Site icon Vistara News

ಪತ್ರಿಕೆಯಲ್ಲಿ ಒಂದಿಡೀ ಪುಟದ ಜಾಹೀರಾತು ಹಾಕಿ ಮಾಜಿ ಸಂಗಾತಿಗೆ ಬಿಸಿ ಮುಟ್ಟಿಸಿದ ಮಹಿಳೆ!

ad

ಇಲ್ಲೊಬ್ಬ ಮಹಿಳೆ ತನ್ನನ್ನು ಬಿಟ್ಟುಹೋದ ಗಂಡನಿಗೆ ವಿನೂತನ ಮಾದರಿಯಲ್ಲಿ ಟಾಂಗ್‌ ಕೊಟ್ಟಿದ್ದಾಳೆ. ಇಡೀ ಪತ್ರಿಕೆಯ ಒಂದಿಡೀ ಪುಟವನ್ನು ಜಾಹಿರಾತಿಗೆ ಖರೀದಿಸಿಕೊಂಡಿದ್ದು, ಅದರಲ್ಲಿ ತನಗೆ ಹೇಳಬೇಕಾದ್ದನ್ನು ದೊಡ್ಡ ಅಕ್ಷರಗಳಲ್ಲಿ ಅಚ್ಚು ಹಾಕಿಸಿದ್ದಾಳೆ!

ಈಕೆಯ ಹೊಸ ಸಾಹಸಕ್ಕೆ, ಕ್ರಿಯೇಟಿವ್‌ ಯೋಚನೆಗೆ ಹಾಗೂ ತಲುಪಬೇಕಾದ್ದನ್ನು ವೃತ್ತಿಪರತೆಯಿಂದ ತಲುಪಿಸಿದ ಮಾದರಿಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಫಿದಾ ಆಗಿದ್ದಾರೆ. ಇದಪ್ಪಾ ವರಸೆ ಎಂದು ಆಕೆಯನ್ನು ಕೊಂಡಾಡಿದ್ದಾರೆ.

“ಪ್ರೀತಿಯ ಸ್ಟೀವ್‌, ನೀನು ಆಕೆಯೊಂದಿಗೆ ಸಂತೋಷವಾಗಿದ್ದಿ ಅಂದುಕೊಳ್ಳುವೆ. ಆದರೆ, ಈಗ ಇಡೀ ಈ ಊರಿಗೆ ಊರೇ ನೀನೊಬ್ಬ ಎಂಥಾ ಹೊಲಸು ಮೋಸಗಾರ ಎಂಬುದು ತಿಳಿಯಲಿದೆ!- ಜೆನ್ನಿ” ಎಂದು ದಪ್ಪ ಅಕ್ಷರಗಳಲ್ಲಿ ಒಂದಿಡೀ ಪುಟದಲ್ಲಿ ಜಾಹಿರಾತು ಹಾಕಿಸಿದ್ದಾಳೆ.

ಈ ಜಾಹಿರಾತು ಆಸ್ಟ್ರೇಲಿಯಾದ ಪತ್ರಿಕೆ ʻಮಕೇ ಅಂಡ್‌ ವಿಟ್‌ಸಂಡೇ ಲೈಫ್‌ʼನಲ್ಲಿ ಪ್ರಕಟವಾಗಿದ್ದು, ಇದರಲ್ಲಿ ಆಕೆ, ನಾನು ಈ ಜಾಹಿರಾತನ್ನು ನಿನ್ನ ಕ್ರೆಡಿಟ್‌ ಕಾರ್ಡ್‌ ಬಳಸಿಯೇ ಖರೀದಿಸಿದ್ದೇನೆ ಎಂಬ ವಿಷಯ ಸೂಚನೆಯನ್ನೂ ಕೊನೆಯಲ್ಲಿ ಸೇರಿಸಿದ್ದಾಳೆ. ಪತ್ರಿಕೆಯ ಓದುಗರು ನಾಲ್ಕನೇ ಪುಟ ಬಿಡಿಸುವಾಗಲೇ ಗಮನ ಸೆಳೆದ ಈ ವಿಚಿತ್ರ ಜಾಹಿರಾತನ್ನು ನೋಡಿ ದಂಗಾಗಿದ್ದಾರೆ. ಪೂರ್ತಿ ಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆದ ಈ ನಾಲ್ಕೈದು ಸಾಲು ಸಹಜವಾಗಿಯೇ ಎಲ್ಲ ಓದುಗರ ಗಮನ ಸೆಳೆದಿದ್ದು, ಇಂಥದ್ದೊಂದು ಜಾಹಿರಾತನ್ನು ಇದುವರೆಗೆ ನೋಡಿಯೇ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ!

ಇದನ್ನೂ ಓದಿ: Video | ಕೇಂದ್ರ ಸಚಿವ ಕಿರಣ್​ ರಿಜಿಜು ಎದುರು ಕುಳಿತು ಐಸಾ ದೇಶ್​ ಹೈ ಮೇರಾ ಹಾಡಿದ ಉದಿತ್​ ನಾರಾಯಣ್​

ಈಕೆ ಬಹುಶಃ ತನ್ನ ಸಂಗಾತಿ ತನಗೆ ಮಾಡಿದ ಅನ್ಯಾಯವನ್ನು ಸುಮ್ಮನೆ ಬಿಟ್ಟಿಲ್ಲ. ಆದರೆ, ಬೀದಿ ರಂಪವವಾಗಿಯೂ ಬದಲಾಯಿಸಿಲ್ಲ. ಆದರೆ ತನಗಾದ ನೋವನ್ನು ಸ್ಪಷ್ಟವಾಗಿ ಯಾವ ಮುಜುಗರವೂ ಇಲ್ಲದೆ ವೃತ್ತಿಪರತೆಯಿಂದ ದಾಟಿಸಿಯೂ ಬಿಟ್ಟಿದ್ದಾಳೆ! ಎಲ್ಲರೂ ಈಕೆಯ ಬುದ್ಧಿಮತ್ತೆಯನ್ನು ಕೊಂಡಾಡುತ್ತಿದ್ದಾರೆ. ಸಹಜವಾಗಿಯೇ ಸ್ಟೀವ್‌ ಯಾರು ಜೆನ್ನಿ ಯಾರು ಎಂದು ತಿಳಿಯದೆ ಈ ಇಬ್ಬರು ಪಾತ್ರಧಾರಿಗಳ ಮೇಲೆ ಕುತೂಹಲ ಮೂಡಿ, ಪತ್ರಿಕೆಗೆ ಹಲವಾರು ಓದುಗರು ಪ್ರಶ್ನೆ ಕೇಳುತ್ತಿದ್ದಾರಂತೆ. ಇಂಥ ಜಾಹಿರಾತು ಹಾಕಿದವರನ್ನೊಮ್ಮೆ ನಮಗೆ ಕಣ್ತುಂಬಿಕೊಳ್ಳಬೇಕು ಎಂದೂ ಹೇಳುತ್ತಿದ್ದಾರಂತೆ. ಅನೇಕರು, ಇದರ ಹಿಂದಿನ ಕಥೆ ಏನು ಎಂದು ತಿಳಿದುಕೊಳ್ಳಲು ಕಾತುರರಾಗಿದ್ದಾರೆ.

ಈ ಬಗ್ಗೆ ಇದೀಗ ಪತ್ರಿಕೆಯೇ ತನ್ನ ಸಾಮಾಜಿಕ ಜಾಲತಾಣದ ಅಕೌಂಟ್‌ನಲ್ಲಿ ಸ್ಪಷ್ಟನೆ ನೀಡಿದ್ದು, ʻಈ ಜಾಹಿರಾತು ಪ್ರಕಟವಾದಂದಿನಿಂದ ನಮಗೆ ಓದುಗರಿಂದ ವಿಪರೀತ ಪ್ರಶ್ನೆಗಳು ಬರುತ್ತಿವೆ. ಸ್ಟೀವ್‌ ಯಾರು? ಜೆನ್ನಿ ಯಾರು? ಎಂದು ಎಲ್ಲರೂ ಕೇಳುತ್ತಿದ್ದಾರೆ. ಆದರೆ, ನಮಗೆ ಈ ಸ್ಟೀವ್‌ ಬಗ್ಗೆ ಏನೇನೂ ತಿಳಿದಿಲ್ಲ. ಈ ಜಾಹಿರಾತಿನಲ್ಲಿ ಆಕೆ ಬರೆದುಕೊಂಡಿದ್ದು ನೋಡಿದರೆ ಬಹುಶಃ ಸ್ಟೀವ್‌ ಬಹಳ ಬಹಳ ಕೆಟ್ಟವನಿರಬಹುದು ಅನಿಸುತ್ತಿದೆ. ಜೊತೆಗೆ ಈ ಜೆನ್ನಿ ಯಾರು ಎಂಬ ವಿಚಾರವನ್ನು ನಾವು ಬಹಿರಂಗಗೊಳಿಸುವ ಹಾಗಿಲ್ಲʼ ಎಂದು ಸ್ಪಷ್ಟಪಡಿಸಿದೆ.

ಇದಕ್ಕೆ ನೂರಾರು ಓದುಗರಿಂದ ಪ್ರತಿಕ್ರಿಯೆಗಳು ಬಂದಿದು, ಹಲವರು, ತಮಾಷೆಗಾಗಿ ಸ್ಟೀವ್‌ ಹೆಸರಿನ ತಮ್ಮ ಗೆಳೆಯರನ್ನು ಟ್ಯಾಗ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು, ಈ ಜೆನ್ನಿಯನ್ನು ಮೊದಲು ನಾವು ಫ್ರೆಂಡ್‌ ಮಾಡಿಕೊಳ್ಳಬೇಕು ಎಂದು ಕಮೆಂಟ್‌ ಮಾಡಿದರೆ, ಇನ್ನೂ ಕೆಲವರು, ಜೆನ್ನಿ ಈಗ ನಮ್ಮ ನಿಜವಾದ ಹೀರೋಯಿನ್!‌ ಎಂದಿದ್ದಾರೆ. ʻಇದೊಂದು ಅದ್ಭುತವಾದ ಜಾಹಿರಾತು, ಹೇ ಜೆನ್ನಿ, ನಿನಗಿದೋ ಹಗ್ಸ್‌ʼ ಎಂದೂ ಕೆಲವರು ಕಮೆಂಟಿಸಿ ಆಕೆಯ ನಡೆಯನ್ನು ಮೆಚ್ಚಿದ್ದಾರೆ. ಇನ್ನೂ ಕೆಲವರಂತೂ, ʻಇಂಥದ್ದೊಂದು ಅದ್ಭುತ ಜಾಹಿರಾತಿಗೆ ಪತ್ರಿಕೆ ದುಡ್ಡು ತೆಗೆದುಕೊಳ್ಳಬಾರದಿತ್ತುʼ ಎಂದೂ ಹೇಳಿದ್ದಾರೆ. ಒಟ್ಟಾರೆಯಾಗಿ, ಈ ಜಾಹಿರಾತು ಸದ್ಯಕ್ಕೀಗ ಪತ್ರಿಕೆಗೂ ಜಾಹಿರಾತಾಗಿ ಕೆಲಸ ಮಾಡಿದ್ದು, ಎಲ್ಲರ ಕಣ್ಣು ಪತ್ರಿಕೆ ಮೇಲೆ ಬಿದ್ದಿದೆ! 

ಇದನ್ನೂ ಓದಿ: Viral Video | ರಸ್ತೆ ಮಧ್ಯೆಯೇ ಮದ್ಯ ಕುಡಿದ ಬಾಬಿ ಮೇಲೆ ಬಿತ್ತು ಮತ್ತೊಂದು ಕೇಸ್‌!

Exit mobile version