Site icon Vistara News

Viral News: 100 ಗಂಟೆಗಳ ಕಾಲ ಅಡುಗೆ ಮಾಡುತ್ತಲೇ ನಿಂತ ಮಹಿಳೆ; ಭಾರತೀಯರ ದಾಖಲೆಯೂ ಉಡೀಸ್‌

#image_title

ಬೆಂಗಳೂರು: ದಾಖಲೆಗಳನ್ನು ಮಾಡಬೇಕು ಎನ್ನುವುದು ಹಲವರ ಹಂಬಲ. ಅದಕ್ಕೆಂದೇ ಎಂಥೆಂತದ್ದೋ ಪ್ರಯತ್ನಗಳನ್ನು ಮಾಡಿ ಸೈ ಎನಿಸಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ನೈಜೀರಿಯಾದಲ್ಲಿ ಮಹಿಳೆಯೊಬ್ಬರು ಅಡುಗೆ ಮಾಡುವ ಮೂಲಕವೇ ದಾಖಲೆಗೆ ಯತ್ನಿಸಿದ್ದಾರೆ. ಅವರ ಈ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ (Viral News) ಆಗಿದೆ.

ನೈಜೀರಿಯಾದ ಶೆಫ್‌ ಆಗಿರುವ ಹಿಲ್ದಾ ಬಾಕಿ ಅವರು ಇಂಥದ್ದೊಂದು ಪ್ರಯತ್ನದಲ್ಲಿರುವ ಮಹಿಳೆ. ಅವರು ಮೇ 11ರ ಸಂಜೆ 4 ಗಂಟೆಯಿಂದ ಅಡುಗೆ ಮಾಡಲು ಆರಂಭಿಸಿದ್ದು, ಬರೋಬ್ಬರಿ 100 ಗಂಟೆಗಳ ಕಾಲ ಅಡುಗೆಯನ್ನು ಮಾಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ವಿಧದ ಅಡುಗೆಗಳನ್ನು ಈ ಅವಧಿಯಲ್ಲಿ ಮಾಡಿದ್ದಾರೆ.

ಇದನ್ನೂ ಓದಿ: ಕಬಾಬ್​ ಕೆಟ್ಟದಾಗಿತ್ತು ಎಂದು ಅಡುಗೆಯವನನ್ನೇ ಹತ್ಯೆ ಮಾಡಿದ ದುಷ್ಕರ್ಮಿಗಳು; ಹಣ ತರಲೆಂದು ಹೋದವ ಹೆಣವಾಗಿದ್ದ

ಈ ಹಿಂದೆ ಭಾರತದ ಲತಾ ತಂಡನ್‌ ಅವರು 2019ರಲ್ಲಿ ಇದೇ ರೀತಿಯಲ್ಲಿ ಪ್ರಯತ್ನ ಮಾಡಿ ಒಟ್ಟು 87 ಗಂಟೆ 46 ನಿಮಿಷಗಳ ಕಾಲ ಅಡುಗೆ ಮಾಡಿದ್ದರು. ಅದು ಈವರೆಗಿನ ದಾಖಲೆಯಾಗಿತ್ತು. ಇದೀಗ ಹಿಲ್ದಾ ಅವರು ಆ ದಾಖಲೆಯನ್ನು ಮುರಿದು ಮುಂದೆ ಸಾಗಿದ್ದಾರೆ.


ಈ ವಿಶೇಷ ಕುಕ್ಕಥಾನ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ. ಅನೇಕ ಗಣ್ಯರು, ಸೆಲೆಬ್ರಿಟಿಗಳು ಕೂಡ ಹಿಲ್ದಾ ಅಡುಗೆ ಮಾಡುವ ಸ್ಥಳಕ್ಕೆ ಬಂದು ಆಕೆಗೆ ಹುರಿದುಂಬಿಸಿ ಹೋಗಿದ್ದಾರೆ. ಹಾಗೆಯೇ ಬಿಡುವು ಕೊಡದೆ ಅಡುಗೆ ಮಾಡುವ ಹಿಲ್ದಾ ಅವರ ಆರೋಗ್ಯ ತಪಾಸಣೆ ಮಾಡುವುದಕ್ಕೆಂದೇ ವೈದ್ಯರೊಬ್ಬರನ್ನೂ ನಿಯೋಜನೆ ಮಾಡಲಾಗಿದೆ. ಹಿಲ್ದಾ ಅಡುಗೆ ಮಾಡುವ ಹಾಗೂ ಅಲ್ಲಿ ನೆರೆದಿರುವ ಜನರು ಆಕೆಗೆ ಹುರಿದುಂಬಿಸುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಹಿಲ್ದಾ ಅವರು ಈ ಪ್ರಯತ್ನವನ್ನು ಗಮನಿಸಿರುವುದಾಗಿ ಗಿನ್ನೆಸ್‌ ರೆಕಾರ್ಡ್‌ ಸಂಸ್ಥೆ ಹೇಳಿದೆ. ಎಲ್ಲ ಸಾಕ್ಷಿಗಳನ್ನು ಪರಿಶೀಲನೆ ನಡೆಸಿದ ನಂತರ ಆಕೆಗೆ ದಾಖಲೆ ನೀಡುವುದಾಗಿ ತಿಳಿಸಿದೆ.

ಇದನ್ನೂ ಓದಿ: Edible oil price : ಅಡುಗೆ ಎಣ್ಣೆ ದರ ಶೀಘ್ರ 6% ಇಳಿಕೆ ಸಂಭವ

ಈ ಬಗ್ಗೆ ಹಿಲ್ದಾ ಕೂಡ ಮಾತನಾಡಿದ್ದು, ಈ ದಾಖಲೆಗೆಂದೇ ಐದು ವರ್ಷಗಳ ಕಾಲ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ದೇಹದ ತೂಕವನ್ನು ಇಳಿಸಿಕೊಂಡು, ದೈಹಿಕ ದೃಢತೆ ತಂದುಕೊಂಡು ಈ ಯತ್ನಕ್ಕೆ ಮುಂದಾಗಿದ್ದಾಗಿ ತಿಳಿಸಿದ್ದಾರೆ.

Exit mobile version