ನವದೆಹಲಿ: ಮಹಿಳೆಯೊಬ್ಬರು ಗೋವಿನ ಅನಾಥ ಕರುವೊಂದನ್ನು ರಕ್ಷಿಸಿದ್ದಲ್ಲದೆ ಅದಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದಾರೆ. ಸದ್ಯ ಈ ಪ್ರಕ್ರಿಯೆಯ ವಿಡಿಯೊ ಇಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ (Viral video). ಯಾವ ರೀತಿ ಆ ಮಹಿಳೆ ಕರುವನ್ನು ರಕ್ಷಿಸಿದ್ದಾರೆ ಎನ್ನುವ ವಿವರ ಈ ವಿಡಿಯೊದಲ್ಲಿ ಸೆರೆಯಾಗಿದೆ. ಕರ್ತವ್ಯ ಸೊಸೈಟಿ ಈ ವಿಡಿಯೊವನ್ನು ಹಂಚಿಕೊಂಡಿದೆ.
ಅಂಗಡಿಯೊಂದರ ಮುಂದೆ ಕರು ನಿಂತಿರುವ ದೃಶ್ಯದ ಮೂಲಕ ವಿಡಿಯೊ ಆರಂಭವಾಗುತ್ತದೆ. ಕರುವನ್ನು ಗಮನಿಸಿದ ಮಹಿಳೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಾರೆ. ಅದು ಗಂಡು ಕರುವಾಗಿದ್ದರಿಂದ, ಅದರಿಂದ ಹೆಚ್ಚಿನ ಲಾಭ ಇಲ್ಲ ಎಂದು ಅದನ್ನು ಇಲ್ಲಿ ತಂದು ಬಿಡಲಾಗಿದೆ. ಸ್ವಂತ ಸೂರು ಇಲ್ಲದೆ ಇದು ಅಲ್ಲಲ್ಲಿ ಅಲೆದಾಡುತ್ತಿದೆ ಎಂಬ ವಿವರ ಆ ಮಹಿಳೆಗೆ ತಿಳಿಯುತ್ತದೆ. ಕೇವಲ 2 ತಿಂಗಳ ಆ ಕರುವಿನ ಸ್ಥಿತಿ ನೋಡಿ ಮರುಗಿದ ಆ ಮಹಿಳೆ ಅದಕ್ಕೆ ಆಶ್ರಯ ನೀಡಲು ನಿರ್ಧರಿಸುತ್ತಾರೆ.
ಬಳಿಕ ಆ ಕರುವನ್ನು ಕಾರಿನ ಮೂಲಕ ಮನೆಗೆ ಕರೆತರುತ್ತಾರೆ. ಮನೆಯಲ್ಲಿ ಆರೈಕೆ ಮಾಡಿದ ಬಳಿಕ ಅದನ್ನು ಇದೇ ರೀತಿ ವಿವಿಧ ಕಡೆಗಳಿಂದ ರಕ್ಷಿಸಿದ ಜಾನುವಾರುಗಳಿರುವ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಿಡಲಾಯಿತು. ಅಲ್ಲಿ ಹಸಿರು ಹುಲ್ಲು, ಉತ್ತಮ ಆಹಾರ ನೀಡಿ ಆರೈಕೆ ಮಾಡಲಾಗುತ್ತದೆ. ಇಲ್ಲಿ ಹೀಗೆ ರಕ್ಷಿಸಲ್ಪಟ್ಟ ಸುಮಾರು 18 ಹೋರಿಗಳಿವೆ.
ಭಾವುಕರಾದ ನೆಟ್ಟಿಗರು
ವಾರದ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 1 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್ ಮಾಡಿ ಮಹಿಳೆಯ ಶ್ರಮವನ್ನು ಶ್ಲಾಘಿಸಿದ್ದಾರೆ. ಒಬ್ಬರು, ʼʼನೀವು ಅದ್ಭುತ ಕೆಲಸ ಮಾಡಿದ್ದಿದ್ದೀರಿ. ಇದಕ್ಕಾಗಿ ನಿಮಗೆ ಧನ್ಯವಾದಗಳುʼʼ ಎಂದಿದ್ದಾರೆ. ಇನ್ನೊಬ್ಬರು, ʼʼಆ ಕರುವಿನ ಸಂರಕ್ಷಣೆಗೆ ನೀವು ಸ್ಪಂದಿಸಿದ ರೀತಿ ನೋಡಿ ನನಗೆ ಬಹಳ ಖುಷಿಯಾಯ್ತುʼʼ ಎಂದು ಭಾವುಕರಾಗಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ, “ಪ್ರಾಣಿಗಳ ಬಗ್ಗೆ ನಿಮ್ಮ ಸಹಾನುಭೂತಿ ತಾಯಿಯ ಹೃದಯವನ್ನು ಹೋಲುತ್ತದೆ. ಹೃದಯಾಂತರಾಳದಿಂದ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಪ್ರಾಣಿಗಳ ಬಗೆಗೆ ನೀವು ತೋರುವ ಕಾಳಜಿ ಹೀಗೆ ಮುಂದುವರಿಯಲಿʼʼ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: Viral Video: ಮರಿಯೊಂದಕ್ಕೆ ಜನ್ಮ ನೀಡಿದ ಸುಮಾತ್ರನ್ ಖಡ್ಗಮೃಗ; ಪ್ರಾಣಿಪ್ರಿಯರ ಮೊಗದಲ್ಲಿ ಸಂತಸ
ʼʼನಿಮ್ಮಂತಹ ದೇವತೆಗಳ ಕಾರಣದಿಂದ ಮನುಷತ್ವ ಎನ್ನುವುದು ಇಂದಿಗೂ ಉಳಿದುಕೊಂಡಿದೆʼʼ ಎಂದು ನೆಟ್ಟಿಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼʼನೀವು ಅದ್ಭುತ ವ್ಯಕ್ತಿ ಎನ್ನುವುದರಲ್ಲಿ ಸಂದೇಹವಿಲ್ಲ. ನಿಮ್ಮಂತವರಿಂದಲೇ ಈ ಜಗತ್ತು ಉತ್ತಮವಾಗುತ್ತದೆ. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆʼʼ ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಕರುವನ್ನು ರಕ್ಷಿಸಿದ ಮಹಿಳೆ, ಡ್ರೈವರ್, ಕರುವನ್ನು ಸ್ನಾನ ಮಾಡಿಸಿ, ಆಹಾರ ನೀಡಿದ ವ್ಯಕ್ತಿ ಹೀಗೆ ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ಕ್ರೂರ ಜಗತ್ತಿನಲ್ಲಿ ನಿಮ್ಮಂತಹ ಉತ್ತಮ ವ್ಯಕ್ತಿಗಳೂ ಇದ್ದಾರೆ ಎನ್ನುವುದನ್ನು ನೋಡಿದಾಗ ಖುಷಿಯಾಗುತ್ತದೆʼʼ ಎಂದು ಮತೊಬ್ಬರು ಹೇಳಿದ್ದಾರೆ. ʼʼನೀವು ನಿಜವಾದ ಮಾನವೀಯತೆ ಉಳ್ಳವರುʼʼ ಎನ್ನುವ ಉದ್ಗಾರ ಮತ್ತೊಬ್ಬರದ್ದು. ಒಟ್ಟಿನಲ್ಲಿ ಈ ವಿಡಿಯೊ ಹಲವರ ಗಮನ ಸೆಳೆದಿದೆ.