ಚೆನ್ನೈ: ತಮಿಳು ಹಾಸ್ಯ ನಟ ಯೋಗಿ ಬಾಬು ಎಲ್ಲರಿಗೂ ಗೊತ್ತಿರುವವರು. ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು ಅಭಿಮಾನಿಗಳನ್ನು ನಕ್ಕು ನಗಿಸುವಲ್ಲಿ ಫೇಮಸ್. ಯೋಗಿ ಬಾಬು ಸದ್ಯ ರಜನಿಕಾಂತ್ ಅವರೊಂದಿಗೆ ʼಜೈಲರ್ʼ ಸಿನಿಮಾದಲ್ಲಿಯೂ ನಟಿಸಿದ್ದು, ಆ ಸಿನಿಮಾ ಇದೇ ಆಗಸ್ಟ್ 10ರಂದು ತೆರೆ ಕಾಣುತ್ತಿದೆ. ಹೀಗಿರುವಾಗ ಅವರು ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದು, ಅಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ (Viral Video) ಕಾರಣವಾಗಿದೆ.
ಯೋಗಿ ಬಾಬು ಅವರು ಮುರುಗನ್ ದೇವರನ್ನು ನಂಬುತ್ತಾರೆ. ಅವರು ಆಗಾಗ ಮುರುಗನ್ ದೇವರ ದರ್ಶನ ಮಾಡುವುದು ಸುದ್ದಿಯಾಗುತ್ತಿರುತ್ತದೆ ಕೂಡ. ಅದೇ ರೀತಿಯಲ್ಲಿ ಯೋಗಿ ಬಾಬು ಅವರು ಇತ್ತೀಚೆಗೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿರುವ ಸಿರುವಪುರಿ ಮುರುಗನ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ದೇವರ ದರ್ಶನ ಪಡೆದು ಅವರ ಅಭಿಮಾನಿಗಳೊಂದಿಗೆ ಸಂತಸದಿಂದ ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಅಮೆರಿಕದ ಹಾದಿ ಬೀದಿಯಲ್ಲಿ ‘ಮುಕ್ಕಾಲ ಮುಕ್ಕಾಬುಲ್ಲಾ’ ಹಾಡಿಗೆ ಬಿಂದಾಸ್ ಸ್ಟೆಪ್ಸ್ ಹಾಕಿದ ಜಡೇಜಾ
ನಿಂಬೆ ಹಣ್ಣು ಮತ್ತು ಹೂವಿನ ಹಾರಗಳನ್ನು ಅಲ್ಲಿ ನೆರೆದಿದ್ದ ಯೋಗಿ ಬಾಬು ಅಭಿಮಾನಿಗಳು ಅವರಿಗೆ ಪ್ರೀತಿಯಿಂದ ಹಾಕಿದ್ದಾರೆ ಕೂಡ. ಹಾರಗಳನ್ನು ಹಾಕಿಕೊಂಡಿದ್ದ ಅವರು ಅಭಿಮಾನಿಯೊಬ್ಬರ ಜತೆ ಫೋಟೋಗೆ ಫೋಸ್ ಕೊಡುತ್ತಾರೆ. ಅದಾದ ಮೇಲೆ ಅಲ್ಲೇ ಹತ್ತಿರದಲ್ಲಿ ನಿಂತಿದ್ದ ದೇಗುಲದ ಪೂಜಾರಿಯವರನ್ನು ಮಾತನಾಡಿಸಲು ಮುಂದೆ ಸಾಗುತ್ತಾರೆ. ಅವರ ಬಳಿ ಹೋದವರೇ ಆತ್ಮೀಯವಾಗಿ ಶೇಕ್ ಹ್ಯಾಂಡ್ ಮಾಡುವುದಕ್ಕೆಂದು ಕೈಯನ್ನು ಮುಂದೆ ಚಾಚುತ್ತಾರೆ. ಆದರೆ ಅದಕ್ಕೆ ಪ್ರತಿಯಾಗಿ ಪೂಜಾರಿಯವರು ಕೈ ಚಾಚದೆ, ಹಾಗೆಯೇ ನಿಂತು ಯೋಗಿ ಬಾಬು ಅವರನ್ನು ಮಾತನಾಡಿಸುತ್ತಾರೆ. ಅವರಿಬ್ಬರು ಕೆಲ ಕಾಲ ಮಾತನಾಡುವುದು ವಿಡಿಯೊದಲ್ಲಿ ಸೆರೆಯಾಗಿದೆ.
தீண்டாமை ஒரு பாவச்செயல்.😷 pic.twitter.com/LYnz0e5sZE
— ரத்தினவேல் மரைக்காயர் (@Pothumda) August 6, 2023
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ. ಯೋಗಿ ಬಾಬು ಅವರಿಗೆ ಪೂಜಾರಿಯವರು ಶೇಕ್ ಹ್ಯಾಂಡ್ ಮಾಡದಿರುವುದು ಅನೇಕರ ವಿರೋಧಕ್ಕೆ ಕಾರಣವಾಗಿದೆ. ಹೆಮ್ಮೆಯ ನಟರೊಬ್ಬರು ತಾವಾಗಿಯೇ ಮುಂದೆ ಬಂದು ಮಾತನಾಡಿಸಿದಾಗ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದ್ದಾರೆ. ಇದು ನಟನಿಗೆ ಮಾಡಿದ ಅವಮಾನ ಎಂದೂ ಕೆಲವರು ದೂರಲಾರಂಭಿಸಿದ್ದಾರೆ.
ಇದನ್ನೂ ಓದಿ: Viral News : ರೈಲಿನಲ್ಲಿ ಮಲಗಿದ ವ್ಯಕ್ತಿಯ ಮೈ ಮೇಲೆಲ್ಲ ಜಿರಲೆಗಳು! ರೈಲ್ವೆ ಇಲಾಖೆ ಹೇಳಿದ್ದೇನು?
ಆದರೆ ಪೂಜಾರಿ ಅವರು ಮಾಡಿದ್ದು ಸರಿ ಎಂದೂ ಕೆಲವರು ವಾದಿಸುತ್ತಿದ್ದಾರೆ. ಶೇಕ್ ಹ್ಯಾಂಡ್ ಕೊಡುವುದು ಹಿಂದೂ ಸಂಸ್ಕೃತಿಯಲ್ಲ. ಪೂಜಾರಿಯವರು ನಮ್ಮ ಸಂಸ್ಕೃತಿಯಂತೆ ಅವರಿಗೆ ಆಶೀರ್ವದಿಸಿ ಮಾತನಾಡಿಸಿದ್ದಾರೆ ಎಂದು ಕೆಲವರು ಪೂಜಾರಿಯವರ ಪರ ವಹಿಸಿಕೊಂಡಿದ್ದಾರೆ. ಹಾಗೆಯೇ ಕೆಲವರು ಇದೊಂದು ದೊಡ್ಡ ವಿಚಾರವಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲಿ ಸಣ್ಣದೊಂದು ತಪ್ಪು ತಿಳಿವಳಿಕೆಯಾಗಿದೆ. ಈ ಬಗ್ಗೆ ವಿವಾದ ಮಾಡುವುದು ತಪ್ಪು ಎನ್ನುವುದು ಕೆಲವರ ವಾದ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹಾಗಿದ್ದರೂ ಯೋಗಿ ಬಾಬು ಅವರು ಈ ಬಗ್ಗೆ ಯಾವುದೇ ಹೇಳಿಕೆಯನ್ನು ಕೊಡದೆ ಇದು ಸಹಜ ಎಂಬಂತೆ ಇರುವುದೂ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.