ಬೆಂಗಳೂರು: ನಂಬಿಕೆಗೆ ಇನ್ನೊಂದು ಹೆಸರು ಶ್ವಾನ. ಶತಮಾನಗಳಿಂದಲೂ ಮಾನವನ ಒಡನಾಡಿಯಾಗಿರುವ ಇವು ಚಾಣಾಕ್ಷ ಪ್ರಾಣಿಗಳು ಎಂದೂ ಗುರುತಿಸ್ಪಡುತ್ತವೆ. ಇದಕ್ಕೆ ಉದಾಹರಣೆಯಾಗಿ ತರಬೇತಿ ಪಡೆದುಕೊಂಡ ನಾಯಿಗಳು ತನಿಖೆಯ ವೇಳೆ, ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನೆರವಾಗುವುದುನ್ನು ನಾವು-ನೀವೆಲ್ಲ ಕಂಡಿದ್ದೇವೆ. ಇದೀಗ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಈ ಬಗ್ಗೆ ಸಾಕು ನಾಯಿಗೆ ಎಚ್ಚರಿಕೆ ವಹಿಸುವ ರೀತಿ ಮತ್ತು ತಕ್ಷಣ ಅದು ಬೆಂಕಿ ಹರಡದಂತೆ ತಡೆಯುವ ವಿಡಿಯೊ ವೈರಲ್ (Viral Video) ಆಗಿದ್ದು, ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ವಿಡಿಯೋದಲ್ಲೇನಿದೆ?
ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಇದಾಗಿದ್ದು, ನಾಯಿಯೊಂದು ಮಂಚದ ಮೇಲೆ ವಿಶ್ರಾಂತಿ ಪಡೆಯುತ್ತಿರುವುದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಈ ನಾಯಿ ನೋಡುತ್ತಿದ್ದಂತೆ ಶಾರ್ಟ್ ಸರ್ಕ್ಯೂಟ್‌ನಿಂದ ವೈರ್‌ಗೆ ಬೆಂಕಿ ಹತ್ತಿಕೊಳ್ಳುತ್ತದೆ. ವೈರ್ ಪಕ್ಕದಲ್ಲಿಯೇ ಬಟ್ಟೆಯ ರಾಶಿ ಇದೆ. ಕೆಲವೇ ಕ್ಷಣಗಳಲ್ಲಿ ಆ ಬಟ್ಟೆಗೆ ಬೆಂಕಿ ತಗುಲಿ ಮನೆಗೆ ವ್ಯಾಪಿಸುವ ಅಪಾಯವಿತ್ತು. ಆದರೆ ಹಾಗಾಗಲು ಈ ಬುದ್ಧಿವಂತ ನಾಯಿ ಅವಕಾಶ ನೀಡಲಿಲ್ಲ. ಕೂಡಲೇ ಧಾವಿಸಿ ವೈರ್ ಅನ್ನು ಹಿಂದಕ್ಕೆ ಎಳೆದು ಬೆಂಕಿಯನ್ನು ನಂದಿಸಿತು. ಆ ಮೂಲಕ ಬಹು ದೊಡ್ಡ ಅನಾಹುತವನ್ನು ತಪ್ಪಿಸಿ ಹೀರೋ ಎನಿಸಿಕೊಂಡಿತು. ಬಳಿಕ ತನ್ನ ಜಾಗಕ್ಕೆ ಹಿಂದಿರುಗಿ ವಿಶ್ರಾಂತಿ ಪಡೆಯುವುದು ವಿಡಿಯೊದಲ್ಲಿ ಸೆರೆಯಾಗಿದೆ.
Such a smart dog.. pic.twitter.com/flaNNrsW69
— Buitengebieden (@buitengebieden) February 14, 2024
ʼಸ್ಮಾರ್ಟ್ ನಾಯಿʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ನೆಟ್ಟಿಗರ ಗಮನ ಸೆಳೆದ ಈ ವಿಡಿಯೊ ಈಗಾಗಲೇ 9 ಲಕ್ಷಕ್ಕಿಂತ ಅಧಿಕ ವೀಕ್ಷಣೆ ಕಂಡಿದೆ. ಬಹುತೇಕರು ನಾಯಿಯ ಬುದ್ಧಿವಂತಿಕೆ, ಸಮಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ. ʼʼಇದು ನಿಜವಾಗಿಯೂ ಅದ್ಭುತ ನಾಯಿʼʼ ಎಂದು ಒಬ್ಬರು ಉದ್ಘರಿಸಿದ್ದಾರೆ. “ನಾವೆಲ್ಲರೂ ಈ ಬುದ್ಧಿವಂತ ನಾಯಿಮರಿಯಂತೆ ಶಿಸ್ತುಬದ್ಧ ಜೀವನ ರೂಪಿಸಿಕೊಂಡಿದ್ದರೆ ಈ ಜಗತ್ತು ಇನ್ನಷ್ಟು ಅಪ್ಯಾಯಮಾನವಾಗಿರುತ್ತಿತ್ತು” ಎಂದು ಇನ್ನೊಬ್ಬರು ಹೇಳಿದ್ದಾರೆ. “ಈ ನಾಯಿಗೆ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎನ್ನುವುದು ತಿಳಿದಿತ್ತು. ಹೀಗಾಗಿ ಸಮಯೋಚಿತ ನಿರ್ಧಾರ ಕೈಗೊಂಡು ಮನೆಯವರನ್ನು ಬಹುದೊಡ್ಡ ಅಪಾಯದಿಂದ ಪಾರು ಮಾಡಿದೆʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಲೈವ್ ಸಂದರ್ಶನದ ವೇಳೆ ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾದ ಪಾಕ್ ಕ್ರಿಕೆಟ್ ತಜ್ಞ
ಬೆಂಕಿ ಹರಡದಂತೆ ವೈರ್ ಬಳಿಯಿಂದ ಬಟ್ಟೆಗಳನ್ನು ದೂರವಿಡಬೇಕು ಎನ್ನುವುದು ನಾಯಿಗೆ ತಿಳಿದಿದ್ದಾದರೂ ಹೇಗೆ? ಎಂದು ಹಲವು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೆಲವರು ವಿಡಿಯೊದ ಸತ್ಯಾಸತ್ಯತೆ ಬಗ್ಗೆ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ʼʼಬೆಂಕಿಯು ಒಡ್ಡಿದ ಅಪಾಯವನ್ನು ಈ ನಾಯಿ ನಿಜವಾಗಿಯೂ ಅರ್ಥ ಮಾಡಿಕೊಂಡಿದೆಯೇ? ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಗೊಂದಲಕ್ಕೊಳಗಾಗಿದ್ದೇನೆʼʼ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು ಈ ವಿಡಿಯೊವನ್ನು ನಕಲಿ ಎಂದು ಕರೆದಿದ್ದಾರೆ. ʼʼಪಕ್ಕದಲ್ಲಿಯೇ ನಿಂತು ಕೆಲವರು ಹೀಗೆ ಮಾಡಬೇಕೆಂದು ನಾಯಿಗೆ ನಿರ್ದೇಶನ ನೀಡಿರಬೇಕುʼʼ ಎಂದು ಹೇಳಿದ್ದಾರೆ. ನಾಯಿ ಸೂಚನೆಗಾಗಿ ಸುತ್ತ ನೋಡುತ್ತಿರುವುದು ವಿಡಿಯೊದಲ್ಲಿ ಕಂಡು ಬರುತ್ತಿದೆ ಎಂದು ಅವರು ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದ್ದಂತು ಸತ್ಯ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ