Site icon Vistara News

Viral Video | ಪಂಜರದಲ್ಲಿರುವ ಮನುಷ್ಯರನ್ನು ನೋಡಲು ಬಂದು ನಿಲ್ಲುವ ಕಾಡು ಪ್ರಾಣಿಗಳು !

Cage

ಕಾಡಿನಲ್ಲಿರಬೇಕಾದ ಪ್ರಾಣಿಗಳನ್ನು ಹಿಡಿದುಕೊಂಡು ಹೋಗಿ ಪ್ರಾಣಿ ಸಂಗ್ರಹಾಲಯದಲ್ಲಿ ಪಂಜರದಲ್ಲಿ ಇಡುವುದು, ಅವುಗಳನ್ನು ನೋಡಲೆಂದು ಪ್ರವಾಸಿಗರು ಝೂಗೆ ಬರುವುದು ಸಾಮಾನ್ಯ. ಕಾಡಿಗೆ ಹೋಗಿ ನೋಡಲಾಗದ ಹುಲಿ, ಚಿರತೆ, ಆನೆ, ಸಿಂಹ, ಕರಡಿಗಳಂಥ ಹತ್ತು-ಹಲವು ಬಗೆಯ ಪ್ರಾಣಿಗಳನ್ನು ಇಲ್ಲಿ ನೋಡಿ, ಮನುಷ್ಯರು ಖುಷಿ ಪಡುತ್ತಾರೆ.
ಝೂ ಗೆ ಹೋದಾಗ ಪ್ರಾಣಿಗಳು ಪಂಜರದೊಳಗೆ ಇರುತ್ತವೆ, ನಾವು ಮನುಷ್ಯರು ಹೊರಗೆ ನಿಲ್ಲುತ್ತೇವೆ. ಪಂಜರದ ಬಲವಾದ ಸರಳುಗಳೇ ಮನುಷ್ಯರಿಗೆ ರಕ್ಷೆ. ಆದರೆ ಇದೀಗ ಟ್ವಿಟರ್​​ನಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ವಿಚಿತ್ರವಾಗಿದೆ. ಅಲ್ಲಿ ಪ್ರಾಣಿಗಳೆಲ್ಲ ಕಾಡಿನಂಥ ಪ್ರದೇಶದಲ್ಲಿ ಅಡ್ಡಾಡಿಕೊಂಡಿದ್ದರೆ, ಮನುಷ್ಯರು ಒಂದು ಪಂಜರದಲ್ಲಿ ನಿಂತು, ಅವುಗಳನ್ನು ನೋಡುತ್ತಿದ್ದಾರೆ.

Tansu YEĞEN ಎಂಬುವರು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ‘ಇದೊಂದು ಮಾನವ ಸಂಗ್ರಹಾಲಯ (ಮನುಷ್ಯರ ಝೂ). ಪಂಜರಗಳಲ್ಲಿರುವ ಅಪಾಯಕಾರಿ ಮನುಷ್ಯರನ್ನು, ಪ್ರಾಣಿಗಳು ನೋಡುತ್ತಿವೆ’ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಮನುಷ್ಯರು ಇರುವ ಪಂಜರದ ಸುತ್ತ ಹುಲಿಗಳು ಸುತ್ತುವುದನ್ನು, ಪಂಜರದ ಮೇಲೆ ಹತ್ತಿ ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ಕ್ಲಿಪ್​​, ಚೀನಾದ ಚಾಂಗ್​ಕಿಂಗ್​ ನಗರದಲ್ಲಿರುವ ಲೆಹೆ ಲೆಡು ಮೃಗಾಲಯದಲ್ಲಿ ಚಿತ್ರೀಕರಿಸಿದ್ದು ಎಂದು ಹೇಳಲಾಗಿದೆ. ಇದು ವಿಭಿನ್ನ ಝೂ. ಇಲ್ಲಿ ಪ್ರಾಣಿಗಳನ್ನು ಸೆರೆಯಲ್ಲಿಡುವ ಬದಲು, ಪ್ರವಾಸಿಗರೇ ಪಂಜರದಲ್ಲಿ ನಿಂತು ವನ್ಯಜೀವಿಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಈ ಪಂಜರಗಳ ಬಳಿ ಮಾಂಸದ ತುಂಡು, ನೀರಿನ ಪಾಟ್​​ಗಳನ್ನು ಇಡಲಾಗಿದೆ. ಅವುಗಳ ಆಸೆಗೆ ಅಲ್ಲಿ ಪ್ರಾಣಿಗಳು ಸದಾ ಇರುತ್ತವೆ. ಹಾಗೇ ಪಂಜರದಲ್ಲೇ ಇದ್ದರೂ, ಎಚ್ಚರಿಕೆಯಿಂದ ಇರುವಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಪಂಜರದ ಸರಳುಗಳ ಮೇಲೆ ಕೈ ಇಡುವಂತಿಲ್ಲ, ಪಂಜರಕ್ಕೆ ದೇಹವನ್ನು ಒತ್ತಿಕೊಂಡು ನಿಲ್ಲುವಂತಿಲ್ಲ ಎಂಬ ಸೂಚನೆಯನ್ನು ಮುಂಚಿತವಾಗಿಯೇ ಕೊಡಲಾಗುತ್ತದೆ.

ಇದನ್ನೂ ಓದಿ: Viral Video | 30 ನಿಮಿಷದಲ್ಲಿ 21‌ ಪ್ಲೇಟ್ ಚೋಲೆ ಕುಲ್ಚೆ ತಿಂದ ತಿಂಡಿಪೋತನಿಗೆ ಸಿಕ್ಕ ಬಹುಮಾನ ಏನು?

Exit mobile version