Site icon Vistara News

Viral Video: ಇವಳೇ ನೋಡಿ ನಿಜವಾದ ಪಟಾಕಿ ಪೋರಿ!

cracker

cracker

ಬೆಂಗಳೂರು: ದೇಶದೆಲ್ಲೆಡೆ ಸಂಭ್ರಮದಿಂದ ದೀಪಾವಳಿ (Deepavali) ಆಚರಿಸಲಾಗಿದೆ. ದೀಪಗಳ ಬೆಳಕಿನಲ್ಲಿ, ಪಟಾಕಿಯ ಸದ್ದಿನಲ್ಲಿ ಹಬ್ಬವನ್ನು ಕೊಂಡಾಡಲಾಗಿದೆ. ಹಬ್ಬಗಳ ನೆಪದಲ್ಲಿ ಅನೇಕರು ತಮ್ಮ ಫ್ಯಾಷನ್ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಇದೀಗ ಮಹಿಳೆಯೊಬ್ಬರ ಕೇಶ ವಿನ್ಯಾಸದ ವಿಡಿಯೊ ವೈರಲ್‌ (Viral Video) ಆಗಿದೆ. ಇದರಲ್ಲೇನು ವಿಶೇಷ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪಟಾಕಿಯಿಂದ ಕೇಶ ಅಲಂಕಾರ

ಇನ್‌ಸ್ಟಾಗ್ರಾಮ್‌ನಲ್ಲಿ ಕೇಶ ವಿನ್ಯಾಸಗಾರರಾದ ಕಮಲ್‌ ಮತ್ತು ರಿಶವ್‌ ಈ ವಿಡಿಯೊ ಹಂಚಿಕೊಂಡಿದ್ದಾರೆ. ಬನಾರಸ್‌ ಸೀರೆ ಧರಿಸಿದ ಮಹಿಳೆಯೊಬ್ಬರನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಕೇಶ ವಿನ್ಯಾಸಗಾರರು ಆಕೆಗೆ ಮಧುಮಗಳ ಅಲಂಕಾರ ಮಾಡಲು ಮುಂದಾಗುತ್ತಾರೆ. ಮುಂದಿನ ದೃಶ್ಯ ನಿಮ್ಮನ್ನು ಅಚ್ಚರಿಗೆ ದೂಡುತ್ತದೆ. ಯಾಕೆಂದರೆ ಆಕೆಯ ಕೇಶವನ್ನು ಪಟಾಕಿಗಳನ್ನು ಬಳಸಿ ಅಲಂಕರಿಸಲಾಗುತ್ತದೆ. ರಾಕೆಟ್‌, ವಿವಿಧ ರೀತಿಯ ಪಟಾಕಿ, ನೆಲಚಕ್ರ ಮುಂತಾದವುಗಳು ಆಕೆಯ ಶಿರದಲ್ಲಿ ಸ್ಥಾನ ಪಡೆಯುತ್ತವೆ.

ದಂಗಾದ ನೆಟ್ಟಿಗರು

ನವೆಂಬರ್‌ 12ರಂದು ಪೋಸ್ಟ್‌ ಮಾಡಲಾದ ಈ ವಿಡಿಯೊವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಹಲವರು ಕಮೆಂಟ್‌ ಮಾಡಿ ಮಹಿಳೆಯ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಬೇಜವಾಬ್ದಾರಿಯುತ ವರ್ತನೆಯನ್ನು ಯಾರೂ ಅನುಕರಿಸಲು ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ. ಮಾತ್ರವಲ್ಲ ಇಂತಹ ವಿಡಿಯೊವನ್ನು ಹಂಚಿಕೊಳ್ಳಬೇಡಿ ಎಂದೂ ಹೇಳಿದ್ದಾರೆ. ʼʼಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ ಅನ್ನು ಹೆಚ್ಚು ಬಳಸುತ್ತಿರುವುದರಿಂದ ಇಂತಹ ವಿಡಿಯೊಗಳನ್ನು ಹಂಚಿಕೊಳ್ಳಬೇಡಿ. ಅವರು ಅಪಾಯವನ್ನು ಗುರುತಿಸದೇ ಇಂತಹ ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಇದೆʼʼ ಎಂದು ಒಬ್ಬರು ಕಾಳಜಿಯಿಂದ ಮನವಿ ಮಾಡಿದ್ದಾರೆ. ʼʼಒಂದು ಬೆಂಕಿ ಕಡ್ಡಿ ಗೀರಿದರೆ ಸಾಕು, ಆಟ ಫಿನಿಷ್‌ʼʼ ಎಂದು ಇನ್ನೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ʼʼಆಕೆಯ ಪತಿಯ ಖುಷಿಯನ್ನು ಊಹಿಸಿಕೊಳ್ಳಿʼʼ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ʼʼಚಂದ್ರಯಾನ್‌-4ರ ತಯಾರಿʼʼ ಎಂದು ನೋಡುಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಎಕ್ಸ್‌ಪ್ಲೋಸಿವ್‌ ಲುಕ್‌ʼʼ ಎಂದು ನೆಟ್ಟಿಗರೊಬ್ಬರು ಇದನ್ನು ಕರೆದಿದ್ದಾರೆ. ʼʼನಿಜವಾದ ಪಟಾಕಿ ಪೋರಿʼʼ ಎಂದಿದ್ದಾರೆ ಮತ್ತೊಬ್ಬರು. ʼʼಅಲಂಕಾರ ಎಲ್ಲ ಆದ ಮೇಲೆ ಬೆಂಕಿ ಕೊಟ್ಟು ಬಿಡಿʼʼ ಎನ್ನುವ ಪ್ರತಿಕ್ರಿಯೆ ಒಬ್ಬರದ್ದು.

ಇಷ್ಟಲ್ಲ ತಮಾಷೆಯ ಪ್ರತಿಕ್ರಿಯ ನಡುವೆಯೂ ಅನೇಕರು ಮಹಿಳೆಯ ಹುಚ್ಚಾಟಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಜನಪ್ರಿಯತೆ ಪಡೆಯಲು, ವೈರಲ್‌ ಆಗಲು ಇಂತಹ ದುಸ್ಸಾಹಸಕ್ಕೆ ಕೈ ಹಾಕುವುದು ಮೂರ್ಖತನ ಎಂದು ಟೀಕಿಸಿದ್ದಾರೆ. ಪಟಾಕಿಯಲ್ಲಿ ವಿಷಯುಕ್ತ ರಾಸಾಯನಿಕಗಳಿರುವುದರಿಂದ ಆರೋಗ್ಯದ ಮೇಲೆ, ಚರ್ಮದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ: Viral Video: ಈ ನಾಯಿ ಮರಿಗೆ ತಾಯಿಯ ಕಿವಿಯೇ ಬೆಚ್ಚಗಿನ ಬ್ಲಾಂಕೆಟ್‌

ದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಈ ಬಾರಿ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ. ಇನ್ನು ಕೆಲವು ರಾಜ್ಯಗಳು ಪಟಾಕಿ ಸಿಡಿಸುವುದಕ್ಕೆ ಸಮಯ ನಿಗಧಿಪಡಿಸಿದ್ದವು. ಪಟಾಕಿ ಸಿಡಿಸಲು ಹೋಗಿ ಅನೇಕರು ಅಪಾಯಕ್ಕೆ ಸಿಲುಕುವುದು ಕೂಡ ಅಲ್ಲಲ್ಲಿ ವರದಿಯಾಗುತ್ತಿರುತ್ತದೆ. ಇದೆಲ್ಲದರ ಮಧ್ಯೆ ಗೊತ್ತಿದ್ದೂ ಅಪಾಯವನ್ನು ಮನೆಗೆ ಆಹ್ವಾನಿಸುವುದು ಎಂದರೆ ಹೀಗೆ ಎನ್ನುವುದು ಹಲವರ ಅಭಿಪ್ರಾಯ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version