ಘುಸಿಯಾ: ಬೇಸಿಗೆ ಬಂತೆಂದರೆ ಸಾಕು ದೇಶದ ಅನೇಕ ಪ್ರದೇಶಗಳಲ್ಲಿ ನೀರಿನ ಅಭಾವದ ಸಮಸ್ಯೆ ತಲೆದೋರುತ್ತದೆ. ಅದರಲ್ಲೂ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಉತ್ತರಾಖಂಡ್ ಮತ್ತು ಹರ್ಯಾಣಗಳಲ್ಲಿ ಇದು ಹೆಚ್ಚು. ಈಗ ವೈರಲ್ ಆದ ವಿಡಿಯೋವೊಂದು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನೀರಿಗಾಗಿ ಮಹಿಳೆಯರು ಎಷ್ಟು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸಿದೆ. ಈ ಮಹಿಳೆಯರು ಬಾವಿಯಿಂದ ನೀರು ತರಲು ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.
ಮಧ್ಯಪ್ರದೇಶದ ಘುಸಿಯಾ ಎಂಬ ಹಳ್ಳಿಯಲ್ಲಿ ನೀರಿನ ಅಭಾವ ತೀವ್ರವಾಗಿದೆ. ಇರುವ ಬಾವಿ-ಕೆರೆಗಳೆಲ್ಲ ಬತ್ತಿ ಹೋಗಿವೆ. ಒಂದೆರಡು ಬಾವಿಗಳಲ್ಲಿ ನೀರಿದ್ದರೂ ತಳದಲ್ಲಿ ಇದೆ. ಮೇಲೆ ನಿಂತು ಕೊಡವನ್ನೋ, ಪಾತ್ರೆಯನ್ನೋ ಬಾವಿಗೆ ಹಗ್ಗದ ಮೂಲಕ ಇಳಿಬಿಟ್ಟು ನೀರನ್ನು ಮೇಲೆತ್ತುವ ಸ್ಥಿತಿಯಿಲ್ಲ. ಬಾವಿಗೆ ಇಳಿದು ಪಾತ್ರೆಯಲ್ಲಿ/ಬಕೆಟ್‌ಗಳಲ್ಲಿ ನೀರು ಮೊಗೆಯಬೇಕು. ಅಂತೆಯೇ ಇಲ್ಲಿನ ಮಹಿಳೆಯರೂ ಬಾವಿ ಬಳಿ ಹೋಗಿ ಅದರೊಳಗೆ ಇಳಿಯುತ್ತಾರೆ. ಇಲ್ಲಿ ಅತ್ಯಂತ ಭಯ ಹುಟ್ಟಿಸುವ ಅಂಶವೆಂದರೆ ಬಾವಿಗೆ ಇಳಿಯುವಾಗ ಅವರು ಹಗ್ಗದ ಸಹಾಯವನ್ನು ತೆಗೆದುಕೊಳ್ಳುವುದಿಲ್ಲ. ಬದಲಿಗೆ ಆಳದ ಬಾವಿಗೆ ಇರುವ ಚಿಕ್ಕಚಿಕ್ಕ ಮೆಟ್ಟಿಲುಗಳ ಮೂಲಕ ಇಳಿದು, ನೀರನ್ನು ಪಾತ್ರೆಯಿಂದ ಮೊಗೆದುಕೊಳ್ಳುತ್ತಾರೆ. ಬಳಿಕ ನೀರು ತುಂಬಿದ ಬಕೆಟ್‌ಗೆ ಹಗ್ಗ ಕಟ್ಟಿದರೆ, ಮೇಲಿದ್ದವರು ಅದನ್ನು ಎಳೆದುಕೊಳ್ಳುತ್ತಾರೆ. ಆದರೆ ಕೆಳಗೆ ಹೋದವರು ಅದೇ ಸಣ್ಣ ಮೆಟ್ಟಿಲುಗಳ ಮೇಲೆ ಹೆಜ್ಜೆಯಿಡುತ್ತ ಹತ್ತುತ್ತಾರೆ. ಇವರಿಗೆ ಹಗ್ಗದ ಸಪೋರ್ಟ್ ಇರುವುದಿಲ್ಲ. ಮೆಟ್ಟಿಲುಗಳು ಅತ್ಯಂತ ಚಿಕ್ಕದಾಗಿರುವ ಕಾರಣ ಸ್ವಲ್ಪವೇ ಆಯ ತಪ್ಪಿದರೂ ಅವರು ಕೆಳಗೆ ಬೀಳುತ್ತಾರೆ. ನೀರಿಲ್ಲದ ಕಾರಣ ಬಾವಿಯ ತಳದಲ್ಲಿ ದೊಡ್ಡದೊಡ್ಡ ಕಲ್ಲುಗಳಿವೆ. ಹೀಗಾಗಿ ಗಂಭೀರ ಸ್ವರೂಪದ ಪೆಟ್ಟಾಗಬಹುದು ಅಥವಾ ಜೀವವೇ ಹೋಗಬಹುದು.
ತಮಗೆ ಎದುರಾಗಿರುವ ಈ ಪರಿಸ್ಥಿತಿಯ ಬಗ್ಗೆ ಘುಸಿಯಾ ಜನರು ಆಕ್ರೋಶಿತರಾಗಿದ್ದಾರೆ. ನಮಗೆ ನೀರಿನ ಸಮಸ್ಯೆ ಇಂದು-ನಿನ್ನೆಯದಲ್ಲ. ಸಂಬಂಧಪಟ್ಟವರಿಗೆ ದೂರು ನೀಡಿ ಸಾಕಾಯಿತು. ನೀರು ಬೇಕೆಂದರೆ ಬಾವಿಯೊಳಗೆ ಇಳಿಯಬೇಕು. ನಮ್ಮ ಹಳ್ಳಿಯ ಸುತ್ತಮುತ್ತ ಇರುವ ಬಾವಿಗಳೆಲ್ಲ ಬತ್ತಿ ಹೋಗಿವೆ. ಒಂದೇ ಒಂದು ಬೋರ್‌ನಲ್ಲೂ ನೀರು ಬರುತ್ತಿಲ್ಲ. ಚುನಾವಣೆ ಬಂತೆಂದರೆ ಸಾಕು, ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲ ಇಲ್ಲಿಗೆ ಬರುತ್ತಾರೆ. ಆದರೆ ನೀರಿನ ಸಮಸ್ಯೆಗೆ ಪರಿಹಾರವೇ ಸಿಗುವುದಿಲ್ಲ. ಈ ಸಲ ಯಾರನ್ನೂ ಹಳ್ಳಿಗೆ ಬಿಟ್ಟುಕೊಳ್ಳುವುದಿಲ್ಲ ಮತ್ತು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವಿಟಮಿನ್ ಡಿ ಕೊರತೆ ನೀಗಿಸಲು ಹಾಲು, ನೀರು ಪರಿಣಾಮಕಾರಿ; ಅಧ್ಯಯನ ವರದಿ