ಬೆಂಗಳೂರು: ಮದುವೆಯೆಂದರೆ ಸಂಭ್ರಮ. ಎರಡು ಕುಟುಂಬಗಳು ಕೂಡಿ ಮಾಡುವ ಮದುವೆಯಲ್ಲಿ ಎಷ್ಟೋ ನೆನಪುಗಳು ಸೃಷ್ಟಿಯಾಗಿಬಿಡುತ್ತವೆ. ವಧು-ವರರು ನವ ಜೀವನಕ್ಕೆ ಕಾಲಿಡುವ ಆ ದಿನ ಅವರ ಪಾಲಿಗೆ ಅತ್ಯಂತ ಮುಖ್ಯವಾಗಿರುತ್ತದೆ. ಆದರೆ ಇಲ್ಲೊಬ್ಬ ಮಹಿಳೆಗೆ ಆಕೆಯ ಮದುವೆಯ ದಿನದಂದೇ ದಾಂಪತ್ಯ ಮುರಿದುಬಿದ್ದಿದೆ. ಒಂದು ಕೇಕ್‌ನಿಂದಾಗಿ ದಾಂಪತ್ಯಕ್ಕೆ ಅಂತ್ಯ ಹೇಳಬೇಕಾಗಿ ಬಂದ ವಿಚಾರ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿದ್ದು, ಭಾರೀ ವೈರಲ್ (Viral News) ಆಗಿದೆ.
ಅವರಿಬ್ಬರು ಪ್ರೀತಿಸಿ ಮದುವೆಯಾಗಲು ಹೊರಟವರು. 2020ರಲ್ಲಿ ಹುಡುಗ ಆಕೆಯ ಪ್ರೀತಿಯ ಹುಡುಗಿಗೆ ಪ್ರಪೋಸ್ ಮಾಡಿದ್ದ. ಅದಕ್ಕೆ ಆಕೆ ಒಪ್ಪಿಕೊಂಡಿದ್ದಳು ಕೂಡ. ಕಳೆದ ವರ್ಷ ಕ್ರಿಸ್‌ಮಸ್‌ಗೂ ಮೊದಲು ಅವರಿಬ್ಬರ ಮದುವೆ ನಿಶ್ಚಯವಾಗಿತ್ತು. ಎರಡೂ ಕುಟುಂಗಳು ಒಟ್ಟಾಗಿ ಮದುವೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದವು. ಆದರೆ ವಧುವಾಗಬೇಕಿದ್ದ ಯುವತಿ ತನ್ನ ಪ್ರಿಯತಮನ ಬಳಿ ಒಂದು ಮನವಿ ಮಾಡಿಕೊಂಡಿದ್ದಳು. ನನಗೆ ಕೇಕ್‌ನಿಂದ ಮುಖದಲ್ಲಿ ಅಲರ್ಜಿ ಆಗುತ್ತದೆಯಾದ್ದರಿಂದ ದಯವಿಟ್ಟು ಮದುವೆಯ ದಿನದಂದು ನನ್ನ ಮುಖಕ್ಕೆ ಕೇಕ್ ಹಚ್ಚಬೇಡ ಎಂದು ಕೇಳಿಕೊಂಡಿದ್ದಳು. ಅದಕ್ಕೆ ಆತ ಒಪ್ಪಿಕೊಂಡಿದ್ದ ಕೂಡ.
ಇದನ್ನೂ ಓದಿ: Viral Video : ಕಾರಿನ ಮೇಲೆ ಸ್ಟಂಟ್ ಮಾಡಿದವನಿಗೆ ಬಿತ್ತು ಭಾರೀ ದಂಡ!
ಮದುವೆಯ ದಿನದಂದು ಮದುವೆಯಾದ ತಕ್ಷಣ ಕೇಕ್ ಕತ್ತರಿಸಿದ ನಂತರ ಆತ ಹೆಂಡತಿಯನ್ನು ಎಳೆದುಕೊಂಡು ಹೋಗಿ ಕೇಕ್‌ನೊಳಗೆ ಪೂರ್ತಿ ಮುಖವನ್ನು ಅದ್ದಿದ್ದಾನೆ. ಇದರಿಂದಾಗಿ ಆಕೆ ಸಿಟ್ಟಾಗಿದ್ದಾಳೆ. ಈ ದಾಂಪತ್ಯ ಮುರಿದುಬೀಳಬೇಕು ಎಂದು ಅದೇ ಕ್ಷಣದಲ್ಲಿ ನಿರ್ಧರಿಸಿದ್ದಾಳೆ. ಅದರಂತೆ ಆಕೆ ಮದುವೆಯ ಮಾರನೇ ದಿನದಂದೇ ತನ್ನ ಪತಿಗೆ ವಿಚ್ಛೇದನದ ಅರ್ಜಿ ಕಳುಹಿಸಿಕೊಟ್ಟಿದ್ದಾಳೆ.
ಈ ರೀತಿ ಮಾಡುವುದಕ್ಕೂ ಮೊದಲು ಎರಡೂ ಕುಟುಂಬಗಳು ಆಕೆಯನ್ನು ಬೇಡಿಕೊಂಡಿವೆ. ಒಂದೇ ಕಾರಣಕ್ಕೆ ದಾಂಪತ್ಯವನ್ನು ಮುರಿದುಕೊಳ್ಳುವುದು ಬೇಡ ಎಂದು ಬುದ್ಧಿ ಮಾತುಗಳನ್ನು ಹೇಳಲು ಯತ್ನಿಸಿದ್ದಾರೆ. ಆದರೆ ಆಕೆ ಯಾವ ಮಾತನ್ನೂ ಕೇಳಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳದ, ನನ್ನ ಮಾತಿಗೆ ಬೆಲೆ ಕೊಡದ ಪತಿ ನನಗೆ ಬೇಡ ಎಂದು ಹೇಳಿ ವಿಚ್ಛೇದನ ಪಡೆದುಕೊಂಡಿದ್ದಾಳೆ.
ಇದನ್ನೂ ಓದಿ: Viral Video: ಮಹಿಳೆಯನ್ನು ನದಿಗೆ ಎಳೆದೊಯ್ದು, ಸಜೀವವಾಗಿ ತಿಂದ ಮೊಸಳೆ!
ಈ ವಿಚ್ಛೇದನದ ಕಥೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದೆ. ಆ ಇಬ್ಬರ ಪ್ರೀತಿ ಅದೆಷ್ಟರ ಮಟ್ಟಿಗೆ ಗಟ್ಟಿಯಿತ್ತು ಎನ್ನುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಹಲವರು ವರನದು ತಪ್ಪು ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಚೂರೂ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪದ ಹುಡುಗಿಯದ್ದೇ ದೊಡ್ಡ ತಪ್ಪು ಎಂದು ವಾದಿಸುತ್ತಿದ್ದಾರೆ.