ಬೆಂಗಳೂರು: ಇಂಟರ್‌ನೆಟ್‌ನಲ್ಲಿ ವೈರಲ್ ಆಗುವ ವಿಡಿಯೊಗಳು ಕೆಲವೊಮ್ಮೆ ನಕ್ಕು ಹಗುರಾಗುವಂತೆ ಮಾಡಿದರೆ ಇನ್ನು ಕೆಲವೊಮ್ಮೆ ಚಿಂತನೆಗೆ ಹಚ್ಚುತ್ತವೆ. ಇನ್ನು ಕೆಲವು ಬಾರಿ ನಾವು ಬೆಚ್ಚಿ ಬೀಳುವ, ಅಪಾಯಕಾರಿ ಎನಿಸುವ ವಿಡಿಯೊಗಳೂ ಕಂಡು ಬರುತ್ತವೆ. ಇಲ್ಲಿ ನಾವು ಹೇಳ ಹೊರಟಿರುವುದು ಇಂತಹ ಭಯಾನಕ ವಿಡಿಯೊದ ಬಗ್ಗೆ. ಇದನ್ನು ನೋಡಿದವರು ಒಂದು ಕ್ಷಣ ದಂಗಾಗುವುದು ಖಚಿತ. ಅಂತಹದ್ದೇನಿದೆ ಈ ವಿಡಿಯೊದಲ್ಲಿ ಎನ್ನುವುದನ್ನು ನೋಡೋಣ (Viral Video).
ಹಾವು ಎಂದರೆ ಯಾರಿಗೆ ಭಯವಿಲ್ಲ ಹೇಳಿ. ಇದನ್ನು ನೋಡಿದರೆ ಸಾಕು ಹಲವರು ಮಾರು ದೂರ ಓಡಿ ಬಿಡುತ್ತಾರೆ. ವಿಷ ರಹಿತ ಹಾವಾದರೂ ಅದರ ಬಳಿಗೆ ಹೋಗಲು ಬಹುತೇಕರು ಹಿಂಜರಿಯುತ್ತಾರೆ. ಆದರೆ ಇಲ್ಲೊಂದು ಮಗು ನಿರ್ಭೀತಿಯಿಂದ ಕಾಳಿಂಗ ಸರ್ಪದೊಂದಿಗೆ ಆಟವಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತ ವೈರಲ್ ಆಗಿದೆ. ಅತ್ಯಂತ ವಿಷಕಾರಿ ಹಾವುಗಳ ಪೈಕಿ ಕಾಳಿಂಗ ಸರ್ಪವೂ ಒಂದು. ಹೀಗಾಗಿ ಈ ವಿಡಿಯೊ ನೋಡಿದ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ವಿಡಿಯೋದಲ್ಲೇನಿದೆ?
ಸುಮಾರು 2 ವರ್ಷದೊಳಗಿನ ಮಗುವೊಂದು ನೆಲದ ಮೇಲೆ ಕುಳಿತಿದೆ. ಅದರ ಪಕ್ಕದಲ್ಲಿಯೇ ಹೆಡೆ ಎತ್ತಿದ ಕಾಳಿಂಗ ಸರ್ಪವಿದೆ. ಸ್ವಲ್ಪವೂ ಭಯ, ಹಿಂಜರಿಕೆ ಇಲ್ಲದೆ ಆ ಮಗು ಸರ್ಪದ ಹೆಡೆಯನ್ನು ಸ್ಪರ್ಶಿಸುತ್ತದೆ. ಇಡೀ ತಲೆಯನ್ನು ತಡವುತ್ತದೆ. ಸಾಮಾನ್ಯವಾಗಿ ಮಕ್ಕಳು ಆಟಿಕೆಯಲ್ಲಿ ಆಡುವಂತೆ ಹಾವಿನ ಹೆಡೆಯನ್ನು ಕೈಯಲ್ಲಿ ಹಿಡಿದು ನಿರ್ಭೀತಿಯಿಂದ ಮೃದುವಾಗಿ ಅದುಮುತ್ತದೆ. ಹಾವು ಕೂಡ ಸುಮ್ಮನೆ ನಿಂತಿಕೊಂಡಿರುತ್ತದೆ. ಕೆಲವೇ ಸೆಕೆಂಡ್‌ಗಳ ಈ ವಿಡಿಯೊ ಸದ್ಯ ಹಲವರ ಗಮನ ಸೆಳೆದಿದೆ.
ನೆಟ್ಟಿಗರಿಂದ ಆಕ್ರೋಶ
ಈ ವಿಡಿಯೊ ನೋಡಿ ಅನೇಕರು ಆಕ್ರೋಶ ವ್ಯಕದ್ತಪಡಿಸಿದ್ದಾರೆ. ಹಾವಿನ ಬಳಿ ಮಗುವನ್ನು ಆಟವಾಡಲು ಬಿಟ್ಟು ವಿಡಿಯೊ ಚಿತ್ರೀಕರಿಸಿರುವುದನ್ನು ಟೀಕಿಸಿದ್ದಾರೆ. ʼʼಪ್ರತಿಯೊಬ್ಬರೂ ಜೀವವೂ ಮುಖ್ಯ. ದಯವಿಟ್ಟು ಮಕ್ಕಳ ಬಳಿ ಇಂತಹ ಪ್ರಯೋಗ ಮಾಡಬೇಡಿʼʼ ಎಂದು ಒಬ್ಬರು ಹೇಳಿದ್ದಾರೆ. ʼʼವ್ಯೂವ್ಸ್, ಲೈಕ್ಸ್ ಗಳಿಸಲು, ಜನಪ್ರಿಯತೆ ಗಿಟ್ಟಿಸಲು ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡಬೇಡಿʼʼ ಎಂದು ಇನ್ನೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video: ಈ ಮಗುವಿಗೆ ಜೀವಂತ ಹಾವೇ ಆಟದ ಗೊಂಬೆ; ನೆಟ್ಟಿಗರು ಶಾಕ್
ಮತ್ತೊಬ್ಬರು ಮಗುವಿನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ, ʼʼಕಾಳಿಂಗ ಸರ್ಪ ಅತ್ಯಂತ ವೇಗದ ಹಾವುಗಳಲ್ಲಿ ಒಂದು. ಇದು ಕೋಪಗೊಂಡರೆ ಒಂದು ಸೆಕೆಂಡಿನಲ್ಲಿ ತಿರುಗಿ ಕಚ್ಚುವ ಸಾಧ್ಯತೆ ಇದೆʼʼ ಎಂದು ತಿಳಿಸಿದ್ದಾರೆ. ಮಗದೊಬ್ಬರು ಈ ಆಟವನ್ನು “ಅತ್ಯಂತ ಅಪಾಯಕಾರಿ” ಎಂದು ಪರಿಗಣಿಸಿದ್ದಾರೆ. ʼʼಮಗುವಿಗೆ ನಾಗರಹಾವಿನೊಂದಿಗೆ ಆಟವಾಡಲು ಬಿಟ್ಟವರಿಗೆ ತಕ್ಕ ಶಿಕ್ಷೆ ನೀಡಬೇಕು. ಅವರನ್ನು ಜೈಲಿಗೆ ಹಾಕಬೇಕು” ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ. ʼʼಈ ಮಗು ಹಾವನ್ನು ನಿಭಾಯಿಸುವಷ್ಟು ಪ್ರಬುದ್ಧನಾಗಿಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿದೆ. ಹಿಂದೆಯೂ ಈ ರೀತಿಯ ವಿಡಿಯೊ ವೈರಲ್ ಆಗಿತ್ತು. ಇಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಕ್ಕಳು ಅನುಕರಿಸುವ ಅಪಾಯವಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ