Site icon Vistara News

Viral Photos: ವಿಚ್ಛೇದನವನ್ನು ಹುಚ್ಚೆದ್ದು ಸಂಭ್ರಮಿಸಿ, ಮದುವೆ ಫೋಟೋಗಳನ್ನು ಹರಿದು ಚೂರು ಮಾಡಿದ ಯುವತಿ!

Woman Celebrates Her Divorce Photos Viral

#image_title

ಸಾಮಾನ್ಯವಾಗಿ ಜನರು ಮದುವೆಯನ್ನು ಸಂಭ್ರಮಿಸುತ್ತಾರೆ. ಅದೇ ವಿಚ್ಛೇದನ ಎಂದರೆ ಅದೊಂದು ನೋವು, ನಕಾರಾತ್ಮಕ ಸಂಗತಿ ಎಂದೇ ಭಾವಿಸುತ್ತಾರೆ. ಮದುವೆ ಸಂದರ್ಭದಲ್ಲಿ ಬಹಿರಂಗವಾಗಿಯೇ ಸಂಭ್ರಮಿಸಿ, ಕಲರ್​ಫುಲ್ ಫೋಟೋಗಳನ್ನು ತೆಗೆಸಿಕೊಳ್ಳುವ ಯುವಕ/ಯುವತಿಯರು, ವಿಚ್ಛೇದನದ ಸಂದರ್ಭದಲ್ಲಿ ಮೌನವಾಗಿಯೇ ಇದ್ದು, ಸಂಕೋಲೆ ಕಳಚಿಕೊಂಡ ನಿರಾಳತೆ ಅನುಭವಿಸುತ್ತಾರೆ. ಆದರೆ ಡಿವೋರ್ಸ್ ಎಂಬುದು ಒಂದು ಸಂಬಂಧ ಒಡೆಯುವ ಪ್ರಕ್ರಿಯೆಯಾಗಿದ್ದು, ನೋವು, ಸಮಾಜದಲ್ಲಿ ಅವಮಾನ ತರುವ ಸನ್ನಿವೇಶ, ಅದರಲ್ಲೂ ಮಹಿಳೆಯರ ಪಾಲಿಗೆ ಇದು ತುಂಬ ಕೆಟ್ಟದ್ದು ಎಂದೇ ಭಾವಿಸಲಾಗಿದೆ.

ಹೀಗೆಲ್ಲ ಇರುವಾಗ ಯುವತಿಯೊಬ್ಬಳು ತನ್ನ ವಿಚ್ಛೇದನವನ್ನು ಭರ್ಜರಿಯಾಗಿಯೇ ಸಂಭ್ರಮಿಸಿದ್ದಾಳೆ. ಒಂದು ಕೆಟ್ಟ, ನಿಂದನಾತ್ಮಕ ಸಂಬಂಧದಿಂದ ಹೊರಬಂದ ಖುಷಿ-ನಿರಾಳತೆಯನ್ನು ಏಕಾಂಗಿಯಾಗಿ ಆಚರಿಸಿದ್ದಾಳೆ. ಹೊಸಬಟ್ಟೆ ತೊಟ್ಟು, ಮದುವೆ ಫೋಟೋಗಳನ್ನು ಸುಟ್ಟು, ತುಳಿದು ನಕ್ಕಿದ್ದಾಳೆ. ತಾನು ವಿಚ್ಛೇದನವನ್ನು ಸಂಭ್ರಮಿಸುತ್ತಿರುವ ಕ್ಷಣದ ಫೋಟೋ ಶೂಟ್ ಮಾಡಿಸಿಟ್ಟಿದ್ದಾಳೆ. ಸದ್ಯ ಆಕೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.

ಆರ್ಟಿಸ್ಟ್​, ಫ್ಯಾಶನ್ ಡಿಸೈನರ್ ಆಗಿರುವ ಶಾಲಿನಿ ಈ ಮಹಿಳೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಂಪು ಬಣ್ಣದ ಬಟ್ಟೆ ತೊಟ್ಟ ಅವರು, ಕೈಯಲ್ಲಿ ‘ಡಿವೋರ್ಸ್​ (DIVORCE)’ ಎಂಬ ಅಕ್ಷರಗಳ ಮಾಲೆಯನ್ನು ಹಿಡಿದಿರುವ, ತಾವು ಪತಿಯೊಂದಿಗೆ ಕುಳಿತ ಫೋಟೋವನ್ನು ಹರಿಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಮಹಿಳೆಯೊಬ್ಬಳು ತನ್ನ ವಿಚ್ಛೇದನವನ್ನು ಸಂಭ್ರಮಿಸುತ್ತಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ.

ಇದನ್ನೂ ಓದಿ: Actress Shalini: ಡಿವೋರ್ಸ್‌ ಫೋಟೊಶೂಟ್‌ ಮಾಡಿಸಿಕೊಂಡ ತಮಿಳು ಕಿರುತೆರೆ ನಟಿ ಶಾಲಿನಿ!

‘ಮದುವೆ ಸಂಬಂಧದಲ್ಲಿ ಹಿಂಸೆ ಪಡುತ್ತಿರುವ, ನಿಂದನೆ ಅನುಭವಿಸುತ್ತಿರುವ ಮಹಿಳೆಯರಿಗೆಲ್ಲ, ವಿಚ್ಛೇದಿತ ಮಹಿಳೆಯಾದ ನಾನು ಸಂದೇಶವೊಂದನ್ನು ಕೊಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಸಂತೋಷದಿಂದ ಇರುವ ಅರ್ಹತೆ ಇದ್ದೇ ಇರುತ್ತದೆ. ವಿವಾಹವಾದ ಮೇಲೆ ಸ್ವಲ್ಪವೂ ಸಂತೋಷ ಇಲ್ಲ ಎಂದಾದ ಮೇಲೆ ಅಂಥ ಮದುವೆಯನ್ನು ತೊರೆಯವುದು ಉತ್ತಮ. ಡಿವೋರ್ಸ್ ಎಂದರೆ ವಿಫಲತೆಯಲ್ಲ. ಜೀವನದಲ್ಲಿ ಇದೊಂದು ತಿರುವು ಅಷ್ಟೇ. ನಿಮ್ಮಲ್ಲಿ ಇದು ಸಕಾರಾತ್ಮಕ ಬದಲಾವಣೆಯನ್ನು ಉಂಟು ಮಾಡುತ್ತದೆ. ಯಾರೆಲ್ಲ ವಿಚ್ಛೇದನ ಎಂಬ ಗಟ್ಟಿ ತೀರ್ಮಾನ ತೆಗೆದುಕೊಂಡಿದ್ದೀರೋ, ಅವರಿಗೆ ನಾನು ಈ ಸಂದೇಶವನ್ನು ಅರ್ಪಿಸುತ್ತಿದ್ದೇನೆ. ಒಬ್ಬಂಟಿಯಾಗಿ, ಧೈರ್ಯದಿಂದ ನಿಲ್ಲಿ’ ಎಂದು ಹೇಳಿದ್ದಾರೆ.

ಸ್ವಲ್ಪದಿನಗಳ ಹಿಂದೆ ಯುಎಸ್​ನಲ್ಲಿ ಲೌರೆನ್​ ಬ್ರೂಕ್ (31) ಎಂಬ ಮಹಿಳೆ ಹೀಗೆ ತನ್ನ ವಿಚ್ಛೇದನವನ್ನು ಭರ್ಜರಿಯಾಗಿ ಸಂಭ್ರಮಿಸಿದ್ದರು. ಅದರ ಫೋಟೋಶೂಟ್ ಮಾಡಿಸಿದ್ದರು. ಲೌರೆನ್​​ಗೆ 2012ರಲ್ಲಿ ಮದುವೆಯಾಗಿತ್ತು. ಆಕೆಯ ಪತಿಯಿಂದ 2021ರಲ್ಲಿ ಪ್ರತ್ಯೇಕವಾಗಿದ್ದರು. ಅಲ್ಲಿಂದ ಶುರುವಾಗಿದ್ದ ಅವರ ವಿಚ್ಛೇದನಾ ಪ್ರಕ್ರಿಯೆ ಇದೇ ವರ್ಷ ಜನವರಲ್ಲಿ ಕೊನೆಗೊಂಡಿತ್ತು. ಅಂತಿಮವಾಗಿ ಬಿಡುಗಡೆ ಸಿಕ್ಕ ಬಳಿಕ, ತಮ್ಮ ಹೊಸ ಜೀವನವನ್ನು ಆಕೆ ಸಂಭ್ರಮಿಸಿದ್ದರು.

Exit mobile version