ಬೆಂಗಳೂರು: ಮದುವೆ ಎನ್ನುವುದು ಎಲ್ಲರ ಕನಸು. ಆ ಮದುವೆಗೆಂದೇ ಎಷ್ಟೋ ವರ್ಷಗಳಿಂದ ಹಣ ಸಂಗ್ರಹಿಸಿ ಏನೇನೋ ಯೋಜನೆ ಹಾಕಿಕೊಳ್ಳುವವರಿದ್ದಾರೆ. ಅದರಲ್ಲೂ ಮದುವೆಯ ಉಡುಗೆಯಂತೂ ಎಲ್ಲಕ್ಕಿಂತ ವಿಶೇಷ. ಭಾರತೀಯ ಶೈಲಿಯಲ್ಲಿ ವಧುಗಳು ಸೀರೆ, ಅದರ ಮ್ಯಾಚಿಂಗ್ ಆಭರಣಗಳಿಗಾಗಿ ಹುಡುಕಾಡಿದರೆ ವಿದೇಶಿ ಸಂಸ್ಕೃತಿಯಲ್ಲಿ ಬಿಳಿ ಗೌನ್‌ಗಳಲ್ಲೇ ತರೇವಾರು ವಿನ್ಯಾಸ (Viral Video) ಮಾಡಿಕೊಳ್ಳಲಾಗುತ್ತದೆ.
ಅದೇ ರೀತಿಯಲ್ಲಿ ಇಲ್ಲೊಂದು ವಿಶೇಷ ಗೌನ್ ವಿನ್ಯಾಸ ಮಾಡಲಾಗಿದೆ. ಇದು ಅಂತಿಂಥ ಗೌನ್ ಅಲ್ಲ. ಇದನ್ನು ಮಾಡುವುದಕ್ಕೆ ವಿನ್ಯಾಸಕರು ಬರೋಬ್ಬರಿ ನಾಲ್ಕು ತಿಂಗಳು ತೆಗೆದುಕೊಂಡಿದ್ದಾರೆ. ಏಕೆಂದರೆ ಇದು ಕೇವಲ ಬಟ್ಟೆಯಿಂದ ಆದ ಗೌನ್ ಅಲ್ಲ. ಈ ಗೌನ್ ಒಂದರಲ್ಲೇ 50,890 ಹರಳುಗಳು ಇವೆ. ಒಂದೊಂದು ಹರಳನ್ನು ವಿಶೇಷವಾಗಿ ಜೋಡಿಸಿ ಈ ಗೌನ್ ತಯಾರಿಸಲಾಗಿದೆ.
ಇದನ್ನೂ ಓದಿ: Viral Video : ಮದುವೆ ಮನೆಯಲ್ಲಿ ಕುಣಿಯುತ್ತಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ಇಟಾಲಿಯನ್ ಬ್ರೈಡಲ್ ಫ್ಯಾಶನ್ ಬ್ರ್ಯಾಂಡ್ ಸಂಸ್ಥೆ ಈ ಗೌನ್ ಅನ್ನು ವಿನ್ಯಾಸ ಮಾಡಿದೆ. ಇತ್ತೀಚೆಗೆ ನಡೆದ ಮೈಕೆಲಾ ಫೆರೆರೊ ಫ್ಯಾಶನ್ ಶೋನಲ್ಲಿ ಈ ಗೌನ್ ಅನ್ನು ಪ್ರದರ್ಶಿಸಲಾಗಿದೆ. ಪ್ರಸಿದ್ಧ ಮಾಡೆಲ್ ಮಾರ್ಚೆ ಗೆಲಾನಿ ಕ್ಯಾವ್ ಅವರು ಈ ಗೌನ್ ತೊಟ್ಟುಕೊಂಡು ರ್ಯಾಂಪ್ ವಾಕ್ ಮಾಡಿದ್ದಾರೆ. ಈ ವಿಶೇಷ ದಾಖಲೆ ಗಿನ್ನಿಸ್ ದಾಖಲೆಯನ್ನೂ ಬರೆದುಕೊಂಡಿದೆ.
ಈ ವಿಶೇಷ ಗೌನ್ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ 45,024 ಹರಳುಗಳನ್ನು ಬಳಸಿಕೊಂಡು ವೆಡ್ಡಿಂಗ್ ಗೌನ್ ತಯಾರಿಸಿ ದಾಖಲೆ ನಿರ್ಮಿಸಲಾಗಿತ್ತು. ಆದರೆ ಇದೀಗ ಈ ಹೊಸ ಗೌನ್ ಆ ದಾಖಲೆಯನ್ನು ಮುರಿದು ಗಿನ್ನಿಸ್ ದಾಖಲೆ ಗಿಟ್ಟಿಸಿಕೊಂಡಿದೆ. ಈ ಸುದ್ದಿ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.