Site icon Vistara News

Viral Video: ಡ್ಯಾನ್ಸ್‌ ಗೊತ್ತಿರುವವರಿಗೆ ಆಗಸವೂ ವೇದಿಕೆ; ಅದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ

dance at air

dance at air

ಬೆಂಗಳೂರು: ʼಕುಣಿಯಲು ಬಾರದವನಿಗೆ ನೆಲ ಡೊಂಕುʼ ಎನ್ನುವ ಗಾದೆ ಮಾತಿದೆ. ಹಾಗಾದರೆ ಕುಣಿಯಲು ಬರುವವನಿಗೆ? ಆಗಸವೂ ವೇದಿಕೆ ಎನ್ನುತ್ತಿದ್ದಾರೆ ನೆಟ್ಟಿಗರು. ಹೀಗೆ ಹೇಳಲೂ ಕಾರಣವಿದೆ. ಯುವತಿಯೊಬ್ಬಳು ವಿಮಾನದಲ್ಲಿ ಕುಣಿಯುತ್ತಿರುವ ವಿಡಿಯೊ ಸದ್ಯ ವೈರಲ್‌ ಆಗಿದ್ದು, ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ (Viral Video).

ವಿಡಿಯೊದಲ್ಲೇನಿದೆ?

ಚಲಿಸುತ್ತಿರುವ ರೈಲು, ಮೆಟ್ರೋದಲ್ಲಿ ಡ್ಯಾನ್‌ ಮಾಡುವ ವಿಡಿಯೊ ಈಗಾಗಲೇ ಸಾಕಷ್ಟು ಸದ್ದು ಮಾಡಿವೆ. ಇದೀಗ ಈ ಯುವತಿ ಒಂದು ಹೆಜ್ಜೆ ಮುಂದೆ ಹೋಗಿ ವಿಮಾನದಲ್ಲೇ ಮೈ ಬಳುಕಿಸಿದ್ದಾಳೆ. ಕಪ್ಪು ಕ್ರಾಪ್ ಟಾಪ್ ಮತ್ತು ಲ್ಯಾವೆಂಡರ್ ಬಣ್ಣದ ಪ್ಯಾಂಟ್ ಧರಿಸಿದ ಯುವತಿಯೊಬ್ಬಳು ‘ಕಿನ್ನಿ ಕಿನ್ನಿ’ ಹಾಡಿಗೆ ನೃತ್ಯ ಮಾಡುತ್ತಿರುವುದರೊಂದಿಗೆ ಈ ವಿಡಿಯೊ ಆರಂಭವಾಗುತ್ತದೆ. ಸೀಟ್‌ಗಳ ಮಧ್ಯದ ಸ್ಥಳ ಅಗಲ ಕಿರಿದಾಗಿದ್ದರೂ ಆಕೆ ಉತ್ಸಾಹದಿಂದಲೇ ಹೆಜ್ಜೆ ಹಾಕಿದ್ದಾಳೆ. ಆಕೆಯ ಚಲನೆಗೆ ಅನುಗುಣವಾಗಿ ಕೈ, ಕೂದಲು ಸಹ ಪ್ರಯಾಣಿಕರಿಗೆ ಸೋಕುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಇದರಿಂದ ಹಲವರು ಕಿರಿಕಿರಿ ಅನುಭವಿಸುವಂತಾಗಿದೆ. ʼʼಇತರ ಪ್ರಯಾಣಿಕರು ಆಕೆಯಿಂದಾಗಿ ತೊಂದರೆ ಅನುಭವಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ನೆಟ್ಟಿಗರು ಯುವತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

“ಈ ವೈರಸ್ (ರೀಲ್ಸ್‌ ಮಾಡುವ ಪ್ರವೃತ್ತಿ) ಇದೀಗ ಆಕಾಶಕ್ಕೂ ತಲುಪಿದೆ. ಡಿಜಿಸಿಎ (Directorate General of Civil Aviation) ಅಂತಹವರಿಗೆ ಸರಿಯಾದ ವ್ಯಾಕ್ಸಿನೇಷನ್ (ಶಿಕ್ಷೆ) ನೀಡಬೇಕುʼʼ ಎಂದು ಒಬ್ಬರು ಆಗ್ರಹಿಸಿದ್ದಾರೆ. “ನಾನು ಈ ವಿಮಾನದ ಫ್ಲೈಟ್ ಅಟೆಂಡರ್‌ ಆಗಿದ್ದರೆ ತೊಂದರೆ ಉಂಟು ಮಾಡಿದ್ದಕ್ಕಾಗಿ ಈ ಮಹಿಳೆಯನ್ನು ಕೆಳಗಿಳಿಸಲು ನೇರವಾಗಿ ಕ್ಯಾಪ್ಟನ್‌ಗೆ ಕರೆ ಮಾಡುತ್ತಿದ್ದೆ” ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲೇ ಬೇಕುʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಇದು ಯಾಕೋ ಅತಿಯಾಯ್ತುʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ʼʼಜನಪ್ರಿಯತೆ ಗಳಿಸಲು ಯುವ ಜನರು ಏನು ಮಾಡಲು ಬೇಕಾದರೂ ಮಾಡಲು ತಯಾರಾಗುತ್ತಾರೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಈ ಯುವತಿಗೆ ಸೂಕ್ತ ಶಿಕ್ಷೆ ನೀಡಬೇಕುʼʼ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ರೈಲು, ಮೆಟ್ರೋಗಳಲ್ಲಿ ಕುಣಿಯುವುದು ಈಗ ಹಳೆಯದಾಯಿತು. ಇದೀಗ ರೀಲ್ಸ್‌ ಹುಚ್ಚು ವಿಮಾನಕ್ಕೂ ಕಾಲಿಟ್ಟಿದೆ. ಆರಂಭದಲ್ಲೇ ಇಂತಹ ಪ್ರವೃತ್ತಿಗೆ ಬ್ರೇಕ್‌ ಹಾಕದಿದ್ದರೆ ಮುಂದೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಬಹುದು ಎನ್ನುವ ಅಭಿಪ್ರಾಯ ಎಲ್ಲೆಡೆಯಿಂದ ಕೇಳಿ ಬಂದಿದೆ.

ಹಿಂದೆಯೂ ನಡೆದಿತ್ತು

ಅಚ್ಚರಿ ಎಂದರೆ ಹಿಂದೆಯೂ ಇಂತಹ ಘಟನೆ ನಡೆದಿತ್ತು. ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರು ವಿಮಾನದಲ್ಲಿ ʼಹಮಾರಿ ಶಾದಿ ಮೇʼ ಹಾಡಿಗೆ ಕುಣಿದ ವಿಡಿಯೊ ವೈರಲ್‌ ಆಗಿ ಚರ್ಚೆ ಹುಟ್ಟು ಹಾಕಿತ್ತು. ಪಾಶ್ಚಾತ್ಯ ಉಡುಪು ಧರಿಸಿದ್ದ ಆಕೆ, ತನ್ನ ಬೋರ್ಡಿಂಗ್ ಪಾಸ್ ಅನ್ನು ಆತ್ಮವಿಶ್ವಾಸದಿಂದ ಹಿಡಿದುಕೊಂಡು ವಿಮಾನದಲ್ಲಿ ಉತ್ಸಾಹದಿಂದ ನೃತ್ಯ ಮಾಡಿದ್ದಳು. ಸಹ ಪ್ರಯಾಣಿಕರು ಮುಂದೆ ಸಾಗಲು ಕಾಯುತ್ತಿದ್ದರೂ ನೃತ್ಯವನ್ನು ಮುಂದುವರಿಸಿದ್ದಳು. ಆಕೆಯ ವರ್ತನೆ ಕೂಡ ಸಾಕಷ್ಟು ಟೀಕೆ ಎದುರಿಸಿತ್ತು.

ಇದನ್ನೂ ಓದಿ: Viral Video : ಗಗನಸಖಿಯರೊಂದಿಗೆ ʼವೈ ದಿಸ್‌ ಕೊಲವೆರಿʼ ಹಾಡಿಗೆ ಹೆಜ್ಜೆ ಹಾಕಿದ ಪುಟಾಣಿ

Exit mobile version