ಡೆಹ್ರಾಡೂನ್: ನಮ್ಮ ದೇಶದಲ್ಲಿ ಮದುವೆ ಆಚರಣೆಗಳು ತುಸು ವಿಶೇಷತೆ ಪಡೆದುಕೊಂಡಿವೆ. ಅಂದು ವಧು-ವರರು ತೊಡುವ ಉಡುಪುಗಳು, ತಯಾರಾಗುವ ತಿಂಡಿ-ತಿನಿಸುಗಳು, ಊಟಗಳೆಲ್ಲ ಭರ್ಜರಿಯಾಗಿಯೇ ಇರುತ್ತವೆ. ಮದುವೆ ಎಂಬುದು ವಿಶೇಷ ಕ್ಷಣವಾಗಿರುವುದರಿಂದ ಅದು ಅದ್ಧೂರಿಯಾಗಿರಲಿ ಎಂದೇ ಎಲ್ಲರೂ ಬಯಸುತ್ತಾರೆ. ಆದರೆ ಮದುವೆ ಎಂಬುದು ಪ್ರತಿಷ್ಠೆ, ಘನೆತೆಗೆ ಸಂಬಂಧಪಟ್ಟ ವಿಷಯವೂ ಹೌದು. ಕೈಯಲ್ಲಿ ಇರಲಿ, ಬಿಡಲಿ ಮನೆ ಮಗಳ/ಮಗನ ಮದುವೆ ಮಾಡುವಾಗ ಏನೂ ಕೊರತೆಯಾಗಬಾರದು, ಬಂಧುಗಳು, ನೆರೆಹೊರೆಯವರು ಆಡಿಕೊಳ್ಳಬಾರದು ಎಂಬ, ಸಂಪ್ರದಾಯಕ್ಕೂ ಹೊರತಾದ ವಿಚಾರಗಳು ಅನಾದಿಕಾಲದಿಂದಲೂ ಇದ್ದು, ಈಗೀಗ ಅವು ಮತ್ತಷ್ಟು ಬಲಗೊಂಡಿವೆ. ಅದಕ್ಕೆ ಸಾಕ್ಷಿ ಈ ವಧು.
ಮೊದಲೆಲ್ಲ ಹೆಣ್ಣಿನ ಕಡೆಯವರು, ಗಂಡಿನ ಕಡೆಯವರಿಗೆ ತಗ್ಗಿಬಗ್ಗಿ ನಡೆಯುತ್ತಿದ್ದರು. ವಧುವಿನ ಕಡೆಯವರು ಮದುವೆ ಸಿದ್ಧತೆಯಲ್ಲಿ ಎಡವಿದರೆ, ಗಂಡಿನ ಕಡೆಯವರು ದೂಷಣೆ ಮಾಡುವುದು ಇದ್ದೇ ಇರುತ್ತಿತ್ತು. ಕೆಲವು ಮದುವೆಗಳು ಇದೇ ಕಾರಣಕ್ಕೆ ಮುರಿದುಬಿದ್ದಿದ್ದೂ ಇದೆ. ಆದರೆ ಈಗಿಲ್ಲಿ ಈ ಮದುವೆಗೆ ವಿಲನ್ ಆಗಿದ್ದು ವಧು. ವಿವಾಹ ಮುರಿದುಬಿದ್ದಿದ್ದೂ ವಧುವಿನಿಂದಲೇ. ಅದೂ ವರನ ಕಡೆಯವರು ತನಗೆ ಕಳಿಸಿದ ಲೆಹೆಂಗಾ ಚೆನ್ನಾಗಿಲ್ಲ, ಅದು ಕಡಿಮೆ ಬೆಲೆಯದ್ದು ಎಂಬ ಕಾರಣಕ್ಕೆ ಮದುಮಗಳು ಮದುವೆಯನ್ನು ನಿರಾಕರಿಸಿದ್ದಾಳೆ.
ಉತ್ತರಾಖಂಡ್ನ ಹಾಲ್ದ್ವಾನಿಯಲ್ಲಿ ನವೆಂಬರ್ 5ರಂದು ಮದುವೆ ನಡೆಯಬೇಕಿತ್ತು. ಹಾಲ್ದ್ವಾನಿಯ ಹುಡುಗಿಗೂ, ಅಲ್ಮೋರಾದ ಹುಡುಗನಿಗೂ, ಇದೇ ವರ್ಷ ಜೂನ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆದು, ನವೆಂಬರ್ 5ಕ್ಕೆ ವಿವಾಹ ಮಾಡುವುದೆಂದು ನಿಶ್ಚಿತವಾಗಿತ್ತು. ಎಲ್ಲ ಸಿದ್ಧತೆಗೂ ಅದ್ಧೂರಿಯಾಗಿ ನಡೆದಿದ್ದವು. ಆದರೆ ನವೆಂಬರ್ 4ರಂದು ಯುವತಿ ಮದುವೆ ಮುರಿದುಕೊಂಡಿದ್ದಾಳೆ. ಆಗಿದ್ದಿಷ್ಟೇ, ಅವರ ಸಂಪ್ರದಾಯದ ಪ್ರಕಾರ ಮದುವೆ ದಿನ ವಧು ತೊಡಲು ವರನ ಕಡೆಯವರು ಲೆಹೆಂಗಾ ಕೊಡಬೇಕಿತ್ತು. ವರನ ತಂದೆ 10 ಸಾವಿರ ರೂ. ಬೆಲೆಯ ಲೆಹೆಂಗಾವನ್ನು ತನ್ನ ಬಾವಿ ಸೊಸೆಗೆ ಕಳಿಸಿದ್ದರು. ಆದರೆ ಅದನ್ನು ನೋಡುತ್ತಿದ್ದಂತೆ ವಧು ಸಿಟ್ಟಾಗಿದ್ದಾಳೆ. ಇದು ಅತ್ಯಂತ ಕಳಪೆ ಗುಣಮಟ್ಟ ಹೊಂದಿದೆ. ಇಷ್ಟು ಕಡಿಮೆ ಬೆಲೆಯ ಉಡುಪು ಧರಿಸಿ ಮದುವೆಯಾಗಬೇಕೇ? ಇದು ನನಗೆ ಅವಮಾನ ಎಂದು ಹೇಳಿದ್ದಲ್ಲದೆ, ಮದುವೆ ಬೇಡವೇ ಬೇಡ ಎಂದಿದ್ದಾಳೆ.
ಹುಡುಗಿ ಮದುವೆ ಬೇಡ ಎನ್ನುತ್ತಿದ್ದಂತೆ ವರನ ಕಡೆಯವರು ಸಿಟ್ಟಾಗಿದ್ದಾರೆ. ಎರಡೂ ಕುಟುಂಬಗಳ ಮಧ್ಯೆ ಮಾತಿಗೆ ಮಾತು ಬೆಳೆದು, ಪ್ರಕರಣ ಕೊಟ್ವಾಲಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕೊನೆಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ, ಎರಡೂ ಕುಟುಂಬಗಳು ರಾಜಿ ಮಾಡಿಕೊಂಡಿವೆ. ಆದರೆ ಮದುವೆ ನಡೆದಿಲ್ಲ.
ಇದನ್ನೂ ಓದಿ: Wedding Fashion | ಮದುವೆ ಸೀಸನ್‌ಗೆ ಎಂಟ್ರಿ ಕೊಟ್ಟ ಡಿಸೈನರ್ ಬ್ಯಾಂಗಲ್ಸ್ ಸೆಟ್