Site icon Vistara News

Viral News: 960 ಬಾರಿ ಟೆಸ್ಟ್​​ಗೆ ಒಳಗಾಗಿ ಡ್ರೈವಿಂಗ್​ ಲೈಸೆನ್ಸ್ ಪಡೆದ ಮಹಿಳೆ; ಕಾರು ಗಿಫ್ಟ್ ಪಡೆದ​ ಈಕೆಯ ಸ್ಟೋರಿ 18ವರ್ಷ ಹಿಂದಿನದ್ದು

Woman To Get Her Driving Licence After 960 Attempts Viral News

#image_title

18ವರ್ಷದ ಹಿಂದೆ ಡ್ರೈವಿಂಗ್​ ಲೈಸೆನ್ಸ್​ ಪಡೆದ ಮಹಿಳೆಯೊಬ್ಬಳ ಕಥೆ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಚಾಲನಾ ಪರವಾನಗಿಯನ್ನು ಹೇಗೆ ಪಡೆಯಬೇಕು ಎಂದು ಗೊತ್ತಿದೆ. ನಾವು ಆರ್​ಟಿಒ ಕಚೇರಿಗೆ ಹೋಗಿ, ಡ್ರೈವಿಂಗ್ ಟೆಸ್ಟ್​​ನಲ್ಲಿ ಪಾಸಾಗಲೇಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಬೈಕ್​/ಕಾರ್​ ಅಥವಾ ಯಾವುದೇ ವಾಹನವನ್ನು ಡ್ರೈವ್ ಮಾಡಿ ತೋರಿಸಬೇಕು. ಲಿಖಿತ ಪರೀಕ್ಷೆಯನ್ನೂ ಬರೆಯಬೇಕು. ಇದರಲ್ಲೇನಾದರೂ ಎಡವಟ್ಟು ಮಾಡಿದರೆ ಅಥವಾ ನಮ್ಮ ಡ್ರೈವಿಂಗ್ ಪರಿಪೂರ್ಣವಾಗಿಲ್ಲ ಎಂದು ಆರ್​ಟಿಒ ಅಧಿಕಾರಿಗಳಿಗೆ ಅನ್ನಿಸಿದರೆ ನಮಗೆ ಲೈಸೆನ್ಸ್ ಸಿಗೋದಿಲ್ಲ. ಮತ್ತೆ ಬನ್ನಿ ಎನ್ನುತ್ತಾರೆ. ಕೆಲವರು ಮೂರ್ಲಾಲ್ಕು, 10 ಪ್ರಯತ್ನಗಳಲ್ಲಿ ಪಾಸಾಗುವುದೂ ಉಂಟು. ಆದರೆ ಈ ಮಹಿಳೆ ಹಾಗಲ್ಲ, ಬರೋಬ್ಬರಿ 960 ಪ್ರಯತ್ನಗಳ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ.

ದಕ್ಷಿಣ ಕೊರಿಯಾದ ಈ ಮಹಿಳೆಯ ಹೆಸರು ಚಾ ಸಾ ಸೂನ್​. 2005ರಲ್ಲಿ ಈಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದೆಷ್ಟು ಸಲ ವಿಫಲಗೊಂಡರೂ, ಹಠ ಬಿಡದೆ ಕೊನೆಗೂ ಲೈಸೆನ್ಸ್ ಪಡೆದ ಅವರ ಕತೆ ಈಗ ರೆಡ್ಡಿಟ್​​ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಚಾ ಸಾ ಸೂನ್​ ಅವರು ಮೊಟ್ಟಮೊದಲು ಕಾರು ಲೈಸೆನ್ಸ್​ಗಾಗಿ ಡ್ರೈವಿಂಗ್ ಟೆಸ್ಟ್​ ಕೊಟ್ಟಿದ್ದು 2005ರಲ್ಲಿ. ಆದರೆ ಮೊದಲ ಪ್ರಯತ್ನದಲ್ಲಿ ವಿಫಲರಾದರು.

ಹೀಗೆ ದಿನಬಿಟ್ಟು ದಿನ ಚಾಲನಾ ಪರೀಕ್ಷೆಗೆ ಹಾಜರಾದರು. ವಾರದಲ್ಲಿ ಐದು ದಿನ ಇದನ್ನೇ ಮಾಡಿದ್ದರು. ಬರುಬರುತ್ತ ವಾರದಲ್ಲಿ ಎರಡು ದಿನ ಟೆಸ್ಟ್​ಗೆ ಹಾಜರಾಗಲು ಶುರು ಮಾಡಿದರು. ಮೂರು ವರ್ಷ ಹೀಗೇ ಮಾಡಿದರು. ಅವರು ಚಾಲನಾ ಟೆಸ್ಟ್​ ಮತ್ತು ಲಿಖಿತ ಪರೀಕ್ಷೆ ಎರಡರಲ್ಲೂ ವಿಫಲರಾಗುತ್ತಿದ್ದರು. ಅಥವಾ ಒಂದರಲ್ಲಿ ಪಾಸ್ ಆದರೆ ಇನ್ನೊಂದರಲ್ಲಿ ಅನುತ್ತೀರ್ಣರಾಗುತ್ತಿದ್ದರು. ಕೊನೆಗೂ 2010ರಲ್ಲಿ ಅವರು ಡ್ರೈವಿಂಗ್​ ಟೆಸ್ಟ್​ನಲ್ಲಿ ಪಾಸ್​ ಆದರು. ಈ 960 ಟೆಸ್ಟ್​ನಲ್ಲಿ ಅವರು ಲಿಖಿತ ಪರೀಕ್ಷೆ ಬರೆದಿದ್ದು 860 ಬಾರಿ ಎನ್ನಲಾಗಿದೆ. ಇಷ್ಟೆಲ್ಲ ಆಗಿ ಚಾ ಸಾ ಸೂನ್ ಅವರು ಚಾಲನಾ ಪರವಾನಗಿ ಪಡೆದಾಗ ಅವರ ವಯಸ್ಸು 69.

ಇದನ್ನೂ ಓದಿ: Selfiee Twitter Review: ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ಅಭಿನಯದ ʻಸೆಲ್ಫಿʼ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ: ಇಲ್ಲಿದೆ ಟ್ವೀಟರ್‌ ವಿಮರ್ಶೆ

2010ರಲ್ಲಿ ಚಾ ಸಾ ಸೂನ್​ ಲೈಸೆನ್ಸ್ ಪಡೆದಾಗ, ಆಕೆಯ ಚಾಲನಾ ಮಾರ್ಗದರ್ಶಕ ಕೂಡ ಪ್ರತಿಕ್ರಿಯೆ ನೀಡಿದ್ದರು. ಚಾ ಸಾ ಸೂನ್​ ಪರವಾನಗಿ ಪಡೆಯುತ್ತಿದ್ದಂತೆ ನಮಗೆಲ್ಲ ಸಿಕ್ಕಾಪಟೆ ಖುಷಿಯಾಗಿತ್ತು. ಓಡಿಹೋಗಿ ಅವರನ್ನು ತಬ್ಬಿಕೊಂಡೆವು. ಪದೇಪದೆ ಡ್ರೈವಿಂಗ್ ಟೆಸ್ಟ್​ನಲ್ಲಿ ವಿಫಲರಾಗುತ್ತಿದ್ದರೂ, ಹಠ ಬಿಡದೆ ಪ್ರಯತ್ನಿಸಿದರು. ಪ್ರಯತ್ನವನ್ನೇ ಬಿಡಿ ಎಂದು ಅವರಿಗೆ ಹೇಳುವ ಧೈರ್ಯ ನಮಗೆ ಇರಲಿಲ್ಲ. ಕೊನೆಗೂ ಪ್ರಯತ್ನ ಫಲಿಸಿತು ಎಂದು ಅವರು ಹೇಳಿದ್ದರು. ದಕ್ಷಿಣ ಕೊರಿಯಾದಲ್ಲಂತೂ ಚಾ ಸಾ ಸೂನ್​ ಸೆಲೆಬ್ರಿಟಿ ಆಗಿಹೋಗಿದ್ದರು. ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಕಂಪನಿ ಹುಂಡಾಯಿ, ಚಾ ಸಾ ಸೂನ್​ರಿಗೆ ಒಂದು ಕಾರನ್ನು ಕೂಡ ಉಡುಗೊರೆಯನ್ನಾಗಿ ಕೊಟ್ಟಿತ್ತು. ಇದೀಗ ರೆಡ್ಡಿಟ್​ನಲ್ಲಿ ವೈರಲ್ ಆದ ಸ್ಟೋರಿ ನೋಡಿ, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮಹಿಳೆಯ ನಿಷ್ಠೆ ಬಗ್ಗೆ ಖುಷಿಯಿದೆ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version