ಮಹಿಳೆಯರು ತಮ್ಮ ಪೀರಿಯಡ್ ಸಮಯದಲ್ಲಿ ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಯಲು ಕೆಂಪು ಡಾಟ್ ಸ್ಟಿಕ್ಕರ್ ಧರಿಸಬೇಕೆಂಬ ಹೊಸ ನೀತಿಸಂಹಿತೆ ಶುರು ಮಾಡುವ ಐಡಿಯಾ ಹೇಳುವ ಮೂಲಕ ಇಲ್ಲೊಬ್ಬ ಎಲ್ಲ ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ!
ಆಂಥೋನಿ ಎಂಬ ಹೆಸರಿನ ಆಸ್ಟ್ರೇಲಿಯನ್ ಕೆಫೆ ಮುಖ್ಯಸ್ಥರೊಬ್ಬರು ಆಸ್ಟ್ರೇಲಿಯಾದ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಾ ಈ ಹೊಸ ಐಡಿಯಾವನ್ನು ನಾಡಿನೆಲ್ಲೆಡೆ ಬಿತ್ತರಿಸಿದ್ದಾರೆ. ಆತನ ಈ ಹೊಸ ಐಡಿಯಾ ಕೇಳಿ, ರೇಡಿಯೋ ಜಾಕಿ ಕೂಡಾ ದಂಗಾಗಿದ್ದಾರೆ. ʻಮಹಿಳೆ ಆಫೀಸಿಗೆ ಎಲ್ಲರಿಗೂ ತಿಳಿಯುವಂತೆ ರೆಡ್ ಡಾಟ್ ಸ್ಟಿಕ್ಕರ್ ಧರಿಸಿಕೊಂಡು ಬರುವುದಾ?ʼ ಎಂದು ಮರುಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಆತ, ತನ್ನ ಈ ಹೊಸ ಐಡಿಯಾದ ಹಿಂದೆ ಒಳ್ಳೆಯ ಉದ್ದೇಶ ಇದೆ ಎಂದು ವಿವರಿಸಿದ್ದಾನೆ. ಆದರೂ, ಈ ಐಡಿಯಾ ಮಾತ್ರ ಎಲ್ಲರಿಗೂ ಶಾಕ್ ಕೊಟ್ಟಿದ್ದು, ಇದು ತುಂಬ ಅಮಾನವೀಯವಾಗಿದೆ ಎಂದು ಮಹಿಳೆಯರೂ, ಪುರುಷರೂ ಕಿಡಿ ಕಾರಿದ್ದಾರೆ. ಆದರೆ, ಆತ ಮಾತ್ರ ತಾನು ಮಾನವೀಯ ಕಾಳಜಿಯಿಂದ ಈ ಐಡಿಯಾ ಹೇಳಿದ್ದೇನೆ ಎಂದಿದ್ದಾನೆ!
ಆತ ತನ್ನ ಐಡಿಯಾದ ಬಗೆಗೆ ವಿವರಿಸುವುದು ಹೀಗೆ. “ನೋಡಿ, ಇತ್ತೀಚೆಗೆ ನಮ್ಮ ಮಹಿಳಾ ಉದ್ಯೋಗಿಗಳಿಬ್ಬರ ಜೊತೆ ನಮ್ಮ ಗ್ರಾಹಕರೆದುರೇ ಮಾತಿನ ಚಕಮಕಿಯಂತಹ ಘಟನೆಯೊಂದು ನಡೆಯಿತು. ಆಮೇಲೆ ಅವರು, ತಾವು ತಮ್ಮ ಮುಟ್ಟಿನ ದಿನದಲ್ಲಿದ್ದುದರಿಂದ ಮಾನಸಿಕವಾಗಿ ಒತ್ತಡದಲ್ಲಿದ್ದೆವು ಎಂದು ತಮ್ಮ ತೊಂದರೆಯನ್ನು ಆಮೇಲೆ ವಿವರಿಸಿದರು. ಆದರೆ, ಮೊದಲು ಈ ವಿಚಾರ ನಮಗೆ ಗೊತ್ತಿರಲಿಲ್ಲ. ಆಗ ನನಗೆ, ಇಂಥದ್ದೊಂದು ಹೊಸ ನಿಯಮ ಮಾಡಿದರೆ ಒಳ್ಳೆಯದೆಂದು ಅನಿಸಿತು. ಎಲ್ಲರೂ ಮಹಿಳೆಯರ ಆ ದಿನಗಳ ಕಷ್ಟ ಅರಿತುಕೊಂಡು ಹೊಂದಿಕೊಂಡು ಹೋಗುತ್ತಾರೆ ಅಲ್ಲವೇ?” ಎಂದಿದ್ದಾರೆ.
ಇದನ್ನೂ ಓದಿ: Happy married life | ಸುಖೀ ಸಂಸಾರದ ಸೀಕ್ರೆಟ್ ಅಂದ್ರೆ ಪ್ರತ್ಯೇಕ ಬೆಡ್‌ರೂಂ!
ಋತುಚಕ್ರದ ಸಮಯದಲ್ಲಿ ಪ್ರತಿ ಮಹಿಳೆಯೂ ಮಾನಸಿಕವಾಗಿ, ದೈಹಿಕವಾಗಿ ಪ್ರಕೃತಿ ಸಹಜವಾಗಿ ಕೆಲವು ತೊಂದರೆಗಳಿಗೆ ಒಳಗಾಗುತ್ತಾಳೆಂಬುದು ಎಲ್ಲರಿಗೂ ತಿಳಿದ ವಿಚಾರವೇ. ಹಾರ್ಮೋನಿನ ವೈಪರೀತ್ಯದಿಂದ ಕೆಲವರು ದೈಹಿಕವಾಗಿಯೂ, ಮಾನಸಿಕವಾಗಿಯೂ ಆ ದಿನಗಳಲ್ಲಿ ಕಷ್ಟ ಅನುಭವಿಸುತ್ತಾರೆ. ಆದರೆ, ಯಾವುದೇ ಮಹಿಳೆ ತನ್ನ ತಿಂಗಳ ಮಾಸಿಕ ತೊಂದರೆಯನ್ನು ಪ್ರಪಂಚದ ಮುಂದೆ ಜಗಜ್ಜಾಹೀರುಗೊಳಿಸಲು ಇಷ್ಟಪಡುವುದಿಲ್ಲ. ಇಂದು ಆಕೆಯ ಸಮಸ್ಯೆಗಳನ್ನು ಸರಳಗೊಳಿಸಲು ಸಾಕಷ್ಟು ಸುಲಭೋಪಾಯಗಳು ಬಂದರೂ, ಆಕೆಯನ್ನು ಸಹಜವಾಗಿರಿಸಲು ಸಹಾಯ ಮಾಡುತ್ತವಾದರೂ ನೋವು, ಮಾನಸಿಕವಾಗಿ ಕಿರಿಕಿಯಂತಹ ಕಷ್ಟಗಳನ್ನು ಆಕೆ ಎಲ್ಲರೊಂದಿಗೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನೋವಿದ್ದರೂ, ಆ ದಿನಗಳಲ್ಲಿ ಅದನ್ನು ತೋರಗೊಡದೆ, ಔದ್ಯೋಗಿಕವಾಗಿಯೂ, ಎಲ್ಲ ಸ್ತರದಲ್ಲೂ ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಾಳೆ. ಆದರೆ, ಇಂತಹ ನಿಯಮ ಹೇರಿದರೆ ಅದರಿಂದ ಸಮಸ್ಯೆ ಪರಿಹಾರವಾಗುವುದಕ್ಕಿಂತ ಆಕೆಯನ್ನು ಎಂತಹ ಮುಜುಗರಕ್ಕೆ ತಳ್ಳುತ್ತಿದೀರಿ ನೀವು ಎಂದು ಯೋಚಿಸಿದ್ದೀರಾ?ʼ ಎಂದು ಹಲವರು ಮರುಪ್ರಶ್ನೆ ಹಾಕಿದ್ದಾರೆ.
ಆದರೆ, ಆಂಥೋನಿಯ ವಾದ ಏನೆಂದರೆ, “ವಾಹನ ಚಲಾಯಿಸುವುದು ಹೇಗೆಂದು ಸರಿಯಾಗಿ ಅಭ್ಯಾಸ ಆಗುವ ಮೊದಲು ಎಲ್ಲರೂ ಎಲ್ ಬೋರ್ಡ್ ತಮ್ಮ ತಮ್ಮ ವಾಹನದಲ್ಲಿ ಅಂಟಿಸುವುದಿಲ್ಲವೇ? ಯಾಕೆ ಅಂಟಿಸುತ್ತೇವೆ ಹೇಳಿ? ಹತ್ತಿರದಲ್ಲಿರುವವರ ಸುರಕ್ಷತೆಗಾಗಿ ತಾನೇ? ಹತ್ತಿರದಲ್ಲಿರುವವರು ಸ್ವಲ್ಪ ಜಾಗ ಕೊಟ್ಟು, ಅರ್ಥ ಮಾಡಿಕೊಂಡು ಚಲಾಯಿಸಲಿ ಎಂದು ತಾನೆ? ಹಾಗೆಯೇ ಇದೂ ಕೂಡಾ. ಮುಟ್ಟಾದ ಮಹಿಳೆ ರೆಡ್ ಡಾಟ್ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡಿಕೊಂಡಿದ್ದರೆ, ಆಕೆಯ ಜೊತೆಗೆ ವ್ಯವಹರಿಸುವವರು ಸ್ವಲ್ಪ ಯೋಚನೆ ಮಾಡಿಕೊಂಡು ಆಕೆಗೆ ಮಾನಸಿಕವಾಗಿ ಬೇಸರವಾಗದಂತೆ, ಆಕೆಗೆ ಸಹಾಯವಾಗುವಂತೆ ನಡೆದುಕೊಳ್ಳಬಹುದು ಅಲ್ಲವೇ? ಇದು ಮಹಿಳೆಯ ಸುರಕ್ಷತೆಯ ದೃಷ್ಟಿಯಿಂದ” ಎಂದು ತನ್ನ ವಾದ ಮಂಡಿಸಿದ್ದಾರೆ! ಈತನ ಉದಾಹರಣೆಯನ್ನು ಕೇಳಿ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದು, ಇದೊಂದು ಕೆಟ್ಟ ಐಡಿಯಾವೆಂದು ನೇರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video | ಕೊಲೆ ಕೇಸ್ ಭೇದಿಸಲು ಅಧ್ಯಾತ್ಮ ಗುರುವಿನ ಸಹಾಯ ಕೇಳಿದ ಪೊಲೀಸ್ ಅಧಿಕಾರಿ, ಮುಂದೇನಾಯಿತು?