ದರೋಡೆ ಮಾಡಲು ಬ್ಯಾಂಕ್ಗೆ ಬಂದವನನ್ನು ಅದೇ ಬ್ಯಾಂಕ್ನ ಮಹಿಳಾ ಮ್ಯಾನೇಜರ್ ದಿಟ್ಟತನದಿಂದ ಎದುರಿಸಿ, ಹೆದರಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅದರ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ದರೋಡೆಕೋರನನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದ ಮಹಿಳಾ ಮ್ಯಾನೇಜರ್ ಪೂನಮ್ ಗುಪ್ತಾರನ್ನು ಜನ ಹೊಗಳುತ್ತಿದ್ದಾರೆ.
ವ್ಯಕ್ತಿಯೊಬ್ಬ ಮುಖಕ್ಕೆ, ತಲೆಗೆ ಬಟ್ಟೆ ಕಟ್ಟಿಕೊಂಡು ರಾಜಸ್ಥಾನದ ಮುರುಧಾರಾ ಗ್ರಾಮೀಣ ಬ್ಯಾಂಕ್ನೊಳಗೆ ನುಸುಳುತ್ತಾನೆ. ಆತ ತನ್ನನ್ನು ತಾನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಕಡೆಯವನು ಎಂದು ಹೇಳಿಕೊಂಡು ದರೋಡೆಗೆ ಬಂದಿದ್ದ. ಕೈಯಲ್ಲಿ ದೊಡ್ಡದಾದ ಚಾಕುವೂ ಇತ್ತು. ಆತ ಬ್ಯಾಂಕ್ಗೆ ಆಗಮಿಸುತ್ತಿದ್ದಂತೆ ಹೊರಗೆ ಗದ್ದಲ, ಗಲಾಟೆ ಏರ್ಪಟ್ಟಿತ್ತು. ಅದು ಕೇಳುತ್ತಿದ್ದಂತೆ ಕ್ಯಾಬಿನ್ನಲ್ಲಿದ್ದ ಪೂನಮ್ ಗುಪ್ತಾ ಹೊರಗೆ ಓಡಿ ಬಂದರು. ಆಗ ದರೋಡೆಕೋರ ಅವರ ಎದುರೂ ಚಾಕು ಹಿಡಿದ. ಆದರೆ ಆಕೆ ಧೈರ್ಯ ಕಳೆದುಕೊಳ್ಳಲಿಲ್ಲ. ‘ಇರುವ ಹಣವನ್ನೆಲ್ಲ ಕೊಟ್ಟುಬಿಡಿ’ ಎನ್ನುತ್ತ ಒಳಗಿನ ಕೋಣೆಗೆ ಹೋದ. ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿಯೊಬ್ಬರು ಆತನನ್ನು ಹಿಡಿಯಲು ಯತ್ನಿಸಿದರು. ಆಗ ತುಸು ತಳ್ಳಾಟ ನಡೆಯಿತು. ಈ ವೇಳೆ ಅವನ ಜೇಬಿನಲ್ಲಿದ್ದ ಕಟ್ಟಿಂಗ್ ಪ್ಲೈಯರ್ (ತಂತಿಗಳನ್ನೆಲ್ಲ ಕತ್ತರಿಸಲು ಬಳಸುವಇಕ್ಕಳ) ಕೆಳಕ್ಕೆ ಬಿತ್ತು. ಪೂನಮ್ ಕ್ಷಣ ಮಾತ್ರದಲ್ಲಿ ಅದನ್ನೆತ್ತಿಕೊಂಡು ಆತನನ್ನು ಹೆದರಿಸಿದ್ದಾರೆ. ಅಷ್ಟರಲ್ಲಿ ಉಳಿದವರೂ ಒಟ್ಟಾಗಿ ಅವನನ್ನು ಓಡಿಸಿದ್ದಾರೆ. ಬ್ಯಾಂಕ್ನ ಮುಖ್ಯ ಬಾಗಿಲನ್ನು ಮುಚ್ಚಿ, ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ದರೋಡೆಕೋರನ ಹೆಸರು ಲ್ಯಾವಿಶ್ ಅರೋರಾ ಎಂದು ಗುರುತಿಸಲಾಗಿದೆ.
ವಿಡಿಯೊ ನೋಡಿದವರು ಪೂನಮ್ ಗುಪ್ತಾರನ್ನು ದುರ್ಗಿ ಎಂದೆಲ್ಲ ಹೊಗಳುತ್ತಿದ್ದಾರೆ. ಅಷ್ಟು ದೊಡ್ಡ ಚಾಕು ಹಿಡಿದು ಬಂದವನನ್ನು ಈಕೆ ಒಂದು ಕಟ್ಟಿಂಗ್ ಪ್ಲೈಯರ್ ಹಿಡಿದು ಹೆದರಿಸಿದರಲ್ಲ ! ಎಂದು ಆಶ್ಚರ್ಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Viral Video | ವಿಮಾನದಲ್ಲಿ ಪರಿಚಾರಕರ ಕೈ ಕಚ್ಚಿದ ಕುಡುಕ ಪೈಲಟ್; ತುರ್ತು ಲ್ಯಾಂಡ್ ಆದ ಫ್ಲೈಟ್