ಬೆಂಗಳೂರು: ಭಾರತೀಯ ಸಂಪ್ರದಾಯದಲ್ಲಿ ಅಣ್ಣ-ತಂಗಿ ಬಾಂಧವ್ಯಕ್ಕೆ ಪವಿತ್ರವಾದ ಬಾಂಧವ್ಯ ಎಂದು ಕರೆಯಲಾಗುತ್ತದೆ. ಸಂಬಂಧದಲ್ಲಿ ಅಣ್ಣ-ತಂಗಿಯಾದರೆ ಅವರಿಬ್ಬರಿಗೆ ವಿವಾಹವಾಗುವುದಕ್ಕೆ ನಮ್ಮಲ್ಲಿ ಅವಕಾಶವಿಲ್ಲ. ಆದರೂ ಇತ್ತೀಚಿನ ಕಾಲಘಟ್ಟದಲ್ಲಿ ಕೆಲವು ಜನರು ಎಲ್ಲ ಸಂಪ್ರದಾಯಗಳನ್ನು ಬದಿಗೊತ್ತಿ ತಮ್ಮದೇ ಆದ ನಿರ್ಧಾರ ತೆಗೆದುಕೊಂಡಿರುವುದನ್ನು ನೀವು ನೋಡಿರಬಹುದು. ಅದೇ ರೀತಿ ಇಲ್ಲೊಬ್ಬ ಯುವತಿ ಎಂಟು ವರ್ಷ ಯುವಕನೊಬ್ಬನನ್ನು ಅಣ್ಣ ಎಂದು ಕರೆದು, ಕೊನೆಗೆ ಆತನನ್ನೇ (Viral News) ಮದುವೆಯಾಗಿದ್ದಾಳೆ.
ಹೌದು, ಇಂಥದ್ದೊಂದು ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ವಿನಿ ಹೆಸರಿನ ಹುಡುಗಿ ತನ್ನ ಪತಿ ಜೈ ಒಂದಿಗಿನ ಮದುವೆ ಕಥೆಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಆಕೆ ಹೇಳಿರುವ ಪ್ರಕಾರ ಜೈ ಅವರು ವಿನಿಗೆ ಸಂಬಂಧಿಯಾಗಿದ್ದರಂತೆ. ಜೈ, ವಿನಿಗಿಂತ ವಯಸ್ಸಿನಲ್ಲಿ ದೊಡ್ಡವರಿದ್ದ ಕಾರಣ ಚಿಕ್ಕ ವಯಸ್ಸಿನಿಂದಲೂ ವಿನಿ, ಜೈಗೆ ಅಣ್ಣ ಎಂದು ಕರೆಯುತ್ತಿದ್ದರಂತೆ.
ಹೀಗೆ ಎಂಟು ವರ್ಷ ಅಣ್ಣ ಎಂದು ಕರೆದಿದ್ದ ಜೈ ಅನ್ನೇ ಕೊನೆಗೆ ವಿನಿ ಮದುವೆಯಾಗಿದ್ದಾರೆ. ಇದೀಗ ಈ ಜೋಡಿಗೆ ಒಂದು ಮುದ್ದಾದ ಮಗುವೂ ಇದೆ.
ಈ ಕಥೆ ಹಂಚಿಕೊಂಡಿರುವ ಜೋಡಿ ಅದರ ಜತೆ ತಮ್ಮ ಹಳೆಯ ಫೋಟೋಗಳು, ಮದುವೆ ಫೋಟೋ ಹಾಗೆಯೇ ಮಗುವಿನ ಫೋಟೊವನ್ನು ಹಂಚಿಕೊಂಡಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊವನ್ನು 50 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಆದರೆ ವಿಡಿಯೊ ನೋಡಿದವರೆಲ್ಲರೂ ಈ ವಿಡಿಯೊವನ್ನು ಮೆಚ್ಚಿಕೊಂಡಿಲ್ಲ. “ಅಣ್ಣ ಎನ್ನುವ ಪದದ ಅರ್ಥವೇ ನಿಮಗೆ ತಿಳಿದಿಲ್ಲವೇ?” ಎಂದು ಅನೇಕರು ಪ್ರಶ್ನಿಸಲಾರಂಭಿಸಿದ್ದಾರೆ. “ನಿಮ್ಮಂತವರಿಂದಲೇ ಸಂಪ್ರದಾಯ, ಭಾರತೀಯ ಸಂಸ್ಕೃತಿ ಮೂಲೆ ಸೇರುತ್ತಿದೆ” ಎಂದು ಕೆಲವರು ಬೈಯಲಾರಂಭಿಸಿದ್ದಾರೆ. ಇನ್ನು ಕೆಲವರು “ನೀವು ಅದೇನೇ ಆಗಿದ್ದರೂ ಇಂತಹ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸುಮ್ಮನೆ ಚರ್ಚೆಯಾಗುವಂತೆ ಮಾಡಬಾರದು” ಎಂದು ತಿಳಿಮಾತು ಹೇಳಿದ್ದಾರೆ.