Site icon Vistara News

Viral Video: ಗುಡಿಸುತ್ತಿದ್ದ ಮಹಿಳೆಯ ಮೇಲೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು ಅಕ್ಕಿ ಮೂಟೆ; ಮುಂದೇನಾಯ್ತು ನೀವೇ ನೋಡಿ

mumbai apmc

mumbai apmc

ಮುಂಬೈ: ಸಮಸ್ಯೆ ಯಾವಾಗ, ಯಾವ ರೀತಿ ಎದುರಾಗುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಪ್ರತಿ ಕ್ಷಣವೂ ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಹಿರಿಯರು. ಇದಕ್ಕೆ ಸಾಕ್ಷಿ ಎಂಬಂತೆ ಉತ್ತಮ ಉದಾಹರಣೆ ಇಲ್ಲಿದೆ. ಮುಂಬೈಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (Agricultural Produce Market Committee)ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆ ಮೇಲೆ ಅಕ್ಕಿ ಮೂಟೆಗಳು ಉರುಳಿ ಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸದ್ಯ ವೈರಲ್‌ ಆಗಿದೆ (Viral Video).

ನವಿ ಮುಂಬೈಯ ವಾಶಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಹಿಳೆ ನೆಲವನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕೂಡಲೇ ಸಮೀಪದಲ್ಲಿದ್ದವರು ಸ್ಪಂದಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ವಿಡಿಯೊದಲ್ಲೇನಿದೆ?

ಎಪಿಎಂಸಿ ಗೋಡೌನ್‌ಲ್ಲಿ ಮಹಿಳೆಯೊಬ್ಬರು ನೆಲ ಸ್ವಚ್ಛಗೊಳಿಸುತ್ತಿದ್ದರು. ಎರಡು ಕಡೆ ಅಕ್ಕಿ, ಧಾನ್ಯಗಳ ಗೋಣಿ ಚೀಲಗಳನ್ನು ಪೇರಿಸಿ ಇಡಲಾಗಿತ್ತು. ಇದ್ದಕ್ಕಿದ್ದಂತೆ ಮಹಿಳೆಯ ಎರಡೂ ಕಡೆ ಪೇರಿಸಿಟ್ಟ ಗೋಣಿ ಚೀಲಗಳು ಕುಸಿದು ಬಿದ್ದವು. ಅಂದಾಜು 30-40 ಗೋಣಿ ಚೀಲಗಳು ಮಹಿಳೆ ಮೇಲೆ ಬಿದ್ದವು. ಕೂಡಲೇ ಅಲ್ಲಿ ಇದ್ದವರು ಧಾವಿಸಿ ಬಂದು ಹೆಚ್ಚಿನ ಅನಾಹುತದಿಂದ ಮಹಿಳೆಯನ್ನು ಕಾಪಾಡಿದ್ದಾರೆ. ತ್ವರಿತವಾಗಿ ಸ್ಪಂದಿಸಿ ಚೀಲಗಳನ್ನು ಬದಿಗೆ ಸರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ತ್ವರಿತವಾಗಿ ಸಾಹಾಯಕ್ಕೆ ಧಾವಿಸಿದ ಇತರ ಸಿಬಂದಿಯ ಕಾರ್ಯಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಸಣ್ಣ ಪುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಲಿಸೋ ರೈಲಿನ ಮೇಲೆ ನಿಂತು ಯುವಕನ ಹುಚ್ಚಾಟ

ಢಾಕಾ: ಸಬ್‌ವೇ ಸರ್ಫರ್ಸ್‌ ಆನ್‌ಲೈನ್‌ ಗೇಮ್‌ಅನ್ನು ಬಹುತೇಕ ಜನ ಆಡಿರುತ್ತಾರೆ. ಪೊಲೀಸ್‌ ಅಧಿಕಾರಿ ಅಟ್ಟಿಸಿಕೊಂಡು ಬರುತ್ತಿದ್ದರೆ, ಕಳ್ಳನು ರೈಲು, ಕಟ್ಟಡಗಳ ಮೇಲೆ ಹಾರುತ್ತ ತಪ್ಪಿಸಿಕೊಳ್ಳುವ ಗೇಮ್‌ ತುಂಬ ಜನರಿಗೆ ಖುಷಿ ಕೊಡುತ್ತದೆ. ಆದರೆ ಇದೇ ಗೇಮ್‌ ರೀತಿ ಯುವಕನೊಬ್ಬ ನಿಜ ಜೀವನದಲ್ಲೂ ಚಲಿಸುವ ರೈಲಿನ ಮೇಲೆ ಹುಚ್ಚಾಟ ಮಾಡಿದ್ದಾನೆ. ಪ್ರಾಣದ ಲೆಕ್ಕವೇ ಇಲ್ಲದೆ ಚಲಿಸುವ ರೈಲಿನ ಮೇಲೆ ಯುವಕ ಮಾಡಿದ ಹುಚ್ಚಾಟದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: Nita Ambani: ವಾಹ್‌ ತಾಜ್!‌ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನೀತಾ ಅಂಬಾನಿ ಧರಿಸಿದ ಆಭರಣ ಯಾರದು, ಬೆಲೆ ಎಷ್ಟು ಗೊತ್ತೆ?

ಬಾಂಗ್ಲಾದೇಶದಲ್ಲಿ ಯುವಕನು ಮಾಡಿದ ಉಪದ್ವ್ಯಾಪದ ವಿಡಿಯೊ ಭಾರಿ ವೈರಲ್‌ ಆಗಿದೆ. ರೈಲು ಸೇತುವೆ ಮೇಲೆ ಚಲಿಸುತ್ತಿರುತ್ತದೆ. ಆ ರೈಲಿನ ಮೇಲೆ ನಿಲ್ಲುವ ವ್ಯಕ್ತಿಯು ಅಡ್ಡ ಬರುವ ಪ್ರತಿಯೊಂದು ಕಂಬಿಯನ್ನೂ ತಪ್ಪಿಸಿಕೊಳ್ಳುತ್ತಾನೆ. ಪ್ರಾಣದ ಭಯವೇ ಇಲ್ಲದೆ ಕಂಬಿಗಳನ್ನು ತಪ್ಪಿಸಿಕೊಳ್ಳುವ, ನೋಡುಗರಿಗೇ ಭಯ ಹುಟ್ಟಿಸುವ ಈ ವಿಡಿಯೊ ಹರಿದಾಡುತ್ತಿದೆ. ಒಂದು ಕಂಬಿ ತಾಗಿದರೂ ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂಬುದು ಗೊತ್ತಿದ್ದರೂ ಯುವಕನು ಸಾಹಸ ಹೆಸರಿನಲ್ಲಿ ಮಾಡಿರುವ ಹುಚ್ಚಾಟಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version