Site icon Vistara News

ಟೊಮ್ಯಾಟೊ ಹಾಕಿದ ಮ್ಯಾಗಿ ತಿಂದು ಮಹಿಳೆ ಸಾವು; ಆಕೆ ಕೈಯಾರೆ ಮಾಡಿಕೊಂಡ ಪ್ರಮಾದ!

Maggi

ಮುಂಬೈ: ಟೊಮ್ಯಾಟೊ ಹಾಕಿದ ಮ್ಯಾಗಿಯನ್ನು ತಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಮ್ಯಾಗಿ ತಿಂದ ಕೆಲವೇ ಕ್ಷಣದಲ್ಲಿ ಆಕೆಯ ಜೀವ ಹೋಗಿದೆ. ಟೊಮ್ಯಾಟೊ ಹಾಕಿದ ಮ್ಯಾಗಿ ತಿಂದಿದ್ದಕ್ಕೇ ಮೃತಪಟ್ಟರಾ ಎಂದು ಕೇಳಿದರೆ, ಉತ್ತರ ಖಂಡಿತವಾಗಿಯೂ ಹೌದು. ಇದು ಕೇಳಲು ವಿಚಿತ್ರ ಅನ್ನಿಸುವುದು ಸಹಜ. ಯಾಕೆಂದರೆ ನಾವೆಲ್ಲ ಬಹುತೇಕರು ಮ್ಯಾಗಿಗೆ ಟೊಮ್ಯಾಟೊ, ಕ್ಯಾಪ್ಸಿಕಂ, ಹಸಿರು ಬಟಾಣಿ, ಕ್ಯಾರೆಟ್‌ ಮತ್ತಿತರ ತರಕಾರಿ ಸೇರಿಕೊಳ್ಳುತ್ತೇವೆ. ಬರೀ ಮ್ಯಾಗಿ ತಿನ್ನುವುದಕ್ಕಿಂತ ಈ ತರಕಾರಿಗಳನ್ನು ಹಾಕಿಕೊಂಡರೆ ರುಚಿ ಹೆಚ್ಚುವುದೂ ಹೌದು. ಹೀಗೆ ಅದೆಷ್ಟೋ ಜನ ಟೊಮ್ಯಾಟೊ ಮ್ಯಾಗಿ ತಿಂದಿರುವಾಗ/ತಿನ್ನುತ್ತಿರುವಾಗ ಅದು ಹೇಗೆ ಈ ಮಹಿಳೆ ಮಾತ್ರ ಮೃತಪಟ್ಟರು?..ಇದು ಆಕೆಯ ಕೈಯಾರೆ ಮಾಡಿಕೊಂಡಿರುವ ಬಹುದೊಡ್ಡ ಪ್ರಮಾದ.

ಟೊಮ್ಯಾಟೊ ಹಾಕಿದ ಮ್ಯಾಗಿ ತಿಂದು ಮೃತರಾದ ಮಹಿಳೆಯ ಹೆಸರು ರೇಖಾ ನಿಶಾದ್‌. 35ವರ್ಷದ ಇವರು ಮುಂಬೈನ ಮಲಾಡ್‌ನ ಪಾಸ್ಕಲ್‌ ವಾಡಿ ಎಂಬಲ್ಲಿನ ನಿವಾಸಿ. ಈಕೆ ತನ್ನ ಪತಿ ಮತ್ತು ಮೈದುನನೊಂದಿಗೆ ವಾಸವಾಗಿದ್ದರು. ಮನೆಯಲ್ಲೇ ಕುಳಿತು ಸಣ್ಣಪುಟ್ಟ ಉದ್ಯೋಗ ಮಾಡಿ ಹಣ ಗಳಿಸುತ್ತಿದ್ದರು.

ಇವರ ಮನೆಯಲ್ಲಿ ಇಲಿಗಳ ಹಾವಳಿ ಜಾಸ್ತಿಯಾಗಿತ್ತು. ತರಕಾರಿ, ಹಣ್ಣು, ಕಾಳು-ಕಡಿಗಳನ್ನೆಲ್ಲ ತಿಂದು ಹಾಳು ಮಾಡುತ್ತಿದ್ದವು. ಇಲಿಕಾಟಕ್ಕೆ ಬೇಸತ್ತಿದ್ದ ಅವರು ಅವುಗಳನ್ನು ಕೊಲ್ಲಲು ನಿರ್ಧರಿಸಿ, ಅಂಗಡಿಯಿಂದ ಇಲಿ ಮದ್ದು ತಂದು ಟೊಮ್ಯಾಟೊಕ್ಕೆ ಬೆರೆಸಿ ಇಟ್ಟಿದ್ದರು. ಆದರೆ ಇದೇ ಟೊಮ್ಯಾಟೊಗಳು ಈಗ ಮಹಿಳೆಯ ಜೀವ ತೆಗೆದಿವೆ. ಟಿವಿ ನೋಡುವುದರಲ್ಲೇ ಮಗ್ನಳಾಗಿದ್ದ ಆಕೆ ಯಾವುದೋ ಧ್ಯಾನದಲ್ಲಿ ವಿಷ ಬೆರೆಸಿದ್ದ ಟೊಮ್ಯಾಟೊವನ್ನೇ ಕೊಚ್ಚಿ ಮ್ಯಾಗಿಗೆ ಹಾಕಿಕೊಂಡಿದ್ದಾರೆ. ಅದನ್ನು ತಿಂದ ಮರುಕ್ಷಣವೇ ಅಸ್ವಸ್ಥರಾಗಿದ್ದರು. ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಪ್ರಯೋಜನ ಆಗಲಿಲ್ಲ. ಈ ಮಹಿಳೆಯ ಸಾವಿಗೆ ಇನ್ಯಾರೂ ಕಾರಣರಲ್ಲ. ಆಕೆಯ ಪ್ರಮಾದಿಂದಲೇ ಆಗಿದೆ. ನಾವು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ Fact Check: ಶಾಲಾ ಪಠ್ಯ ಪುಸ್ತಕದ ಮೇಲೆ ಜಿಎಸ್‌ಟಿ ಹೇರಿದ ಕೇಂದ್ರ ಸರ್ಕಾರ?; ಸತ್ಯಾಂಶ ಏನು?

Exit mobile version