ಬಂಗಾರದ ಆಭರಣಗಳ ಅಂಗಡಿಗೆ, ಗ್ರಾಹಕರಂತೆ ಹೋಗಿ ಚಾಲಾಕಿತನದಿಂದ ಕಳವು ಮಾಡುವವರ ಹಲವು ವಿಡಿಯೊಗಳನ್ನು ನಾವೆಲ್ಲ ನೋಡಿದ್ದೇವೆ. ಚಿನ್ನಾಭರಣ ಅಂಗಡಿ ಅಂತಲ್ಲ, ಇಂಥ ಘಟನೆಗಳು ಬಟ್ಟೆ ಅಂಗಡಿಗಳಲ್ಲೂ ಕಾಣ ಸಿಗುತ್ತವೆ. ಎದುರಿಗೆ ಅಂಗಡಿಯವರು ಇದ್ದರೂ, ಅತ್ಯಂತ ನಾಜೂಕಾಗಿ, ಅವರ ಗಮನಕ್ಕೂ ಬಾರದಂತೆ ಮೌಲ್ಯಯುತ ವಸ್ತುಗಳನ್ನು ಎಗರಿಸಿಬಿಡುತ್ತಾರೆ. ಅಂಥದ್ದೇ ಒಂದು ವಿಡಿಯೊ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಗೋರಖ್ಪುರದಲ್ಲಿರುವ ಬಲದೇವ್ ಪ್ಲಾಜಾದಲ್ಲಿರುವ ಚಿನ್ನದ ಅಂಗಡಿಯೊಂದರಲ್ಲಿ ಹಿರಿಯ ವಯಸ್ಸಿನ ಮಹಿಳೆಯೊಬ್ಬಳು ಒಂದು ದೊಡ್ಡ ಚಿನ್ನದ ನೆಕ್ಲೆಸ್ನ್ನು ಕದ್ದಿರುವ ವಿಡಿಯೊ ಇದು. ಈ ನೆಕ್ಲೆಸ್ ಬೆಲೆ ಸುಮಾರು 10 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಆ ಮಹಿಳೆ ಕೆಂಪು ಬಣ್ಣದ ಮಾಸ್ಕ್ ಧರಿಸಿದ್ದಾರೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿದ್ದಾರೆ. ಹಸಿರು ಸೀರೆಯನ್ನು ಉಟ್ಟಿದ್ದಾರೆ.
ಆಕೆಯ ಎದುರು ಎರಡು ನೆಕ್ಲೆಸ್ ಬಾಕ್ಸ್ಗಳಿರುತ್ತವೆ. ಮಹಿಳೆ ನೆಕ್ಲೆಸ್ ಪರಿಶೀಲನೆ ಮಾಡುವ ನೆಪದಲ್ಲಿ ಒಂದರ ಮೇಲೊಂದು ನೆಕ್ಲೇಸ್ ಬಾಕ್ಸ್ ಇಟ್ಟು, ಅವೆರಡನ್ನೂ ತೆಗೆದು ಮಡಿಲಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ತಿರುಗಿ ಕೆಳಗೆ ಇಡುವಾಗ, ಅಡಿಯಲ್ಲಿರುವ ಬಾಕ್ಸ್ನ್ನು ಸೆರಗಿನ ಮರೆಯಲ್ಲಿ ಹಾಕಿಟ್ಟುಕೊಂಡು, ಒಂದನ್ನು ಮಾತ್ರ ತೆಗೆದು ಟೇಬಲ್ ಮೇಲೆ ಇಡುತ್ತಾಳೆ. ಅಲ್ಲಿ ಇನ್ನೂ ಮೂರ್ನಾಲ್ಕು ಗ್ರಾಹಕರು ಇರುವುದರಿಂದ ಮಹಿಳೆಯ ಕಳ್ಳತನ ಯಾರ ಗಮನಕ್ಕೂ ಬಂದಿಲ್ಲ. ಆಕೆ ಅತ್ತ ಹೋದ ಎಷ್ಟೋ ಹೊತ್ತಿನ ನಂತರ ನೆಕ್ಲೆಸ್ ಕಳವಾಗಿರುವುದು ಗೊತ್ತಾಗಿದೆಆಕೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ, ಅವರು ಯಾರೆಂದು ಇನ್ನೂ ಗುರುತು ಪತ್ತೆಯಾಗಿಲ್ಲ. ಅಂಗಡಿಯವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಪ್ರಾರಂಭವಾಗಿದೆ.