಂತಿದೆ ಈ ದೃಶ್ಯ.
ಮನಸೋತ ನೆಟ್ಟಿಗರು
ಈ ಮುಗ್ಧ ಪ್ರೀತಿಗೆ ನೆಟ್ಟಿಗರು ಮನ ಸೋತಿದ್ದಾರೆ. ಈಗಾಗಲೇ 26 ಲಕ್ಷಕ್ಕಿಂತ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಲವರು ಕಮೆಂಟ್ ಮಾಡಿದ್ದಾರೆ. ʼʼವಿಡಿಯೊ ನೋಡಿ ಮನಸ್ಸು ತುಂಬಿ ಬಂತುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಓ ಮೈ ಗಾಡ್, ಬಹಳ ಮುದ್ದಾದ ವಿಡಿಯೊ ಇದುʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ʼʼತುಂಬ ಮುದ್ದಾಗಿದೆ. ಹಸು ಮತ್ತು ಮಗುವಿನದ್ದು ಅತ್ಯುತ್ತಮ ಸಂಬಂಧʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಈ ವಿಡಿಯೊ ನೋಡಿ ನನಗೆ ಹಸುಗಳ ಮೇಲಿದ್ದ ಗೌರವ, ಪ್ರೀತಿ ಇನ್ನೂ ಹೆಚ್ಚಾಗಿದೆʼʼ ಎಂದು ನೋಡುಗರೊಬ್ಬರು ತಿಳಿಸಿದ್ದಾರೆ. ನೆಟ್ಟಿಗರೊಬ್ಬರು ಪ್ರತಿದಿನ ಇಂತಹ ವಿಡಿಯೊ ಕಾಣ ಸಿಗುವಂತಾಗಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ವಿಡಿಯೊ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಸ್ಕೂಟರ್ ನಿಲ್ಲಿಸಿ ಡ್ರಾಪ್ ಕೇಳಿದ ಶ್ವಾನ; ಬುದ್ಧಿವಂತಿಕೆಗೆ ಶರಣು ಎಂದ ನೆಟ್ಟಿಗರು
ಈ ಹಿಂದೆಯೂ ಪ್ರಾಣಿ ಮತ್ತು ಮಾನವನ ಒಡನಾಟದ ವಿಡಿಯೊಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿವೆ. ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ಶ್ವಾನ ಮತ್ತು ಸ್ಕೂಟರ್ ಸವಾರನ ವಿಡಿಯೊ ವೈರಲ್ ಆಗಿತ್ತು. ಸುರಿಯುವ ಮಳೆಯಲ್ಲಿ ರಸ್ತೆ ಬದಿ ನಾಯಿಯೊಂದು ನಿಂತಿರುತ್ತದೆ. ಆಗ ವ್ಯಕ್ತಿಯೊಬ್ಬ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಾನೆ. ಆತನ ಗಾಡಿಯ ಮುಂಭಾಗ ಲಗೇಜ್ ತುಂಬಿರುತ್ತದೆ. ಆ ಸ್ಕೂಟರ್ ಅನ್ನು ನಾಯಿ ಸ್ವಲ್ಪ ದೂರ ಹಿಂಬಾಲಿಸುತ್ತದೆ. ಬಳಿಕ ಆತ ತನ್ನ ಸ್ಕೂಟರ್ ನಿಲ್ಲಿಸುತ್ತಾನೆ. ಆಗ ನಾಯಿ ಹಾರಿ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತದೆ. ಬಳಿಕ ಆತ ಅದನ್ನು ಕರೆದುಕೊಂಡು ಹೊರಡುತ್ತಾನೆ. ಈ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿರುವವರು ಚಿತ್ರೀಕರಿಸಿದ್ದರು. ಇವರಿಬ್ಬರ ಸ್ನೇಹ ಬಂಧಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ