Site icon Vistara News

Viral Video : ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಮಹಿಳೆ! ಪೊಲೀಸ್‌ ಪೇದೆಯಿಂದಾಗಿ ಉಳಿಯಿತು ಜೀವ

women train accident

ರಾಂಚಿ: ಚಲಿಸುತ್ತಿರುವ ರೈಲನ್ನು ಹತ್ತಲು ಹೋಗುವುದು ಅಥವಾ ಚಲಿಸುವ ರೈಲಿನಿಂದ ಇಳಿಯಲು ಹೋಗಿ ಅಪಘಾತ ಮಾಡಿಕೊಳ್ಳುವ ಎಷ್ಟೋ ವಿಡಿಯೊಗಳನ್ನು ನಾವು ನೋಡಿದ್ದೇವೆ. ಈ ರೀತಿ ಮಾಡಬೇಡಿ ಎಂದು ಅದೆಷ್ಟೇ ಬಾರಿ ಹೇಳಿದರೂ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಅದೇ ರೀತಿಯಲ್ಲಿ ಮಹಿಳೆಯೊಬ್ಬಳು ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಬಿದ್ದಿದ್ದು, ಪೊಲೀಸ್‌ ಪೇದೆಯ ಸಮಯಪ್ರಜ್ಞೆಯಿಂದ ಆಕೆ ಬದುಕುಳಿದಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಜಾರ್ಖಂಡ್‌ನ ಬೊಕರೊ ರೈಲ್ವೆ ನಿಲ್ದಾಣದಲ್ಲಿ ಇಂತಹ ಘಟನೆ ನಡೆದಿದೆ. ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ರೈಲು ಆಗಷ್ಟೇ ಹೊರಟಿತ್ತು. ಅದೇ ರೈಲನ್ನು ಹತ್ತಬೇಕೆಂದು ಓಡಿ ಬಂದ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲನ್ನೇ ಹತ್ತಲು ಮುಂದಾಗಿದ್ದಾರೆ. ನಿಯಂತ್ರಣ ಸಿಗದೆ ಅಲ್ಲೇ ಕೆಳಗೆ ಬಿದ್ದಿದ್ದಾರೆ. ಅಷ್ಟರಲ್ಲಾಗಲೇ ಅನಾಹುತವಾಗುವ ಮುನ್ಸೂಚನೆ ಸಿಕ್ಕಿದ್ದ ರೈಲ್ವೆ ಪೊಲೀಸ್‌ ಇಲಾಖೆಯ ಮುಖ್ಯ ಪೇದೆ ಸುಭಾಷ್‌ ಕುಮಾರ್‌ ಮಹಿಳೆಯ ಹಿಂದೆಯೇ ಓಡಿಬಂದಿದ್ದಾರೆ.
ಮಹಿಳೆ ಬಿದ್ದ ತಕ್ಷಣ ಆಕೆ ರೈಲಿನ ಅಡಿಗೆ ಸಿಲುಕದಂತೆ ಸುಭಾಷ್‌ ಆಕೆಯನ್ನು ಹಿಂದಕ್ಕೆ ಎಳೆದಿದ್ದಾರೆ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿ ಹೋಗಿದೆ. ಈ ಎಲ್ಲ ದೃಶ್ಯಗಳು ರೈಲ್ವೆ ನಿಲ್ದಾಣದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Alia Bhatt Viral Video : ಫೋಟೊಗ್ರಾಫರ್‌ ಚಪ್ಪಲಿ ಆಲಿಯಾ ಭಟ್‌ ಕೈಯಲ್ಲಿ!
ಈ ವಿಡಿಯೊವನ್ನು ರೈಲ್ವೆ ಪೊಲೀಸ್‌ ಇಲಾಖೆಯು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರ ಬಗ್ಗೆ ಮಾಹಿತಿ ನೀಡಿದೆ. ಹಾಗೆಯೇ “ಚಲಿಸುವ ರೈಲನ್ನು ಹತ್ತುವುದು ಮತ್ತು ಅದರಿಂದ ಇಳಿಯುವುದು ದೊಡ್ಡ ತಪ್ಪು. ರೈಲು ಸಂಪೂರ್ಣವಾಗಿ ನಿಲ್ಲುವುದಕ್ಕೆ ಕಾದು ಆಮೇಲೆ ಅದನ್ನು ಹತ್ತುವುದು ಅಥವಾ ಇಳಿಯುವುದು ಮಾಡಿ” ಎಂದು ಕ್ಯಾಪ್ಶನ್‌ನಲ್ಲಿ ಹೇಳಿದೆ.


ಈ ವಿಡಿಯೊವನ್ನು ಜುಲೈ 13ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಸಾವಿರಾರು ಮಂದಿ ವಿಡಿಯೊವನ್ನು ನೋಡಿದ್ದಾರೆ. ಏಳು ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ವಿಡಿಯೊವನ್ನು ರಿಟ್ವೀಟ್‌ ಮಾಡಿದ್ದಾರೆ. ನೂರಾರು ಮಂದಿ ವಿಡಿಯೊ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ. “ಈ ರೀತಿಯ ಘಟನೆ ಹಲವೆಡೆ ನಡೆಯುತ್ತಲೇ ಇರುತ್ತದೆ. ಆ ಮಹಿಳೆಗೆ ದೇವರ ಆಶೀರ್ವಾದ ಇದ್ದಿದ್ದರಿಂದ ಪೊಲೀಸರು ಆಕೆಯನ್ನು ಕಾಪಾಡುವಂತಾಯಿತು” ಎಂದು ಕೆಲವರು ಹೇಳಿದ್ದಾರೆ. ಈ ರೀತಿ ಮಾಡಿಕೊಂಡು ಕೈ ಕಾಲು ಕಳೆದುಕೊಂಡವರ ಬಗ್ಗೆಯೂ ಕೆಲವು ಕಾಮೆಂಟ್‌ಗಳಲ್ಲಿ ಪ್ರಸ್ತಾಪ ಮಾಡಲಾಗಿದೆ.

Exit mobile version