Site icon Vistara News

Viral video | ಹೊರೆ ಹೊತ್ತ ಕೈಗಳು, ತಾನಾಗಿಯೇ ಚಲಿಸುವ ಸೈಕಲು! ಇವನ ದುಡಿಮೆಯೇ ಸರ್ಕಸ್

viral video bicycle

ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ…ಎಂಬ ದಾಸವಾಣಿ ನೀವು ಕೇಳಿರಬಹುದು. ಇದು ಅದಕ್ಕೆ ಪರ್ಫೆಕ್ಟ್‌ ಉದಾಹರಣೆ. ಬದುಕಿನ ಬಂಡಿ ಸುಲಲಿತವಾಗಿ ಸಾಗಲು, ತಾನು ಹಾಗೂ ಜೊತೆಗಿರುವವರು ಮೂರು ಹೊತ್ತು ನೆಮ್ಮದಿಯಾಗಿ ಉಣ್ಣಲು ಯಾವ ಬಗೆಯ ಕಷ್ಟವನ್ನು ಹೊರಲು ಸಿದ್ಧವಾಗುವ ಮಂದಿಯ ಜೀವನಪ್ರೀತಿಯೇ ಎಲ್ಲರಿಗೂ ಬದುಕ ನೊಗವ ಎಳೆಯಲು ಸ್ಪೂರ್ತಿ. ಸಾಮಾಜಿಕ ಜಾಲತಾಣದಲ್ಲಿ ಈ ಮಾತಿಗೊಂದು ಉದಾಹರಣೆಯೆಂಬಂಥ ವಿಡಿಯೋವೊಂದು ಸದ್ದು ಮಾಡುತ್ತಿದ್ದು ಇದೀಗ ವೈರಲ್‌ ಆಗಿದೆ.

ಈ ವಿಡಿಯೋ ನೋಡಿ ಇದ್ಯಾವುದೋ ಸರ್ಕಸ್‌ ಕಂಪನಿಯ ವಿಡಿಯೋ ಎಂದು ಭಾವಿಸಬೇಡಿ. ಈ ವ್ಯಕ್ತಿ ಮನರಂಜನೆಗೆ ಎಲ್ಲರೆದುರು ಹೀಗೆ ತನ್ನ ಕೌಶಲ್ಯ ಪ್ರದರ್ಶನವನ್ನೂ ಮಾಡುತ್ತಿಲ್ಲ. ವ್ಯಕ್ತಿಯೊಬ್ಬರು ಬ್ಯುಸಿ ರಸ್ತೆಯಲ್ಲಿ ಟ್ರಾಫಿಕ್‌ ಮಧ್ಯದಲ್ಲಿ ದೊಡ್ಡ ದೊಡ್ಡ ಮರದ ಕಿಟಕಿ ಬಾಗಿಲಿನಂತಹ ವಸ್ತುಗಳನ್ನು ಎರಡೂ ಕೈಗಳಲ್ಲಿ ತಲೆ ಮೇಲೆ ಎತ್ತಿ ಹಿಡಿದು, ಕೈಗಳ ಸಹಾಯವಿಲ್ಲದೆ ಸೈಕಲ್‌ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಇದು. ಈ ವಿಡಿಯೋನಲ್ಲಿ ಈತನ ಸೈಕಲ್‌ ಚಲಾಯಿಸುವ ಚಾಕಚಕ್ಯತೆ ಒಂದೆಡೆಯಾದರೆ, ಆತ ಬದುಕಿಗಾಗಿ, ಮೂರು ಹೊತ್ತಲು ನೆಮ್ಮದಿಯಲ್ಲಿ ಉಣ್ಣಲು ಕಷ್ಟಪಡುವ ರೀತಿ ಎಂಥವರನ್ನೂ ದಂಗು ಬಡಿಸದೆ ಇರದು.‌

ʻಬದುಕಿನಲ್ಲಿ ಏನೇನೂ ಇರದಿದ್ದರೂ, ಆತ್ಮಸ್ಥೈರ್ಯ ಒಂದು ಇರಲೇಬೇಕುʼ ಎಂಬರ್ಥದ ತಲೆಬರಹದೊಂದಿಗೆ ಐಪಿಎಸ್‌ ಅಧಿಕಾರಿ ಅರಿಫ್‌ ಶೇಕ್‌ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋವನ್ನು ಏಳು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ | Football Viral Video| ಫುಟ್ಬಾಲ್​ ಮೈದಾನದಲ್ಲೇ ಆಟಗಾರರ ಫೈಟಿಂಗ್​; ವಿಡಿಯೊ ವೈರಲ್​

ವಾಹನಗಳು ಎರಡೂ ಬದಿಯಿಂದ ಓಡಾಡಿಕೊಂಡಿರುವ ಸಂಚಾರ ದಟ್ಟಣೆಯಿರುವ ಪುಟ್ಟದಾದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಎರಡೂ ಕೈಗಳಲ್ಲಿ ಭಾರದ ಮರದ ವಸ್ತುಗಳನ್ನು ಎತ್ತಿ ಹಿಡಿದುಕೊಂಡೇ ಸೈಕಲ್‌ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವಿದು. ಇದು ಯಾವ ಸರ್ಕಸ್‌ ಕಲಾವಿದರಿಗೂ ಕಮ್ಮಿಯಿಲ್ಲದಂತೆ ಬೀಳದಂತೆ ಹೋಗುತ್ತಿರುವುದನ್ನು, ಆತನ ಪಕ್ಕದಲ್ಲೇ ಸಂಚರಿಸುವ ವಾಹನವೊಂದರಿಂದ ಚಿತ್ರೀಕರಿಸಿರುವುದು ಕಂಡು ಬರುತ್ತದೆ.

ಈ ವಿಡಿಯೋಗೆ ಸಾಕಷ್ಟು ಮಂದಿಯಿಂದ ಮೆಚ್ಚುಗೆ ಕೇಳಿಬಂದಿದ್ದು, ಬಹುತೇಕ ಮಂದಿ ಈತ ಬ್ರೇಕ್‌ ಹಾಕಿ ಹೇಗೆ ನಿಲ್ಲಿಸಿಯಾನು ಎಂಬ ಬಗ್ಗೆ ಕುತೂಹಲ ವ್ಯಕ್ತ ಪಡಿಸಿದ್ದಾರೆ. ಆನೇಕರು ಈತನ ಸೈಕಲ್‌ ಚಲಾಯಿಸುವ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿಜಕ್ಕೂ ಈತನ ಕೌಶಲ್ಯ ಅತ್ಯದ್ಭುತ ಎಂದಿದ್ದಾರೆ.

ಈತನದ್ದು ಧೈರ್ಯಕ್ಕಿಂತಲೂ, ಹೀಗೆ ಸೈಕಲ್‌ ಚಲಾಯಿಸುತ್ತಾ ಬ್ಯಾಲೆನ್ಸ್‌ ಅಭ್ಯಾಸ ಮಾಡಿಕೊಂಡಿರುವುದರಿಂದ ಬಂದ ಕಲೆ ಇದು ಇದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಮಾತ್ರ, ʻಅನೇಕರು ಈತನ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈತ ತನ್ನ ನಿತ್ಯದ ಊಟಕ್ಕೆ ತನ್ನ ಜೀವ ಪಣಕ್ಕಿಟ್ಟು ಅಸುರಕ್ಷಿತವಾಗಿ ಕೆಲಸ ಮಾಡುವುದು ನಿಜಕ್ಕೂ ದುರದೃಷ್ಟಕರ ಎಂದಿದ್ದಾರೆ.

ಇದನ್ನೂ ಓದಿ | Viral Video | ಜತೆಯಾಗಿ, ಅತ್ಯಂತ ಅಪಾಯಕಾರಿಯಾಗಿ ಬುಲೆಟ್​​ ಬೈಕ್​​ನಲ್ಲಿ ಹೊರಟ ಸತಿ-ಪತಿ!

Exit mobile version