ಅನೈತಿಕ-ಅಕ್ರಮ ಸಂಬಂಧಗಳೆಲ್ಲ ಸಾಮಾನ್ಯ ಎಂಬಂತಾಗಿರುವ ಈ ಕಾಲದಲ್ಲಿ ಕೆಲವರು ಪತಿ/ಪತ್ನಿಯ ಇನ್ನೊಂದು ಸಂಬಂಧದಿಂದ ನೊಂದು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದಾರೆ. ಹಾಗೇ ಇನ್ನೂ ಹಲವರು ಇಂಥ ಸಂದರ್ಭದಲ್ಲಿ ಕಾನೂನನ್ನೇ ತಮ್ಮ ಕೈಯಿಗೆ ತೆಗೆದುಕೊಳ್ಳುತ್ತಿದ್ದಾರೆ. ಹಾಗೇ ಇಲ್ಲೊಬ್ಬರು ಮಹಿಳೆ ಅದನ್ನೇ ಮಾಡಿದ್ದಾರೆ. ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡುತ್ತಿದ್ದುದನ್ನು ನೋಡಿ, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದ ಈ ಘಟನೆಯ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅ. 13ರಂದು ಕರ್ವಾ ಚೌತ್ ಹಬ್ಬವಿತ್ತು. ಪತ್ನಿ ಕೂಡ ಎಲ್ಲ ಸಿದ್ಧತೆ ಮಾಡಿಕೊಳ್ಳಲು ತನ್ನ ತಾಯಿ ಮತ್ತು ಇತರ ಕೆಲವು ಸ್ನೇಹಿತೆಯರೊಟ್ಟಿಗೆ ಶಾಪಿಂಗ್ಗೆ ಹೋಗಿದ್ದರು. ಆದರೆ ಪತಿ ಆಕೆಯ ಗರ್ಲ್ಫ್ರೆಂಡ್ (ಪ್ರೇಯಸಿ)ಜತೆ ಶಾಪಿಂಗ್ಗೆ ಹೋಗಿದ್ದ. ಅವರಿಬ್ಬರೂ ಅವರದ್ದೇ ಲೋಕದಲ್ಲಿ ಇದ್ದರು. ಅದನ್ನು ನೋಡಿದ್ದೇ ಮಹಿಳೆ ಮತ್ತು ಆಕೆಯ ಸ್ನೇಹಿತೆಯರೆಲ್ಲ ಸೇರಿ ಆತನ ಕಾಲರ್ ಹಿಡಿದು ಎಳೆದು ಹೊಡೆದಿದ್ದಾರೆ. ಹೀಗೆ ಮಹಿಳೆ ತನ್ನ ಸ್ನೇಹಿತೆಯರೊಟ್ಟಿಗೆ ಸೇರಿ, ಪತಿಗೆ ಹೊಡೆಯುವುದನ್ನು ಅಲ್ಲಿದ್ದ ಜನರೆಲ್ಲ ನಿಂತು ನೋಡಿದ್ದಾರೆ. ಆತನನ್ನು ತಪ್ಪಿಸಲು ಬಂದ ಪ್ರೇಯಸಿಗೂ ಹೊಡೆತ ಬಿದ್ದಿದೆ. ಯಾವ ಅಂಗಡಿಯ ಎದುರು ಈ ಹೊಡೆದಾಟ ನಡೆಯುತ್ತಿತ್ತೋ, ಆ ಅಂಗಡಿಯವರು ‘ಹೋಗಿ, ಹೊರಗೆ ಹೋಗಿ, ಅತ್ತ ಹೋಗಿ ಹೊಡೆದಾಡಿಕೊಳ್ಳಿ’ ಎಂದು ಕೂಗುತ್ತಿದ್ದರು.
ಪತ್ನಿ ಅಷ್ಟಕ್ಕೂ ಬಿಡಲಿಲ್ಲ. ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿಗೆ ಸಾರ್ವಜನಿಕ ಸ್ಥಳದಲ್ಲಿ ಹೊಡೆದ ನಂತರ ಆಕೆ ಹೋಗಿ ತನ್ನ ತವರು ಮನೆಯಲ್ಲಿ ತಂದೆ-ತಾಯಿಯೊಂದಿಗೆ ಇದ್ದಾರೆ ಎಂದೂ ಹೇಳಲಾಗಿದೆ. ಅಂದಹಾಗೇ, ಕರ್ವಾ ಚೌತ್ ಎಂಬುದು ಹಿಂದು ಹಬ್ಬವಾಗಿದ್ದು, ದೇಶದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ, ಕಾರ್ತಿಕ ಮಾಸದ ಕೃಷ್ಣಪಕ್ಷದ ನಾಲ್ಕನೇ ದಿನ ಆಚರಿಸಲಾಗುತ್ತದೆ.
ಇದನ್ನೂ ಓದಿ: Viral Video | ಈ ಮಹಿಳೆ ಹೃದಯದಲ್ಲಿ ಇನ್ನೂ ರಾಮನಾಗಿಯೇ ಉಳಿದ ಅರುಣ್ ಗೋವಿಲ್; ಭಾವನಾತ್ಮಕ ನಮನ