Site icon Vistara News

Viral post | ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕೆಂದರೆ ಐಐಟಿ, ಐಐಎಂನಲ್ಲಿ ಓದಿರಬೇಕಾ?!

bangalore flats

ಬಾಡಿಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂಬುದು ಹುಡುಕಿದವರಿಗಷ್ಟೇ ಗೊತ್ತು. ʻಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡುʼ ಎಂಬುದು ಗಾದೆಗೀಗ, ʻಬೆಂಗಳೂರಲ್ಲಿ ಬಾಡಿಗೆ ಮನೆ ಹಿಡಿದು ನೋಡುʼ ಎಂದೂ ಸೇರಿಸಬೇಕಾದ ಕಾಲ ಬಂದಿದೆ. ಯಾಕೆಂದರೆ, ಇಲ್ಲಿ, ನಮಗೆ ಬೇಕಾದಂತೆ, ಒಂದು ಬಾಡಿಗೆ ಮನೆ, ಅಪಾರ್ಟ್‌ಮೆಂಟ್‌ ಸಿಗುವುದು ಅಷ್ಟು ಸುಲಭವಲ್ಲ. ಅದರಲ್ಲೂ ನಾವು ಕೆಲಸ ಮಾಡುವ ಏರಿಯಾದಲ್ಲೇ, ನಮಗೆ ಬೇಕಾದಂತಿರುವ ಮನೆಗಳನ್ನು ಹುಡುಕಿ, ಅವುಗಳಲ್ಲಿ ಕೆಲವನ್ನು ನೋಡಿ, ಆಮೇಲೆ, ಮನೆಯೊಡೆಯರು ಹಾಕುವ ನೂರೆಂಟು ಷರತ್ತುಗಳಿಗೂ ತಲೆಯಲ್ಲಾಡಿಸಿ, ಅವರ ಎಲ್ಲಾ ನಿಯಮಗಳಿಗೂ ಒಕೆ ಅಂದ ಮೇಲೆ, ನಮ್ಮ ಪೂರ್ವಾಪರಗಳನ್ನು ವಿಚಾರಿಸಿ ಒಕೆ ಆದ ಮೇಲೆ ಬಾಡಿಗೆ ಮನೆ ಗಿಟ್ಟಿಸಿಕೊಳ್ಳುವುದು ಎಂದರೆ ಅದೊಂದು ದೊಡ್ಡ ಅಶ್ವಮೇಧ ಯಾಗ ಮಾಡಿದಂತೆ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಬೆಂಗಳೂರಲ್ಲಿ ಕೆಲಸ ಬೇಕಾದರೂ ಬೇಗ ಸಿಗಬಹುದು ಆದರೆ, ಬಾಡಿಗೆ ಮನೆಯ ಓನರ್‌ ಷರತ್ತುಗಳಿಂದ ಪಾಸ್‌ ಆಗಿ ಮನೆ ಗಿಟ್ಟಿಸಿಕೊಳ್ಳುವುದು ಚಾಲೆಂಜೇ ಸರಿ ಎಂದು ಸಿಂಗಲ್‌ ಸ್ಟೇಟಸ್ಸಿನಲ್ಲಿರುವವರ ನಡುವೆ ಚಾಲ್ತಿಯಲ್ಲಿರುವ ಮಾತು.

ಇಂಥದ್ದೊಂದು ವಿಚಾರದಲ್ಲಿ, ಹಲವರನ್ನು ಆಶ್ಚರ್ಯಗೊಳಿಸುವ ಇನ್ನೂ ಒಂದು ಷರತ್ತು ಸೇರಿಕೊಂಡಿದೆ. ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ, ಬೆಂಗಳೂರಿನಲ್ಲಿ ಫ್ಲ್ಯಾಟ್‌ ಓನರುಗಳಿಗೆ ಬಾಡಿಗೆದಾರರು ಪ್ರತಿಷ್ಠಿತ ಐಐಟಿ, ಐಐಎಂ, ಐಎಸ್‌ಬಿಗಳಲ್ಲಿ ಪದವೀಧರರನ್ನೂ ಬಯಸುತ್ತಾರೆ ಎಂಬ ಶಾಕಿಂಗ್‌ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳೂ ನಡೆಯುತ್ತಿವೆ.

ಪ್ರಿಯಾಂಶ್‌ ಜೈನ್‌ ಎಂಬ ವ್ಯಕ್ತಿಯೊಬ್ಬರು ಜಾಲತಾಣದಲ್ಲಿ, ʻಬೆಂಗಳೂರಿನ ಫ್ಲ್ಯಾಟು ಓನರುಗಳೇ, ಯಾಕೆ ಹೀಗೆ ಮಾಡುತ್ತೀರಿ? ಎಂಬ ಪ್ರಶ್ನೆಯನ್ನು ಹಾಕಿ ಪೋಸ್ಟ್‌ ಮಾಡಿದ್ದಾರೆ. ಆತನಿಗಾದ ಅನುಭವದ ಪ್ರಕಾರ, ಮನೆಯೊಂದರ ಓನರ್‌ ಆತನ ವೃತ್ತಿ ಹಾಗೂ ಶಿಕ್ಷಣ ವಿವರಗಳನ್ನು ತಿಳಿಯಲು ಆತನ ಲಿಂಕ್ಡ್‌ ಇನ್‌ ಪ್ರೊಫೈಲನ್ನು ಕೇಳಿದ್ದು ಅದನ್ನು ನೋಡಿದ ಬಳಿಕ ರಿಜೆಕ್ಟ್‌ ಮಾಡಲಾಗಿದೆ. “ನಾನು, ಸಸ್ಯಾಹಾರಿಯಾಗಿದ್ದು, ಪ್ರಮುಖ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಸಂಬಳ ಪಡೆಯುತ್ತಿದ್ದೇನೆ. ಹೀಗಾಗಿ ನಾನು ಲಿಂಕ್ಡ್‌ ಇನ್‌ ಪ್ರೊಫೈಲನ್ನು ಆವರಿಗೆ ನೀಡಿದ ಬಳಿಕವೂ ರಿಜೆಕ್ಟ್‌ ಆಗಿದ್ದು ಯಾಕೆಂದು ಗೊತ್ತಾಗಲಿಲ್ಲ. ಆದರೆ ಕೊನೆಗೆ ಕಾರಣ ಕೇಳಿದ ಮೇಲೆ ಬ್ರೋಕರ್‌, ಮನೆಯ ಓನರ್‌ ನೀವು ಯಾವ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದೀರಿ ಎಂದು ಕೇಳಿದರು. ನಾನು ವೆಲ್ಲೂರಿನ ವಿಐಟಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಓದಿರುವುದಾಗಿ ಹೇಳಿದ್ದೆ. ಆಗ ಬ್ರೋಕರ್, ʻಕ್ಷಮಿಸಿ, ಇದೇ ಕಾರಣಕ್ಕೆ ಈ ಫ್ಲ್ಯಾಟು ನಿಮಗೆ ಬಾಡಿಗೆಗೆ ಕೊಡಲಾಗುವುದಿಲ್ಲ. ನಿಮ್ಮ ಪ್ರೊಫೈಲ್‌ ಈ ಬಾಡಿಗೆ ಮನೆಗೆ ಫಿಟ್‌ ಆಗುತ್ತಿಲ್ಲʼ ಎಂದರು. ನನಗೆ ಆಶ್ಚರ್ಯವಾಯಿತು. ಯಾಕೆಂದರೆ ಅವರಿಗೆ ಐಐಟಿ, ಐಐಎಂನಲ್ಲಿ ಓದಿದ ಮಂದಿಯೇ ಬಾಡಿಗೆಗೆ ಬೇಕಾಗಿತ್ತಂತೆ!” ಎಂದು ವಿವರಿಸಿದ್ದಾರೆ.

ಇದನ್ನೂ ಓದಿ | Love Marriage | ಹಂಪಿಯ ಆಟೋ ಚಾಲಕನ ಒಳ್ಳೆಯತನಕ್ಕೆ ಒಲಿದ ವಿದೇಶಿ ಕನ್ಯೆ: ಇಬ್ಬರೂ ನಡೆದರು ಸಪ್ತಪದಿ

ಇದಕ್ಕೆ ಹಲವಾರು ಮಂದಿ ಕಾಮೆಂಟ್‌ ಮಾಡಿದ್ದು, ಒಬ್ಬರು, ʻಇದರಲ್ಲೇನೂ ಆಶ್ಚರ್ಯವಿಲ್ಲ. ನಾನು ಸದ್ಯಕ್ಕಂತೂ ಓನರ್‌ಗಳ ಇಂಟರ್ವೂಗೆ ತಯಾರಿ ನಡೆಸುತ್ತಿದ್ದೇನೆ. ಹೇಗೆ ತಯಾರಿ ನಡೆಸಬೇಕು, ಕೆಲವು ಟಿಪ್ಸ್‌ ಹೇಳಿʼ ಎಂದು ನಗೆಯಾಡಿದ್ದಾರೆ.

ಇನ್ನೊಬ್ಬರು, ʻನಾನು ಲಿಂಕ್ಡ್‌ ಇನ್‌ ಪ್ರೊಫೈಲ್‌ ಅಪ್‌ಡೇಟ್‌ ಮಾಡಿದ ನಂತರ ಮನೆಯೇ ಸಿಗುತ್ತಿಲ್ಲ. ನಿಮಗೆ ಆದ ಅನುಭವವೇನೂ ವಿಶೇಷವಲ್ಲ ಬಿಡಿʼ ಎಂದು ಹೇಳುವ ಮೂಲಕ, ನಿಮ್ಮ ಅನುಭವವವೇ ನಮ್ಮದೂ ಕೂಡಾʼ ಎಂದು ಹಲವರು ಹೇಳಿದ್ದಾರೆ.

ಇನ್ನೊಬ್ಬರು, ʻಇನ್ನು ಮುಂದೆ ಲ್ಯಾಂಡ್‌ಲಾರ್ಡ್‌ಗಳಿಗಾಗಿಯೇ ಪ್ರತ್ಯೇಕ ಲಿಂಕ್‌ಡ್‌ ಇನ್‌ ಪ್ರೊಫೈಲ್‌ ಕ್ರಿಯೇಟ್‌ ಮಾಡಬೇಕಾದೀತೇನೋʼ ಎಂದಿದ್ದಾರೆ!

ಇದನ್ನೂ ಓದಿ | Viral post | ಬೆಂಗಳೂರಿನ ಈ ಆಟೋನಲ್ಲಿ ಪಯಣಿಸುವ ಮಂದಿಗೆ ತಿನಿಸು, ಫಸ್ಟ್‌ಏಡ್‌ ಸೇವೆ!

Exit mobile version