ಬೆಂಗಳೂರು: ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಅವರ ಹವಾ ಇನ್ನೂ ನಿಂತಿಲ್ಲ. ಹಲವು ಪ್ರತಿಭೆಗಳು ಚಂದ್ರು ಅವರ ಬಗ್ಗೆ ರೀಲ್ಸ್ ಕೂಡ ಹಂಚಿಕೊಂಡಾಯ್ತು. ಆದರೆ ಇದೀಗ ಸ್ವಲ್ಪ ದಿನಗಳಿಂದ ʻಬೆಳ್ಳುಳ್ಳಿ ಕಬಾಬ್ ಚಂದ್ರುʼ ಹಾಗೂ ಯೋಗರಾಜ್ ಭಟ್ ಅವರ ಕುರಿತಾದ ಮೀಮ್‌ಗಳು ವೈರಲ್ ಆಗುತ್ತಿವೆ. ‘ಕರಿಮಣಿ ಮಾಲೀಕ’ ರೀಲ್ಸ್ ಜತೆಗೆ ‘ರಾಹುಲ್ಲಾ’ ಸೇರಿಸಿ ಒಂದಷ್ಟು ವಿಡಿಯೋಗಳು ವೈರಲ್ ಆಯಿತು. ಚಂದ್ರು- ವಿಕಾಸ್ ಒಟ್ಟಿಗೆ ಸೇರಿ ವಿಡಿಯೋ ಮಾಡಿದ್ದು ಆಯಿತು. ಚಂದ್ರು ನೋಡಲು ಸ್ವಲ್ಪ ಸಿನಿಮಾ ನಿರ್ದೇಶಕ ಯೋಗರಾಜ ಭಟ್ರನ್ನು ಹೋಲುತ್ತಾರೆ. ಇದೇ ಕಾರಣಕ್ಕೆ ಕೆಲ ಮೀಮ್ ಪೇಜ್‌ಗಳಲ್ಲಿ ಇಬ್ಬರ ಫೋಟೊಗಳನ್ನು ಕೊಲಾಜ್ ಮಾಡಿ ಅಣ್ಣ-ತಮ್ಮ ಎಂದು ಬರೆಯಲಾಗುತ್ತಿದೆ. ಈಗ ಇದೇ ಕಾರಣ ಇಟ್ಟುಕೊಂಡು ಭಟ್ರು ತಮ್ಮ ಮುಂದಿನ ಕರಟಕ-ದಮನಕʼ ಸಿನಿ ಪ್ರಚಾರಕ್ಕೆ ಚಂದ್ರು ಜತೆ ಕೈ ಜೋಡಿಸಿದ್ದಾರೆ.
ಕೆಲವು ದಿನಗಳಿಂದ ಟ್ರೋಲ್ ಹಾಗೂ ಮೀಮ್ ಪೇಜ್‌ಗಳಲ್ಲಿ ಯೋಗರಾಜ್ ಭಟ್ ಹಾಗೂ ಚಂದ್ರು ಅವರನ್ನು ಕೊಲಾಜ್ ಮಾಡಿ ಅಣ್ಣ-ತಮ್ಮ ಎಂದು ಬರೆಯಲಾಗುತ್ತಿದೆ. ‘ಒಬ್ರು ಸಿನಿಮಾ ಭಟ್ರು, ಇನ್ನೊಬ್ರು ಅಡುಗೆ ಭಟ್ರು, ಒಬ್ರು ಗಾಳಿಪಟ, ಇನ್ನೊಬ್ರು ಚಟ ಪಟʼ ಎಂದು ಪೋಸ್ಟ್ ಆಗಿದ್ದ ಮೀಮ್ ಫೋಟೊ ಸಖತ್ ವೈರಲ್ ಆಗಿತ್ತು. ಇದಾದ ಮೇಲೆ ಇದೀಗ ಯೋಗರಾಜ್ ಭಟ್ ಅವರು ಚಂದ್ರು ಅವರ ಜತೆ ಕೈ ಜೋಡಿಸಿದ್ದಾರೆ. ತಮ್ಮ ಮುಂದಿನ ಕರಟಕ-ದಮನಕ ಸಿನಿ ಪ್ರಚಾರಕ್ಕೆ ಚಂದ್ರು ಅವರನ್ನು ಬಳಸಿಕೊಂಡಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಇಬ್ಬರೂ ಸೇರಿ ಒಂದು ನಾನ್‌ವೆಜ್ ರೆಸಿಪಿ ವಿಡಿಯೋ ಮಾಡಿದ್ದಾರೆ. ಅದರ ಪ್ರೋಮೊವನ್ನು ಯೋಗರಾಜ್ ಭಟ್ ಹಂಚಿಕೊಂಡಿದ್ದಾರೆ.
ನಾವಿಬ್ಬರು ಅಣ್ಣ ತಮ್ಮ, ತಮ್ಮ ಅಣ್ಣ
ಇದೀಗ ಈ ಪ್ರೋಮೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. “ಹಂಗೂ ಹಿಂಗೂ ಹೆಂಗೋ ಇದ್ದೋ, ಹಿಂಗಾಗೋದ್ವಿ ನೋಡೋ ಅಣ್ತಮ್ಮ ಎಂದು ಭಟ್ರು ಹಾಡು ಹಾಡು ಶುರು ಮಾಡಿದರು. ನಾವಿಬ್ಬರು ಅಣ್ಣ ತಮ್ಮ, ತಮ್ಮ ಅಣ್ಣ ಎಂದು ಎಲ್ಲ ಕಡೆ ಚರ್ಚೆ ನಡೀತಿದೆ. ನಾವು ಯಾವ ತರ ಅಣ್ಣ ತಮ್ಮ?ಹೌದಾ? ಅಲ್ಲವಾ?ಎಲ್ಲವನ್ನು ನಿಮಗೆ ವಿವರಿಸಿ ಹೇಳ್ತೀವಿ. ಇನ್ನೊಬ್ಬರು ಪಂಚಾಯ್ತಿಗೆ ದೊಡ್ಡವರು ಬರ್ತಾರೆʼʼಎಂದಿದ್ದಾರೆ. ಇನ್ನು ಚಂದ್ರು ಕೂಡ ಮಾತನಾಡಿ ʻʻಹೌದಣ್ಣ. ಬರ್ತಾರೆ..ಒನ್ ಮೋರ್ ಒನ್ ಮೋರ್ ಅಂತ ಬರ್ತಾರೆ..ಹೇಳ್ತಾರೆ. ಕೇಳ್ತಾ ಇದ್ದರೆ ಆಮೇಲೆ ಗೊತ್ತಾಗತ್ತೆ. ಯಾರು ಅಣ್ಣ..ಯಾರು ತಮ್ಮ ಎಂದುʼʼಹೇಳಿದ್ದಾರೆ. ಭಟ್ರು ಕೂಡ ಕೊನೆಯಲ್ಲಿ ರೆಡಿ ಮಾಡ್ಕೊಳ್ಳೋ ರಾವುಲ್ಲಾ…ʼʼಎಂದಿದ್ದಾರೆ.
ಈ ತಮಾಷೆಯ ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕರಟಕ ದಮನಕ + ಬೆಳ್ಳುಳ್ಳಿ ಕಬಾಬ್’ ಅಣ್ಣತಮ್ಮಂದಿರ ಕಹಾನಿಗೆ ಕಾಯ್ತಾ ಇದ್ದಾರೆ ಜನ.
ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ
ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ ಬರಲಿದೆ.. ʻಕರಟಕ ದಮನಕʼ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಫೋಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ.ವಿ ಹರಿಕೃಷ್ಣ ಸಂಗೀತ ಸಂಯೋಜನೆಯ 7 ಹಾಡುಗಳು ಚಿತ್ರದಲ್ಲಿದೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.