ನವ ದೆಹಲಿ: ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಚರ್ಚಿಸಲು ದೆಹಲಿಯ ಚತ್ತಾರ್ಪುರದಲ್ಲಿ ಹಿಂದು ಏಕತಾ ಮೋರ್ಚಾ ಸಂಘಟನೆಯಿಂದ ‘ಬೇಟಿ ಬಚಾವೋ ಮಹಾಪಂಚಾಯತ್’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರದ್ಧಾ ವಾಳ್ಕರ್ ಹತ್ಯೆಯ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಶ್ರದ್ಧಾಳ ಹತ್ಯೆಗೆ ನ್ಯಾಯ ಸಿಗಬೇಕು. ಆರೋಪಿ ಅಫ್ತಾಬ್ ಪೂನಾವಾಲಾಗೆ ಶಿಕ್ಷೆಯಾಗಬೇಕು ಎಂದು ಅಲ್ಲಿದ್ದವರೆಲ್ಲ ಆಗ್ರಹಿಸುತ್ತಿದ್ದರು. ಹಾಗೇ, ಸ್ಥಳೀಯ ಪ್ರಮುಖರೆಲ್ಲ ವೇದಿಕೆ ಮೇಲೆ ಇದ್ದರು. ಸಭೆಗೆ ಬಂದಿದ್ದ ಕೆಲವರು, ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುತ್ತ, ಹೆಣ್ಣುಮಕ್ಕಳ ಭದ್ರತೆ, ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರು.
ಇದೇ ವೇಳೆ ಮಹಿಳೆಯೊಬ್ಬಳು ಬಂದು ವೇದಿಕೆ ಮೇಲೆ ನಿಂತು ಮಾತನಾಡಲು ಮುಂದಾದರು. ಮಾತನಾಡುತ್ತಲೇ, ತಮ್ಮ ಚಪ್ಪಲಿಯನ್ನು ತೆಗೆದು ಅಲ್ಲೇ ತನ್ನ ಪಕ್ಕದಲ್ಲಿದ್ದವನಿಗೆ ಹೊಡೆದಿದ್ದಾರೆ. ‘ಆ ವ್ಯಕ್ತಿಯ ಮಗ ನನ್ನ ಪುತ್ರಿಯನ್ನು ಕರೆದುಕೊಂಡು ಹೋಗಿದ್ದಾನೆ. ಐದು ದಿನಗಳಾಯ್ತು ನನ್ನ ಮಗಳು ಈತನ ಮನೆಗೆ ಹೋಗಿ, ಈ ವ್ಯಕ್ತಿಯೂ ಏನೂ ಮಾಡುತ್ತಿಲ್ಲ. ನನ್ನ ಮಗಳನ್ನು ಭೇಟಿ ಮಾಡಲು ಅವಕಾಶ ಕೊಡುವಂತೆ ಅವರ ಮನೆಗೆ ಹೋಗಿ ಕೇಳಿದರೆ, ಆತನ ಅಮ್ಮ ನನ್ನನ್ನೇ ದಬಾಯಿಸುತ್ತಾಳೆ. ಅವಳನ್ನು ಡಿಸ್ಟರ್ಬ್ ಮಾಡಬೇಡಿ ಎನ್ನುತ್ತಾಳೆ. ಅವರಿಬ್ಬರೂ ಮದುವೆಯಾಗಿದ್ದಾರಾ? ಮಗಳು ಏನಾದಳು ಎಂದು ನನಗೆ ತಿಳಿಯುತ್ತಿಲ್ಲ. ಪೊಲೀಸ್ ಸ್ಟೇಶನ್ಗೆ ಹೋದರೆ, ಅವರೂ ಗಮನ ಕೊಡುತ್ತಿಲ್ಲ’ ಎಂದು ಆಕೆ ಹತಾಶೆ, ಆತಂಕ ವ್ಯಕ್ತಪಡಿಸುತ್ತಿದ್ದರು.
ಆ ವೇಳೆ ಅಲ್ಲಿಯೇ ನಿಂತದ್ದವನು ಮಹಿಳೆಯ ಕೈಯಿಂದ ಮೈಕ್ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದ. ಈ ವಿಷಯವನ್ನು ಸಾರ್ವಜನಿಕವಾಗಿ ಆಕೆ ಹೇಳದಂತೆ ತಡೆಯಲು ಮುಂದಾಗುತ್ತಿದ್ದ. ಆದರೆ ಮಹಿಳೆ ಎಲ್ಲವನ್ನೂ ಹೇಳಿ, ಕೊನೆಗೆ ಚಪ್ಪಲಿ ತೆಗೆದು ಹೊಡೆದಿದ್ದಾರೆ. ಇನ್ನಷ್ಟು ಜನ ವೇದಿಕೆ ಹತ್ತಿ ಅದನ್ನು ಬಿಡಿಸಿದ್ದಾರೆ. ಈ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.